ಪುತ್ತೂರು, ಜುಲೈ 05 :ದ.ಕ.ಜಿಲ್ಲೆಯನ್ನು ತಲ್ಲಣಿಸಿದ ಸಹಪಾಠಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಐವರು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮರೆಯುವ ಮುನ್ನವೇ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಹಿತನೋರ್ವ ಬಾಲಕಿಯ ಅತ್ಯಾಚಾರಗೈದ ಘಟನೆ ಶುಕ್ರವಾರ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಅರಿಯಡ್ಕ ಗ್ರಾಮದ ಪಾಪೆಮಜಲಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ವಿವಾಹಿತನೋರ್ವ ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ.
ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ಪಳನೀರು ನಿವಾಸಿ ಸಂಜೀವ ಪೂಜಾರಿ ಆರೋಪಿಯಾಗಿದ್ದು, ಆತನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ಶಾಲೆಗೆ ಹೋಗುವ ಸಮಯ ಪಳನಿರು ಎಂಬಲ್ಲಿ ಬಂದ ಆರೋಪಿ ಸಂತ್ರಸ್ತೆಯ ತಾಯಿ ಸುಸ್ತಾಗಿ ಗುಡ್ಡೆಯಲ್ಲಿ ಬಿದ್ದಿದ್ದಾರೆ ಎಂದು ತಿಳಿಸಿ ಬೇಗ ಬಾ ಎಂದು ನಿರ್ಜನ ಪ್ರದೇಶಕ್ಕೆ ಕೈ ಹಿಡಿದು ಎಳೆದು ದೈಹಿಕ ಕಿರುಕುಳ ನೀಡಲಾರಂಭಿಸಿದ್ದ. ಗಾಬರಿಗೊಳಗಾದ ಬಾಲಕಿ ಪ್ರಜ್ಞೆ ತಪ್ಪಿ ಬಿದ್ದರೂ ಅತ್ಯಾಚಾರ ಎಸಗಿದ್ದ.
ಪ್ರಜ್ಞೆ ಮರುಕಳಿಸಿದಾಗ ಆರೋಪಿ ಪರಾರಿಯಾಗಿದ್ದು, ಘಟನೆಯಿಂದ ಮಾನಸಿಕವಾಗಿ ಜರ್ಜರಿತಳಾದ ಆಕೆ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ತೀವ್ರ ಅಸ್ವಸ್ಥಳಾಗಿದ್ದ ಬಾಲಕಿಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕಿಯ ತಾಯಿ ನೀಡಿದ ದೂರಿನಂತೆ ಸಂಪ್ಯ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ದಾವಿಸಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಆಸ್ಪತ್ರೆಗೆ ದಾಖಲಾ ಗಿದ್ದ ಬಾಲಕಿಯನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದಾರೆ. ಆಸ್ಪತ್ರೆಯಲ್ಲಿ ಬಾಲಕಿಯ ಆರೋಗ್ಯದ ಕುರಿತು ವಿವರಗಳನ್ನು ಪಡೆದುಕೊಂಡಿ ದ್ದಾರೆ. ಆರೋಪಿಯ ವಿರುದ್ಧ ಪೋಕ್ಸೊ ಮತ್ತು ಪರಿಶಿಷ್ಟ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಪುತ್ತೂರು ಶಾಸಕ ಸಂಜೀವ ಮಠಂದೂರು ಖಂಡನೆ :
ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಖಂಡಿಸಿದ್ದಾರೆ. ಇಂತಹ ಕೃತ್ಯ ನಡೆಸಿದ ಆರೋಪಿಯ ಪರ ಯಾರು ವಕಾಲತು ಹಾಕಬಾರದು ಎಂದು ವಕೀಲ ಸಮುದಾಯದಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ ಶಾಲಾ ವಠಾರದಲ್ಲಿ ಬೆಳಗ್ಗೆ ಮತ್ತು ಸಂಜೆಯ ವೇಳೆ ಪೊಲೀಸ್ ಬೀಟ್ ವ್ಯವಸ್ಥೆಯನ್ನು ನಡೆಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ.
Comments are closed.