ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ರಾಜೀನಾಮೆ ಪರ್ವ ಆರಂಭವಾದ ಬೆನ್ನಲ್ಲೇ ಕಾಂಗ್ರೆಸ್ನ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟರು. ಹೈಕಮಾಂಡ್ ಕರೆಬಂದ ಹಿನ್ನೆಲೆಯಲ್ಲಿ ಅತೃಪ್ತರ ಮನವೊಲಿಸಲು ಮುಂದಾಗಿದ್ದ ಡಿಕೆಶಿಗೆ ನಿರಾಸೆ ಉಂಟಾಗಿದೆ. ರಾಮಲಿಂಗಾ ರೆಡ್ಡಿ, ಎಸ್ಟಿ ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನರನ್ನು ಭೇಟಿಯಾದ ನಂತರ ಮಾತನಾಡಿದ ಡಿಕೆ ಶಿವಕುಮಾರ್, “ಹೋಗುವವರನ್ನು ತಡೆಯಲು ಸಾಧ್ಯವಿಲ್ಲ, ಹೋಗಲಿ ಬಿಡಿ,” ಎಂದಿದ್ದಾರೆ.
ಮಾಧ್ಯಮದ ಜತೆ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, “ಹೋಗುವವರನ್ನ ಯಾರು ಹಿಡಿದುಕೊಳ್ಳಲು ಆಗಲ್ಲ. ಸಮಸ್ಯೆ ಇರಬಹುದು, ಆದರೆ ಎಲ್ಲಾ ಸೆಟಲ್ ಆಗುತ್ತೆ. ರಾಜೀನಾಮೆಗೆ ಬೇಕಾದಷ್ಟು ಪ್ರೋಸೆಸ್ ಇದೆ, ಪ್ರಾಮಾಣಿಕವಾಗಿ ನನ್ನ ಪ್ರಯತ್ನ ಮಾಡಿದ್ದೇನೆ. ಮುಂದೇನಾಗತ್ತೋ ನೋಡೋಣ,”ಎಂದರು.
ಇನ್ನೂ ಸಾಲು ಸಾಲು ರಾಜೀನಾಮೆಯ ಹಿಂದೆ ಬಿಜೆಪಿಯ ಕೈವಾಡವಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಬಿಜೆಪಿಯವರು ಏನೂ ಗೊತ್ತಿಲ್ಲ ಅನ್ನೋಥರ ಇದ್ದಾರೆ. ಆದರೆ ಅವರು ಏನು ಮಾಡ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ. ಯಾವ ಬಿಲ್ಡರ್ಗಳಿಗೆ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಹಣಕ್ಕಾಗಿ ಕಾಲ್ ಮಾಡಿದ್ದಾರೆ, ಎಷ್ಟು ಹಣ ವಸೂಲಿ ಮಾಡ್ತಿದ್ದಾರೆ ಅನ್ನೋದು ಗೊತ್ತಿದೆ. ಮುಂದೆ ಕಾದು ನೋಡೋಣ,” ಎಂದರು.
ಈ ನಡುವೆ ಮಾಧ್ಯಮದ ಜತೆ ಮಾತನಾಡಿದ ರೆಬೆಲ್ ಶಾಸಕ ರಾಮಲಿಂಗಾ ರೆಡ್ಡಿ, ತಮ್ಮ ಮಗಳು ಸೌಮ್ಯಾ ರೆಡ್ಡಿ ರಾಜೀನಾಮೆ ಬಗ್ಗೆ ಅವರನ್ನೇ ಕೇಳಿ ಎಂದರು. “ಡಿಕೆ ಶಿವಕುಮಾರ್ ಅವರು ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡಿದರು. ಆದರೆ ಬಹಳ ಯೋಚನೆ ಮಾಡಿಯೇ ರಾಜೀನಾಮೆ ನೀಡಿದ್ದೇವೆ. ಹಿಂದೆ ಸರಿಯುವ ಮಾತೇ ಇಲ್ಲ,” ಎಂದರು.
ಬಿಜೆಪಿ ಸೇರುವ ಸಾಧ್ಯತೆ ಬಗ್ಗೆ ಉತ್ತರಿಸಿದ ಅವರು, “ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆಯೇ ಹೊರತು ಕಾಂಗ್ರೆಸ್ ಸದಸ್ಯತ್ವಕ್ಕಲ್ಲ. ನಾವಿನ್ನೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇವೆ. ಮಂತ್ರಿ ಪದವಿ ಸಿಗಲಿಲ್ಲ ಎಂಬ ಕಾರಣಕ್ಕೆ ನಾವು ರಾಜೀನಾಮೆ ನೀಡಿಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳೇ ಇವೆ. ಅವನ್ನೆಲ್ಲಾ ಈಗ ಹೇಳಲು ಸಾಧ್ಯವಿಲ್ಲ,” ಎಂದರು.
ಇನ್ನು, ರಾಜೀನಾಮೆ ನೀಡಿದ ಎಲ್ಲಾ ಶಾಸಕರು ಮುಂಬೈ ಅಥವಾ ಗೋವಾಗೆ ತೆರಳಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಮಿನಿ ಬಸ್ ಮತ್ತು ಕಾರುಗಳಲ್ಲಿ ಈಗಾಗಲೇ ಬೆಂಗಳೂರಿನಿಂದ ಹೊರಟಿರುವ ರೆಬೆಲ್ ಶಾಸಕರು, ರಾತ್ರಿಯೊಳಗೆ ಗೋವಾ ತಲುಪುವ ಸಾಧ್ಯತೆಯಿದೆ. ಒಟ್ಟಿನಲ್ಲಿ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ರೆಸಾರ್ಟ್ ರಾಜಕಾರಣ ಆರಂಭವಾಗಿದೆ.
Comments are closed.