ಮೂಲವ್ಯಾಧಿಯ ನೋವು ಅದನ್ನು ಅನುಭವಿಸಿದವರಿಗೇ ಗೊತ್ತು. ಈ ರೋಗವು ಲಿಂಗಭೇದವಿಲ್ಲದೆ ಎಲ್ಲಾ ವಯೋಮಾನದವರನ್ನೂ ಕಾಡುತ್ತದೆ. ಗುದನಾಳ ಅಥವಾ ಗುದದ್ವಾರದಲ್ಲಿಯ ನರಗಳು ಬಾತುಕೊಂಡು ಮಲವಿಸರ್ಜನೆಗೆ ಕಷ್ಟವಾಗುವ ಸ್ಥಿತಿಯನ್ನು ಮೂಲವ್ಯಾಧಿ ಎಂದು ಕರೆಯಲಾಗುತ್ತದೆ. ಇದು ಅಪಾಯಕಾರಿ ಸ್ಥಿತಿಯೇನಲ್ಲ,ಆದರೆ ಕೆಲವು ಪ್ರಕರಣಗಳಲ್ಲಿ ಕಡೆಗಣಿಸಿದರೆ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.
ಮೂಲವ್ಯಾಧಿ ಸಾಮಾನ್ಯವಾಗಿ ನೋವನ್ನುಂಟು ಮಾಡುವುದಿಲ್ಲ ಮತ್ತು ಗುದದ್ವಾರದಿಂದ ರಕ್ತಸ್ರಾವ ಸಾಮಾನ್ಯವಾಗಿ ಇದರ ಏಕೈಕ ಲಕ್ಷಣವಾಗಿದೆ. ಈ ಕಾಯಿಲೆಯು ಹೆಚ್ಚಾಗಿ ಮಲವಿಸರ್ಜನೆಯ ಸಮಸ್ಯೆ ಇರುವವರಲ್ಲಿ ಕಾಣಿಸಿಕೊಳ್ಳುತ್ತದೆ. ಸೂಕ್ತವಲ್ಲದ ಆಹಾರ ಸೇವನೆ ಮತ್ತು ಕರುಳಿನ ಮೆಲೆ ಹೆಚ್ಚಿನ ಒತ್ತಡ ಮೂಲವ್ಯಾಧಿಗೆ ಕಾರಣವಾಗುತ್ತದೆ. ಹೀಗಾಗಿ ಸರಿಯಾದ ಆಹಾರವನ್ನು ಸೇವಿಸುವ ಮತ್ತು ಕರುಳುಗಳನ್ನು ಅರೋಗ್ಯಯುತವಾಗಿರಿಸುವ ಮೂಲಕ ಮೂಲವ್ಯಾಧಿ ಉಂಟಾಗುವುದನ್ನು ತಡೆಯಬಹುದು.
ವೈದ್ಯರು ಸಾಮಾನ್ಯವಾಗಿ ಹೆಚ್ಚು ನಾರನ್ನು ಒಳಗೊಂಡಿರುವ ಆಹಾರವನ್ನು ಸೇವಿಸುವಂತೆ ಮೂಲವ್ಯಾಧಿ ರೋಗಿಗಳಿಗೆ ಸೂಚಿಸುತ್ತಾರೆ. ನಾರು ಮಲವನ್ನು ಮೃದುವಾಗಿಸುತ್ತದೆ ಮತ್ತು ಅದು ಸುಲಭವಾಗಿ ದೇಹದಿಂದ ವಿಸರ್ಜನೆಯಾಗುವಲ್ಲಿ ನೆರವಾಗುತ್ತದೆ,ತನ್ಮೂಲಕ ಮೂಲವ್ಯಾಧಿಗೆ ಚಿಕಿತ್ಸೆಯನ್ನು ಸುಲಭವಾಗಿಸುತ್ತದೆ. ಮೂಲವ್ಯಾಧಿಯನ್ನು ತಡೆಯುವ ವಿಷಯದಲ್ಲಿಯೂ ಇದೇ ನಿಯಮ ಅನ್ವಯವಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ನಾರನ್ನು ಒಳಗೊಂಡಿರುವ ಆಹಾರವು ಕರುಳಿನ ಚಲನವಲನವನ್ನು ಕ್ರಮಬದ್ಧಗೊಳಿಸುತ್ತದೆ ಮತ್ತು ಇದು ಮೂಲವ್ಯಾಧಿಗೆ ಗುರಿಯಾಗುವ ಅಪಾಯವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇಂತಹ ಕೆಲವು ಆಹಾರಗಳ ಕುರಿತು ಮಾಹಿತಿಯಿಲ್ಲಿದೆ….
ದ್ವಿದಳ ಧಾನ್ಯಗಳು
ದ್ವಿದಳ ಧಾನ್ಯಗಳು ಸಮೃದ್ಧ ನಾರನ್ನು ಒಳಗೊಂಡಿರುತ್ತವೆ. ಅಧಿಕ ನಾರಿನಿಂದಾಗಿ ಜೀರ್ಣಗೊಳ್ಳುವುದು ಸುಲಭ,ಹೀಗಾಗಿ ಮೂಲವ್ಯಾಧಿಗೆ ಗುರಿಯಾಗುವ ಅಪಾಯದಲ್ಲಿರುವವರಿಗೆ ಅಥವಾ ಮಲಬದ್ಧತೆ ಸಮಸ್ಯೆಯಿರುವವರಿಗೆ ಅತ್ಯುತ್ತಮ ಆಹಾರಗಳಲ್ಲೊಂದಾಗಿವೆ. ಅಲ್ಲದೆ ಇವು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವ, ಮಧುಮೇಹ ನಿಯಂತ್ರಣವನ್ನು ಉತ್ತಮಗೊಳಿಸುವ ಮತ್ತು ಕರುಳಿನ ಆರೋಗ್ಯವನ್ನು ನಿಯಂತ್ರಿಸುವ ಇತರ ಆರೋಗ್ಯಲಾಭಗಳನ್ನೂ ಹೊಂದಿವೆ. ಕಡಲೆ,ಮಸೂರ,ಬಟಾಣಿ,ಅವರೆ,ನೆಲಗಡಲೆ ಮತ್ತು ಸೋಯಾಬೀನ್ ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಆದರೆ ಇವುಗಳನ್ನು ಅತಿಯಾದ ಪ್ರಮಾಣದಲ್ಲಿ ತಿಂದರೆ ವಾಯು ತೊಂದರೆ ಅಥವಾ ಹೊಟ್ಟೆಯುಬ್ಬರ ಉಂಟಾಗುತ್ತದೆ ಎನ್ನುವುದು ಗಮನದಲ್ಲಿರಲಿ.
ಇಡಿಯ ಧಾನ್ಯಗಳು
ಸಂಸ್ಕರಿತ ಆಹಾರಗಳು ಆರೋಗ್ಯಕ್ಕೆ ಲಾಭದಾಯಕವಾದ ಪೋಷಕಾಂಶಗಳನ್ನು ಕಳೆದುಕೊಂಡಿರುತ್ತವೆ. ಹೀಗಾಗಿ ಇಂತಹ ಆಹಾರಗಳ ಸೇವನೆಯಿಂದ ನಮ್ಮ ಶರೀರದ ಆರೋಗ್ಯಕ್ಕೆ ಯಾವುದೇ ಲಾಭವಿಲ್ಲ. ಇದೇ ಕಾರಣದಿಂದ ಆಹಾರದಲ್ಲಿ ಇಡಿಯ ಧಾನ್ಯಗಳು ಅಗತ್ಯ ಹಾಗೂ ಮೂಲವ್ಯಾಧಿಯನ್ನು ತಡೆಯುವ ಮತ್ತು ಕರುಳಿನ ಆರೋಗ್ಯವನ್ನು ಕಾಯ್ದುಕೊಳ್ಳುವ ವಿಷಯ ಬಂದಾಗ ಇವು ಮತ್ತಷ್ಟು ಅಗತ್ಯವಾಗುತ್ತವೆ. ಇಡಿಯ ಧಾನ್ಯಗಳು ಅಗತ್ಯ ವಿಟಾಮಿನ್ಗಳು ಮತ್ತು ಖನಿಜಗಳ ಜೊತೆಗೆ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಮತ್ತು ಕರುಳಿನ ಚಲನವಲನವನ್ನು ಕ್ರಮಬದ್ಧಗೊಳಿಸುವ ನಾರಿನ ಸಮೃದ್ಧ ಮೂಲಗಳಾಗಿವೆ. ಇಡಿಯ ಧಾನ್ಯಗಳ ತೌಡು ಅಥವ ಹೊಟ್ಟು ಹೆಚ್ಚಿನ ಪ್ರಮಾಣದಲ್ಲಿ ನಾರನ್ನು ಒಳಗೊಂಡಿರುತ್ತವೆ ಮತ್ತು ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತದೆ. ಬಾರ್ಲಿ,ಓಟ್ಸ್ ಅಥವಾ ತೋಕೆಗೋದಿ,ಹುರುಳಿ,ಸಿರಿಧಾನ್ಯಗಳು,ಕಂದು ಅಕ್ಕಿ,ಮುಸುಕಿನ ಜೋಳ ಮತ್ತು ನುಚ್ಚು ಗೋದಿ ಇವುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು.
ಅಧಿಕ ನಾರು ಇರುವ ತರಕಾರಿಗಳು
ತರಕಾರಿಗಳು ವಿವಿಧ ಪೋಷಕಾಂಶಗಳ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ನಾರನ್ನೂ ಒಳಗೊಂಡಿರುತ್ತವೆ. ಬ್ರಾಕೊಲಿ,ಗಜ್ಜರಿ,ಬೀಟ್,ಸಿಹಿಗೆಣಸು,ಹಸಿರು ಬಟಾಣಿ ಮತ್ತು ಬಸಳೆ ಇತ್ಯಾದಿಗಳು ನಿಮ್ಮ ಆಹಾರದಲ್ಲಿರಲಿ.
ಹಣ್ಣುಗಳು
ಆಹಾರವು ಆರೋಗ್ಯಕರ ಮತ್ತು ಸಮತೋಲನದಿಂದ ಕೂಡಿರಬೇಕೆಂದರೆ ಅವು ಹಣ್ಣುಗಳನ್ನು ಒಳಗೊಂಡಿರುವುದು ಅಗತ್ಯ. ಹಣ್ಣುಗಳು ಇತರ ಪೋಷಕಾಂಶಗಳ ಜೊತೆಗೆ ನಾರನ್ನೂ ವಿಫುಲವಾಗಿ ಒಳಗೊಂಡಿರುವುದರಿಂದ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತವೆ ಮತ್ತು ಕರುಳಿನ ಆರೋಗ್ಯವನ್ನು ಕಾಯ್ದುಕೊಳ್ಳುವ ಮೂಲಕ ಮಲಬದ್ಧತೆ ಅಥವಾ ಮೂಲವ್ಯಾಧಿಯನ್ನು ತಡೆಯುತ್ತವೆ.
ಬೀಜಗಳು
ಬಾದಾಮಿ,ಗೋಡಂಬಿ,ಅಕ್ರೋಟ್ನಂತಹ ಬೀಜಗಳು ತಿನ್ನಲು ರುಚಿಯಾಗಿರುತ್ತವೆ,ಆದರೆ ಅವು ಅಧಿಕ ನಾರು ಮತ್ತು ಕರಗಬಲ್ಲ ಕೊಬ್ಬನ್ನೂ ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿರುತ್ತವೆ. ಬೀಜಗಳ ಸೇವನೆ ಮಲವಿಸರ್ಜನೆಯನ್ನು ಸುಲಭವಾಗಿಸುತ್ತದೆ ಮತ್ತು ಮೂಲವ್ಯಾಧಿಯನ್ನು ತಡೆಯಲು ಹಾಗೂ ಕರುಳಿನ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.
Comments are closed.