ಮಂಗಳೂರು, ಜುಲೈ.05 : ಫೈನಾನ್ಸ್ನಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತೇವೆ ಎಂದು ಕರೆ ಮಾಡಿ ಹಣ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ದೆಹಲಿ ಪೊಲೀಸರ ಸಹಾಯದಿಂದ ದೆಹಲಿ ಚರಕ್ಪುರಿಯಲ್ಲಿ ಬಂಧಿಸಿರುವ ಮಂಗಳೂರು ಸೈಬರ್ ಕ್ರೈಂ ಪೊಲೀಸರು ಆರೋಪಿಯಿಂದ ನಗದು ಸಹಿತಾ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಮೂಲತಃ ಉತ್ತರ ಪ್ರದೇಶದ ತಾಂಡ ನಿವಾಸಿ, ಹೊಸದಿಲ್ಲಿಯ ಸೌತ್ವೆಸ್ಟ್ನ ಜಗದಂಬಾ ವಿಹಾರ್ ಬಳಿ ವಾಸವಿದ್ದ ಯೂಸುಫ್ ಖಾನ್ (29) ಎಂದು ಗುರುತಿಸಲಾಗಿದೆ.
ಶುಕ್ರವಾರ ತಮ್ಮ ಕಚೇರಿಯಲ್ಲಿ ಫೋನ್ ಇನ್ ಕಾರ್ಯಕ್ರಮಕ್ಕೂ ಮೊದಲು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಲ ದಿನಗಳಿಂದ ನಗರದಲ್ಲಿ ಸೈಬರ್ ಅಪರಾಧ ಪ್ರಕರಣ ಹೆಚ್ಚಾಗುತ್ತಿದೆ. ಇಲ್ಲಿ ನಡೆಯುತ್ತಿರುವ ಸೈಬರ್ ಅಪರಾಧ ಪ್ರಕರಣಗಳಲ್ಲಿ ಹೊರ ರಾಜ್ಯದ ಜನರು ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾತ್ರವಲ್ಲ ಅನೇಕ ಜನರು ಸೈಬರ್ ಅಪರಾಧ ಪ್ರಕರಣಗಳಿಗೆ ಬಲಿಯಾಗುತ್ತಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ಸೈಬರ್ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ನಗರದಲ್ಲಿ ದೂರು ದಾಖಲಿಸಲಾಗಿದೆ. ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 144 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಕೇವಲ ಮಂಗಳೂರಿನಂತಹ ನಗರದಲ್ಲಿ ಮಾತ್ರವಲ್ಲ, ಕರ್ನಾಟಕದ ಇತರ ಭಾಗಗಳಲ್ಲಿ ಈ ಬಗ್ಗೆ ಹಲವಾರು ದೂರುಗಳು ದಾಖಲಾಗಿವೆ ಎಂದು ತಿಳಿಸಿದರು.
ಓರ್ವ ವ್ಯಕ್ತಿ ಕಡಿಮೆ ಬಡ್ಡಿಗೆ ಸಾಲ ನೀಡುವ ನೆಪದಲ್ಲಿ ಜನರಿಗೆ ಕರೆ ಮಾಡಿ ವಂಚನೆ ನಡೆಸುತ್ತಿದ್ದ ಎಂಬ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಯೂಸುಫ್ ಖಾನ್ ನನ್ನು ಬಂಧಿಸಲಾಯಿತು.ಇದೇ ವೇಳೆ ಈತನ ಸಹಚರರು ಎನ್ನಲಾದ ಇತರ ಆರೋಪಿಗಳಾದ ನೌಶಾದ್ ಮತ್ತು ಪ್ರಭಾಕರ್ ಎಂಬವರು ಪರಾರಿಯಾಗಿದ್ದಾರೆ. ಅವರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಕಮಿಷನರ್ ತಿಳಿಸಿದರು.
ಬಂಧಿತ ಆರೋಪಿಯಿಂದ ರೂ. 70,000 ನಗದು, 2 ಲ್ಯಾಪ್ಟಾಪ್ ಮತ್ತು 31 ಮೊಬೈಲ್ ಫೋನ್ ಮತ್ತು ಕರೆ ವಿವರಗಳನ್ನು ಬರೆಯಲಾದ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ 6 ತಿಂಗಳಿನಿಂದ ಇಂತಹ ಪ್ರಕರಣಗಳು ನಗರದಲ್ಲಿ ನಡೆಯುತ್ತಿದೆ. 60 ರಿಂದ 70 ಜನರು ಸೈಬರ್ ಅಪರಾಧ ಪ್ರಕರಣಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.
ಭಾರತೀ ಫೈನಾನ್ಸ್ನಿಂದ ಕರೆ ಮಾಡುವುದಾಗಿ ಹೇಳಿ ನೇಹಾ ಎಂದು ಪರಿಚಯಿಸಿಕೊಂಡ ಮಹಿಳೆ ಎ.8ರಂದು ಕರೆ ಮಾಡಿದ್ದಳು. 2 ಲಕ್ಷ ರೂ. ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವುದಾಗಿ ತಿಳಿಸಿದ್ದಳು. ನಿಜವೆಂದು ನಂಬಿ ಆಕೆ ತಿಳಿಸಿದಂತೆ ಸಾಲದ ಸೆಕ್ಯೂರಿಟಿ ಚಾರ್ಜ್, ಇನ್ಸೂರೆನ್ಸ್ ಇತ್ಯಾದಿ ಒಟ್ಟು 1.70ಲಕ್ಷ ರೂ. ಅವರು ತಿಳಿಸಿದ ವಿವಿಧ ಖಾತೆಗಳಿಗೆ ಜಮಾ ಮಾಡಿ ಮೋಸ ಹೋಗಿರುವುದಾಗಿ ಪಂಜಿಮೊಗರಿನ ವಿವೇಕ ನಗರದ ನಿವಾಶಿ ಕಾರ್ತಿಕ್ ಪೂಜಾರಿ (24) ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸೈಬರ್ ಕ್ರೈಂ ಪೊಲೀಸರು ವಂಚನೆ ಮಾಡಿದ ಮೊಬೈಲ್ ನಂಬರ್ ಗಳ ಹಾಗೂ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಸಂಗ್ರಹಿಸಿ ಹೊಸದಿಲ್ಲಿಯ ಜನಕಪುರಿ ಪರಿಸರದಲ್ಲಿ ಹಾಗೂ ಇತರ ಕಡೆಗಳಲ್ಲಿ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದರು. ಹೊಸದಿಲ್ಲಿಯ ಪೊಲೀಸರ ಸಹಕಾರ ಪಡೆದು ಆರೋಪಿಗಳನ್ನು ಪತ್ತೆ ಮಾಡಲಾಗಿದೆ.
ಹೊಸದಿಲ್ಲಿಯಲ್ಲಿದ್ದುಕೊಂಡು ದೇಶದ ಉದ್ದಗಲಕ್ಕೂ ಆರೋಪಿಗಳು ವಂಚನಾ ಜಾಲ ಬೀಸಿದ್ದರು. ಕಳೆ 6 ತಿಂಗಳಿನಿಂದ ಸುಮಾರು 400ಕ್ಕಿಂತಲೂ ಅಧಿಕ ಮಂದಿಗೆ ಕರೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಏರ್ಲೈನ್ ಕಂಪೆನಿಯ ನಕಲಿ ವೆಬ್ಸೈಟ್ ಮಾಡಿಕೊಂಡು ಹಣ ವಂಚನೆ ಮಾಡುತ್ತಿರುವ ಬಗ್ಗೆ 2 ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಸೈಬರ್ ಕ್ರೈಂ ಪಿಎಸ್ಐ ಚಂದ್ರಶೇಖರಯ್ಯ, ಸಿಸಿಆರ್ಬಿ ಘಟಕದ ಪಿಎಸ್ಐ ಶ್ಯಾಮ್ ಸುಂದರ್, ಸಿಬ್ಬಂದಿ ರಾಜೇಂದ್ರ, ಗಣಕಯಂತ್ರ ವಿಭಾಗದ ಮನೋಜ್ ಹಾಗೂ ಸೈಬರ್ ಕ್ರೈಂ ಪೊಲೀಸ್ ಠಾಣಾ ಎಎಸ್ಐ ಓಂದಾಸ್, ಹೆಚ್.ಸಿ.ಗಳಾದ ದಿನೇಶ್ ಬೇಕಲ್, ಕುಮಾರ್, ಮಾಯಾ ಪ್ರಭು, ಕಾನ್ಸ್ಟೇಬಲ್ಗಳಾದ ವಿಜಯ್ ಶೆಟ್ಟಿ, ಗೃಹರಕ್ಷಕ ವಿದೀಪ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ತಂಡಕ್ಕೆ ಸೂಕ್ತ ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡುವುದಾಗಿ ಆಯುಕ್ತರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಹನುಮಂತ ರಾಯ ಎಸಿಪಿ ಮಂಜುನಾಥ ಶೆಟ್ಟಿ ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.