ಕರಾವಳಿ

ಗುಲ್ವಾಡಿ ಹೊಳೆಯಲ್ಲಿ NDRF, ಹೋಂ ಗಾರ್ಡ್ಸ್ ಕಾರ್ಯಾಚರಣೆ- ಡಿಸಿ, ಎಸ್ಪಿ ಸಹಿತ ವಿವಿಧ ಇಲಾಖೆ ಉಪಸ್ಥಿತಿ! (Video)

Pinterest LinkedIn Tumblr

ಕುಂದಾಪುರ: ಆ ಹೊಳೆ ದಡದಲ್ಲಿ ಎಲ್ಲಿ ನೋಡಿದ್ರೂ ಜನರು, ಪೊಲೀಸರು, ವಿವಿಧ ಇಲಾಖೆಗಳ ಅಧಿಕಾರಿಗಳು…ಕಿವಿಗೆ ಕೇಳುವ ಅಂಬುಲೆನ್ಸ್ ಸೈರನ್ ಶಬ್ಧ…..ಸಾಲುಸಾಲಾಗಿ ನಿಂತ ವಿವಿಧ ಇಲಾಖೆಗಳ ವಾಹನಗಳು. ದಡದಲ್ಲಿ ಖುದ್ದು ನಿಂತು ವೀಕ್ಷಣೆ ಮಾಡ್ತಿರೋ ಉಡುಪಿ ಡಿಸಿ ಮತ್ತು ಎಸ್ಪಿ ಸೇರಿದಂತೆ ವಿವಿಧ ಅಧಿಕಾರಿಗಳು. ಹಾಗಾದ್ರೆ ಹೊಳೆಯಲ್ಲಿ ಅನಾಹುತ ಆಯ್ತಾ? ನಿಜಕ್ಕೂ ಇಲ್ಲ…..ಹಾಗಾದ್ರೆ ಅಲ್ಲಿ ನಡೆದಿದ್ದಾದ್ರೂ ಏನು ಅನ್ನೋದಕ್ಕೆ ಈ ಇಂಟ್ರಸ್ಟಿಂಗ್ ಸ್ಟೋರಿ ನೋಡಿ.

ಕುಂದಾಪುರ ತಾಲೂಕಿನ ಗುಲ್ವಾಡಿ ಡ್ಯಾಮ್ ಸಮೀಪದ ಹೊಳೆ ಭಾಗದಲ್ಲಿ ಶನಿವಾರ ಬೆಳ್ಳಂಬೆಳಿಗ್ಗೆ ನೂರಾರು ಜನರು ಜಮಾಯಿಸಿದ್ರು, ಜೊತೆಗೆ ಒಂದಷ್ಟು ಶಾಲೆಗಳ ವಿದ್ಯಾರ್ಥಿಗಳು ಕೂಡ ಕುತೂಹಲದಿಂದ ಆ ನದಿ ಹಾಗೂ ನದಿ ತಟದಲ್ಲಿ ನಡೆಯೋ ರೆಸ್ಕ್ಯೂ ಆಪರೇಶನ್ ಕಂಡು ಪುಳಕಿತರಾದ್ರು. ಆದ್ರೆ ಅಲ್ಲಿ ನಿಜವಾದ ಅನಾಹುತ ಏನಾದ್ರು ಆಯ್ತಾ ಅಂತಾ ಡೌಟ್ ಬೇಡ. ಅಲ್ಲೇನು ಆಗಿರಲಿಲ್ಲ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಪ್ರವಾಹ ಹಾಗೂ ನೆರೆ ಬಂದ ಸಂದರ್ಭ ಮಾಡಬೇಕಾದ ತುರ್ತು ಕಾರ್ಯಾಚರಣೆ ಬಗ್ಗೆ ಅಣಕು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು.

ಹೌದು…..ಜಿಲ್ಲಾಡಳಿತದ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಾಚರಣೆ ನಿಜಕ್ಕೂ ವಿಶೇಷವಾಗಿತ್ತು. ಕಳೆದ ವರ್ಷ ಇದೇ ಮಳೆಗಾಲದ ಸಂದರ್ಭ ಬಳ್ಕೂರು ಹಾಗೂ ಗುಲ್ವಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಕೆಲವೆಡೆ ಅತ್ಯಧಿಕ ನೆರೆಯಾಗಿ ಊರಿಗೆ ಊರೇ ಮನೆಬಿಟ್ಟು ಗಂಜಿಕೇಂದ್ರದ ಮತ್ತು ನಿರಾಶ್ರಿತ ಕೇಂದ್ರದ ಮೊರೆಹೋಗಿದ್ದರು.ಅಂದಿನ ಕುಂದಾಪುರ ಎಸಿ ಭೂಬಾಲನ್ ಇಂತಹ ಸ್ಥಳಗಳಿಗೆ ತೆರಳಿ ತೋರಿದ ಕಾಳಜಿ ಎಲ್ಲಾ ಅಧಿಕಾರಿಗಳಿಗೆ ಮಾದರಿಯೂ ಆಗಿತ್ತು. ಅಂತೆಯೇ ಮಳೆಗಾಲದಲ್ಲಿ ಈ ರೀತಿಯ ಸಮಸ್ಯೆಗಳಾದಾಗ ಜನರು ಮಾಡಬೇಕಾಗಿರೋದು ಏನು? ಸಂಬಂದಪಟ್ಟ ಇಲಾಖೆ ಹೇಗೆ ಜನರಿಗೆ ಸ್ಪಂದಿಸುತ್ತೆ ಅನ್ನೋ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಡೆದ ಕಾರ್ಯಾಚರಣೆ ಇದಾಗಿತ್ತು.

ಈ ವರ್ಷದಲ್ಲಿ ಮುಂಗಾರು ಮಳೆ ಕೂಡ ಕಮ್ಮಿಯಾಗಿದೆ. ಆದ್ರೆ ಈ ತಿಂಗಳಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯೂ ಕೂಡ ಜನರಲ್ಲಿದ್ದು ಜನರಲ್ಲಿ ನೆರೆ, ಪ್ರವಾಹ ವಿಪತ್ತಿನ ಬಗ್ಗೆ ಅರಿವು ಹಾಗೂ ಮುಂಜಾಗ್ರತೆ ಮೂಡಿಸುವ ನಿಟ್ಟಿನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಒಳ್ಳೆ ರೆಸ್ಫಾನ್ಸ್ ಸಿಕ್ಕಿತ್ತು. ಎನ್.ಡಿ.ಆರ್.ಎಫ್. ತಂಡ, ಅಗ್ನಿಶಾಮಕದಳ, ಪೊಲೀಸ್ ಇಲಾಖೆ, ಗೃಹರಕ್ಷಕದಳ, ಶಿಕ್ಷಣ, ಕಂದಾಯ, ಕುಂದಾಪುರ ತಾಲೂಕು ಪಂಚಾಯತ್ ಹಾಗೂ ಆರೋಗ್ಯ ಇಲಾಖೆ ಜೊತೆಯಲ್ಲಿ ರೆಡ್ ಕ್ರಾಸ್ ಮತ್ತು ರೆಡಿಯೋ ಕ್ಲಬ್ ಸಹಭಾಗಿತ್ವ ವಹಿಸಿತ್ತು. ನದಿಯಲ್ಲಿ ಬಿದ್ದವರನ್ನು ಮೇಲೆತ್ತುವ ಪ್ರಕ್ರಿಯೆ, ಪ್ರವಾಹದಲ್ಲಿ ಕೊಚ್ಚಿ ಹೋಗುವರ ರಕ್ಷಣೆ, ಪ್ರವಾಹನದಲ್ಲಿ ನಿರಾಶ್ರಿತರಾಗುವ ಜನರ ರಕ್ಷಣೆ ಮತ್ತು ಪುನರ್ವಸತಿ, ಜನರಿಗೆ ನೀಡಬೇಕಾದ ತುರ್ತು ಚಿಕಿತ್ಸೆ, ಬೇರೆಡೆಗೆ ಸಾಗಿಸಲು ಕೈಗೊಳ್ಳಬೇಕಾದ ಕ್ರಮಗಳು, ವೈದ್ಯಕೀಯ ವ್ಯವಸ್ಥೆಗಳು, ಗಂಜಿ ಕೇಂದ್ರದ ವ್ಯವಸ್ಥೆಯನ್ನು ಕೂಡ ಈ ಅಣಕು ಕಾರ್ಯಾಚರಣೆಯಲ್ಲಿ ಮಾಡಲಾಗಿದ್ದು ಮೇಲ್ನೋಟಕ್ಕೆ ಎಲ್ಲವೂ ನೈಜ್ಯವಾಗಿ ಕಾಣಿಸುವಷ್ಟರ ಮಟ್ಟಿಗೆ ತಯಾರಿ ಮಾಡಿಕೊಳ್ಳಲಾಗಿತ್ತು. ಈಗಾಗಲೇ ಸುರತ್ಕಲ್‌ನಲ್ಲಿ ಎನ್.ಡಿ.ಆರ್.ಎಫ್. ಠಾಣೆಯಾಗಿದೆ. ವಿಪತ್ತು ಬಂದಾಗ ಭಯ ಬೇಡ ಸ್ಪಂದನೆಗಾಗಿ ನಾವೇನು ಮಾಡಬೇಕು ಎನ್ನುವ ಅರಿವು ಜನರಲ್ಲಿ ಬರಬೇಕು ಎಂಬ ಉದ್ದೇಶದೊಂದಿಗೆ ಜನರೊಂದಿಗೆ ನಾವಿದ್ದೇವೆ ಎಂಬ ಅಭಯ ನೀಡಿ ವಿವಿಧ ಇಲಾಖೆಗಳು ಜಿಲ್ಲೆಯಲ್ಲಿ ಕಾರ್ಯೋನ್ಮುಖವಾಗಿದೆ. ಈ ಹಿಂದೆ ಮಲ್ಪೆಯಲ್ಲಿ ಕೂಡ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯ ನಡೆದಿತ್ತು.

ಒಟ್ಟಿನಲ್ಲಿ ಉತ್ತಮ ಮಳೆಯ ನಿರೀಕ್ಷೆಯಲ್ಲಿರುವ ಜನರು ಇದೀಗಾ ಇಲಾಖೆಗಳು ಮಾಡಿದ ಈ ಕಾರ್ಯಕ್ರಮದಿಂದಾಗಿ ಒಂದಷ್ಟು ಮಾಹಿತಿಯನ್ನು ಪಡೆದುಕೊಳ್ಳಲು ಈ ಕಾರ್ಯಕ್ರಮ ಅನುವು ಮಾಡಿಕೊಟ್ಟಿದ್ದು ಅಧಿಕಾರಿಗಳ ಈ ಕಾರ್ಯಕ್ಕೆ ಉತ್ತಮ ಸ್ಪಂದನೆಯೂ ಸಿಕ್ಕಿದೆ.

ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಾಪಟಿ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್, ಜಿಲ್ಲಾ ವಿಪತ್ತು ನಿರ್ವಹಣೆ ವಿಶೇಷ ಪರಿಣಿತ ರವಿ ಓಜನಹಳ್ಳಿ, ಎನ್.ಡಿ.ಆರ್.ಎಫ್. ಟೀಮ್ ಕಮಾಂಡರ್ ಆರ್.ಕೆ. ಉಪಾಧ್ಯಾಯ, ಕುಂದಾಪುರ ತಹಶಿಲ್ದಾರ್ ತಿಪ್ಪೇಸ್ವಾಮಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪಡ್ನೇಕರ್, ರೆಡ್ ಕ್ರಾಸ್ ಕುಂದಾಪುರದ ಅಧ್ಯಕ್ಷ ಜಯಕರ ಶೆಟ್ಟಿ, ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕ್ರಷ್ಣ ಶೆಟ್ಟಿ, ಶಿಕ್ಷಣ ಇಲಾಖೆಯ ಸದಾನಂದ ಬೈಂದೂರು, ಅಗ್ನಿಶಾಮಕದಳದ ಜಿಲ್ಲಾ ಮಟ್ಟದ ಅಧಿಕಾರಿ ವಸಂತ ಕುಮಾರ್, ಗೃಹರಕ್ಷಕದಳ ಜಿಲ್ಲಾ ಡೆಪ್ಯುಟಿ ಜಿಲ್ಲಾ ಕಮಾಂಡೆಂಟ್ ರಮೇಶ್ ಕುಮಾರ್, ಆರೋಗ್ಯ ಇಲಾಖೆಯ ಡಿ.ಎಚ್.ಒ. ಎಂ.ಜಿ. ರಾಮ, ಡಾ. ಲತಾ, ರೆಡಿಯೋ ಕ್ಲಬ್ ನ ಶ್ರೀಪಾದ್ ಭಟ್, ಬಳ್ಕೂರು ಗ್ರಾ.ಪಂ ಅಧ್ಯಕ್ಷ ಅಕ್ಷತ್, ಉಪಾಧ್ಯಕ್ಷೆ ಮುಕಾಂಬು, ಪಿಡಿಓ ದೀಪಾ, ಗುಲ್ವಾಡಿ ಗ್ರಾ.ಪಂ ಉಪಾಧ್ಯಕ್ಷ ಜಿ. ಮಹಮ್ಮದ್, ಜಿ.ಪಂ ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ, ತಾ.ಪಂ ಉಪಾಧ್ಯಕ್ಷ ರಾಮಕಿಶನ್ ಹೆಗ್ಡೆ, ಸದಸ್ಯೆ ಜ್ಯೋತಿ ಪುತ್ರನ್, ಕುಂದಾಪುರ ಸಿಪಿಐ ಮಂಜಪ್ಪ ಇದ್ದರು. ಶಿಕ್ಷಕ ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.