ಬೆಂಗಳೂರು: ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದರಲ್ಲಿ ರಾಜ್ಯ ಸಮ್ಮಿಶ್ರ ಸರಕಾರದ 8 ಶಾಸಕರು ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಕ್ಕೆ ಕೊನೆ ಮೊಳೆ ಹೊಡೆದಿದ್ದು, ಸರಕಾರ ಉಳಿಸಿಕೊಳ್ಳಲು ದೋಸ್ತಿ ನಾಯಕರು ಕಸರತ್ತು ನಡೆಸಿದ್ದಾರೆ.
ಕೊನೆ ಕ್ಷಣದಲ್ಲಿ ಅಖಾಡಕ್ಕಿಳಿದ ಕಾಂಗ್ರೆಸ್ ಹೈಕಮಾಂಡ್, ಕಾಮರಾಜ್ ಸೂತ್ರ ಪಾಲನೆಗೆ ಮುಂದಾಗುವ ಮೂಲಕ ಎಲ್ಲ ಹಾಲಿ ಸಚಿವರಿಗೆ ರಾಜೀನಾಮೆ ನೀಡಲು ಸೂಚಿಸಿದೆ.
ಸ್ವೀಕರ್ ರಮೇಶ್ ಕುಮಾರ್ ಅವರು ಕಚೇರಿಯಲ್ಲಿರದ ಕಾರಣ ಕಾಂಗ್ರೆಸ್‌ನ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ ಪಾಟೀಲ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಸೇರಿದಂತೆ ಮಹಾಲಕ್ಷೀ ಲೇಔಟ್ ಶಾಸಕ ಗೋಪಾಲಯ್ಯ, ಹುಣಸೂರು ಶಾಸಕ ವಿಶ್ವನಾಥ್ ಮತ್ತು ಕೆ.ಆರ್ ಪೇಟೆ ಶಾಸಕ ನಾರಾಯಣ ಗೌಡ ಅವರು ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿ ರಾಜಭವನದತ್ತ ಹೊರಟಿದ್ದರೆ, ಇನ್ನುಳಿದ ನಾಲ್ವರು ಅತೃಪ್ತ ಶಾಸಕರ ಮನವೊಲಿಕೆಗೆ ಸಚಿವ ಡಿ.ಕೆ.ಶಿವಕುಮಾರ್ ಯತ್ನಿಸುತ್ತಿದ್ದಾರೆ.
ಆದರೆ, ಶಾಸಕ ಮುನಿರತ್ನ, ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜ್ ಸೇರಿ ಹಲವು ಶಾಸಕರು ರಾಜಭವನದಲ್ಲಿದ್ದು, ಬಳಿಕ 8 ಶಾಸಕರು ಮುಂಬೈಗೆ ತೆರಳುವ ಸಾಧ್ಯತೆ ಇದೆ. ಇನ್ನೊಂದೆಡೆ, ನಾಳೆ ಕಾಂಗ್ರೆಸ್‌ನ ಇಬ್ಬರು ಶಾಸಕಿಯರು ಸೇರಿ ಐವರು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಸಹ ಇದೇ ನಿರೀಕ್ಷೆಯಲ್ಲಿದೆ ಎಂದು ತಿಳಿದುಬಂದಿದೆ.
ಭೈರತಿ ಬಸವರಾಜ್, ಸೋಮಶೇಖರ್, ಮುನಿರತ್ನ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಮತ್ತು ಅವರ ಪುತ್ರಿ ಸೌಮ್ಯ ರೆಡ್ಡಿ ಕೂಡ ರಾಜೀನಾಮೆಗೆ ಮುಂದಾಗಿದ್ದು, ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಆದರೆ, ರಾಜೀನಾಮೆ ನೀಡಲು ಬಂದವರನ್ನು ವಾಪಸ್ ಕರೆದೊಯ್ಯಲು ಬಂದಿದ್ದೇನೆಂದು ಶಾಸಕ ಸೋಮಶೇಖರ್ ಈ ಹಿಂದೆ ಹೇಳಿಕೆ ನೀಡಿದ್ದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿದ್ದೇನೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಅತೃಪ್ತ ಶಾಸಕರ ತಂಡ ವಿಧಾನಸೌಧಕ್ಕೆ ಆಗಮಿಸುತ್ತಿದ್ದಂತೆ ತಮ್ಮ ಕಚೇರಿ ಬಿಟ್ಟು ಜಯದೇವ್ ಆಸ್ಪತ್ರೆಗೆ ತೆರಳಿರುವ ಸ್ವೀಕರ್ ರಮೇಶ್ ಕುಮಾರ್ ಆಗಮನಕ್ಕೆ ಬಂಡಾಯ ಶಾಸಕರು ಕಾದು ಕುಳಿತಿದ್ದಾರೆ. ಸಮ್ಮಿಶ್ರ ಸರಕಾರದ ಅತೃತ್ತ ಶಾಸಕರ ಮನವೊಲಿಸಲು ಸಚಿವ ಡಿ.ಕೆ.ಶಿವಕುಮಾರ್ ಕೂಡ ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಆದರೆ, ಬಂಡಾಯ ಶಾಸಕರು ಮಾತ್ರ ತಮ್ಮ ಪಟ್ಟು ಬಿಗಿ ಹಿಡಿದಿದ್ದಾರೆ.
ಶಾಸಕರು ರಾಜೀನಾಮೆಯಿಂದ ಕಂಗಾಲಾಗಿರುವ ಕಾಂಗ್ರೆಸ್ ನಾಯಕರು ಅತೃಪ್ತ ಶಾಸಕರ ಮನವೊಲಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆ ಕುರಿತು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್‌ಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಬೆಂಗಳೂರಿಗೆ ತೆರಳಿ ರಾಜಕೀಯ ವಿಧ್ಯಮಾನಗಳ ಬಗ್ಗೆ ಮಾಹಿತಿ ಪಡೆಯುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರಿಗೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯ ರಾಜಕಾರಣದಲ್ಲಿ ಅಲ್ಲೋಲ,ಕಲ್ಲೋಲವಾಗುತ್ತಿದ್ದರೂ, ತನಗೇನು ಸಂಬಂಧವೇ ಇಲ್ಲದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ.
ಆನಂದ ಸಿಂಗ್ ರಾಜೀನಾಮೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಸೇರಿದ 8 ಶಾಸಕರು ರಾಜೀನಾಮೆ ನೀಡಬಹುದೆಂಬ ನಿರೀಕ್ಷೆ ರಾಜಕೀಯ ವಲಯದಲ್ಲಿ ದಟ್ಟವಾಗಿತ್ತು. ಬಿಜೆಪಿಯೇ ಈ ಪ್ರಕರಣದ ಬೆನ್ನ ಹಿಂದೆ ನಿಂತಿದೆ ಎಂದು ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದರು.
Comments are closed.