ಕರ್ನಾಟಕ

ಸರ್ಕಾರ ಪತನಕ್ಕೂ ಮುನ್ನವೇ ಕುಮಾರಸ್ವಾಮಿ ರಾಜೀನಾಮೆ?

Pinterest LinkedIn Tumblr


ಬೆಂಗಳೂರು: ಮೈತ್ರಿ ಸರ್ಕಾರ ಪತನಕ್ಕೂ ಮುನ್ನವೇ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.

ಈಗಾಗಲೇ 14 ಶಾಸಕರು ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಶಾಸಕರ ಜೊತೆ ಜೆಡಿಎಸ್ ನಾಯಕರು ರಾಜೀನಾಮೆ ನೀಡಿದ್ದಕ್ಕೆ ಸಿಎಂ ಅಸಮಾಧಾನಗೊಂಡಿದ್ದಾರೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.

ಸರ್ಕಾರ ರಚನೆಯಾದಗಿನಿಂದ ಕಾಂಗ್ರೆಸ್ ಬಂಡಾಯ ಶಮನವಾಗಲೇ ಇಲ್ಲ. ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಹಿರಿಯ ನಾಯಕರು ಬಹಿರಂಗವಾಗಿಯೇ ಜೆಡಿಎಸ್ ಜೊತೆ ಹೋಗಿದ್ದಕ್ಕೆ ನಮಗೆ ಸೋಲಾಯ್ತು ಎಂದು ಹೇಳಿದ್ದಾರೆ. ಹೀಗಾಗಿ ವಿಶ್ವಾಸಮತಕ್ಕೂ ಮುನ್ನವೇ ಪದತ್ಯಾಗ ಮಾಡುವುದು ಉತ್ತಮ ಅಂತ ಸಿಎಂ ರಾಜೀನಾಮೆಯ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ 14 ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಭಾನುವಾರವೂ 8 ಜನ ಶಾಸಕರು ರಾಜೀನಾಮೆಗೆ ಮುಂದಾಗುವ ಸಾಧ್ಯತೆಯಿದೆ. ಹೀಗಾಗಿ ವಿಶ್ವಾಸಮತಕ್ಕೆ ಹೋಗುವುದು ಕಷ್ಟ. ಒಂದು ವೇಳೆ ವಿಶ್ವಾಸಮತಕ್ಕೆ ಮುಂದಾದರೆ ಭಾರೀ ಮುಖಭಂಗಕ್ಕೆ ಗುರಿಯಾಗುತ್ತೇನೆ ಎಂಬ ವಿಚಾರವನ್ನು ಹೇಳಿದ್ದಾರೆ.

ರಾಜೀನಾಮೆ ನೀಡಿರುವ ಶಾಸಕರಲ್ಲಿ ಹೆಚ್ಚಾಗಿ 3ಕ್ಕಿಂತ ಹೆಚ್ಚು ಬಾರಿ ವಿಧಾನಸಭೆಗೆ ಆಯ್ಕೆಯಾದವರೆ ಆಗಿದ್ದಾರೆ. ಅವರೆಲ್ಲರೂ ತಾವು ತೆಗೆದುಕೊಂಡ ನಿರ್ಧಾರಕ್ಕೆ ಬದ್ಧ ಎನ್ನುವಂತಿದ್ದಾರೆ. ಹೀಗಾಗಿ ಅವರ ಮನವೊಲಿಕೆ ಕಷ್ಟ. ಅಷ್ಟೇ ಅಲ್ಲದೆ ನಾನು ರಾಜ್ಯದಲ್ಲಿ ಇಲ್ಲದ ಸಮಯದಲ್ಲಿ ರಾಜೀನಾಮೆ ಪರ್ವ ನಡೆದಿದ್ದು, ನನ್ನ ಕೈಮೀರಿದೆ ಎನ್ನುವುದು ಸಿಎಂ ಲೆಕ್ಕಾಚಾರವಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತದ ವೇಳೆ ಭಾರೀ ಹಿನ್ನಡೆ ಅನುಭವಿಸಿದ್ದರು. ಈ ಸ್ಥಿತಿ ನನಗೆ ಬರುವುದು ಬೇಡ ಎಂದು ಸಿಎಂ ರಾಜೀನಾಮೆ ನಿರ್ಧಾರಕ್ಕೆ ಕೈಹಾಕಿದ್ದಾರೆ ಎನ್ನಲಾಗುತ್ತಿದೆ.

Comments are closed.