ಲಂಡನ್: ಹಾಲಿ ಐಸಿಸಿ ವಿಶ್ವಕಪ್ ಟೂರ್ನಿ 2019 ನಿರ್ಣಾಯಕ ಹಂತ ತಲುಪಿದ್ದು, ಟೂರ್ನಿಯಿಂದ ಹೊರಬಿದ್ದಿರುವ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡದ ನಾಯಕರು ಈ ಬಾರಿ ವಿಶ್ವಕಪ್ ಎತ್ತಿ ಹಿಡಿಯುವ ತಂಡ ಇದೇ ಎಂದು ಹೇಳಿದ್ದಾರೆ.
ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿ ಫೈನಲ್ ತಲುಪಿದ್ದು, ಭಾರತ ಮತ್ತು ನ್ಯೂಜಿಲೆಂಡ್ ಮೊದಲ ಸೆಮಿಫೈನಲ್ ನಲ್ಲಿ ಜುಲೈ 9ರಂದು ಅಂದರೆ ಮಂಗಳವಾರ ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾನ್ ಫೋರ್ಡ್ ಅಂಗಳದಲ್ಲಿ ಸೆಣಸಾಡಲಿವೆ. ಅಂತೆಯೇ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ 2ನೇ ಸೆಮಿಫೈನಲ್ ನಲ್ಲಿ ಮುಖಾಮುಖಿಯಾಗಲಿದ್ದು, ಜುಲೈ 11 ಶುಕ್ರವಾರ ಎಡ್ಜ್ ಬಾಸ್ಟನ್ ನಲ್ಲಿ ಈ ಪಂದ್ಯ ನಡೆಯಲಿದೆ.
ಇನ್ನು ಲೀಗ್ ಹಂತದ ಪಂದ್ಯಗಳು ಮುಕ್ತಾಯವಾದ ಬೆನ್ನಲ್ಲೇ ಸೆಮೀಸ್ ಮತ್ತು ಫೈನಲ್ ಪಂದ್ಯದ ಲೆಕ್ಕಾಚಾರ ಆರಂಭವಾಗಿದ್ದು, ಬಹುತೇಕ ಎಲ್ಲ ಕ್ರಿಕೆಟ್ ಪಂಡಿತರು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿ ಎತ್ತಿಹಿಡಿಯುವ ಸಾಧ್ಯತೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ ದಕ್ಷಿಣ ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದು, ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಟೀಂ ಇಂಡಿಯಾ ಮಣಿಸಲಿದೆ. ಇನ್ನು 2ನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ತಂಡವನ್ನು ಮಣಿಸಲಿದೆ. ಈ ಮೂಲಕ ಭಾರತ ಹಾಗೂ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಲಿದೆ. ಫೈನಲ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತ ಮಣಿಸಿ ಚಾಂಪಿಯನ್ ಆಗುವ ಸಾಧ್ಯತೆ ಎಂದು ಡುಪ್ಲೆಸಿಸ್ ಭವಿಷ್ಯ ನುಡಿದಿದ್ದಾರೆ.
ಅಂತೆಯೇ ಶ್ರೀಲಂಕಾ ನಾಯಕ ಕರುಣ ರತ್ನೆ ಕೂಡ ಇದೇ ರೀತಿಯ ಭವಿಷ್ಯ ನುಡಿದಿದ್ದು, ಭಾರತಕ್ಕೆ ಈ ಬಾರಿ ವಿಶ್ವಕಪ್ ಗೆಲ್ಲುವ ಎಲ್ಲ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇದೇ ಮಂಗಳವಾರ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮೊದಲ ಸೆಮಿಫೈನಲ್ ನಡೆಯಲಿದ್ದು, ಜುಲೈ 11 ಶುಕ್ರವಾರದಂದು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ 2ನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಫೈನಲ್ ಪಂದ್ಯ ಜುಲೈ 14ರಂದು ಕ್ರಿಕೆಟ್ ಕಾಶಿ ಲಾರ್ಡ್ ನಲ್ಲಿ ನಡೆಯಲಿದೆ.
Comments are closed.