ಕರಾವಳಿ

ಉಡುಪಿಯ ಒಂಟಿ ಮಹಿಳೆ ಕೊಲೆ ಪ್ರಕರಣ: ಆರೋಪಿ ದಂಪತಿ ಬಂಧನ

Pinterest LinkedIn Tumblr

ಉಡುಪಿ: ಒಂಟಿ ವೃದ್ಧೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಗೋವಾದಲ್ಲಿ ಬಂಧಿಸಿದ್ದು, ಬುಧವಾರ ನಗರಕ್ಕೆ ಕರೆತರಲಾಯಿತು. ಗೋವಾದ ಪಣಜಿಯ ಸೆಂಟಾಕ್ರೂಸ್ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಗೋವಾ ಪೊಲೀಸರ ಸಹಕಾರದಿಂದ ಇವರನ್ನು ವಶಕ್ಕೆ ಪಡೆಯಲಾಗಿತ್ತು.

ಧಾರವಾಡ ಜಿಲ್ಲೆಯ ನರಗುಂದ ನಿವಾಸಿಗಳಾದ ಅಂಬಣ್ಣ ಯಾನೆ ಅಂಬರೀಶ್ ಯಾನೆ ಅಂಬಣ್ಣ ಬಸಪ್ಪ ಜಾಡರ್ ಯಾನೆ ಶಿವ (31) ಹಾಗೂ ಆತನ ಪತ್ನಿ ರಶೀದಾ ಯಾನೆ ಖಾಜಿ ಯಾನೆ ಜ್ಯೋತಿ (26) ಬಂಧಿತ ಆರೋಪಿಗಳು.

ಸುಬ್ರಹ್ಮಣ್ಯ ನಗರದ 5ನೇ ಕ್ರಾಸ್‌ನಲ್ಲಿರುವ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ರತ್ನಾವತಿ ಜಿ.ಶೆಟ್ಟಿ (80) ಅವರನ್ನು ಜು.2ರ ಮಧ್ಯಾಹ್ನ 3ರಿಂದ ಜ.5ರ ರಾತ್ರಿ 8:30ರ ನಡುವಿನ ಅವಧಿಯಲ್ಲಿ ಆಯುಧದಿಂದ ಕೊಲೆ ಮಾಡಿ ಅವರ ಮೈಮೇಲಿದ್ದ ಹಾಗೂ ಮನೆಯಲ್ಲಿದ್ದ ಎರಡು ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಮೃತರ ಮಗಳಾದ ಸುಪ್ರಭಾ ನೀಡಿದ ದೂರಿನಂತೆ ಉಡುಪಿ ನಗರ ಠಾಣೆುಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಆರಂಭಿಸಿದ ಪೊಲೀಸರು ಮನೆಯ ಅಕ್ಕಪಕ್ಕದಲ್ಲಿ ವಿಚಾರಿಸಿದಾಗ ಕೆಲವು ದಿನಗಳ ಹಿಂದೆ ರತ್ನಾವತಿ ಜಿ. ಶೆಟ್ಟಿ ಅವರ ಮನೆಗೆ ಒಬ್ಬ ಗಂಡಸು ಮತ್ತು ಓರ್ವ ಮಹಿಳೆ ಮನೆ ಬಾಡಿಗೆಗೆ ಬಂದಿರುವ ವಿಚಾರ ತಿಳಿದಿತ್ತು. ಅವರು ಧಾರವಾಡ ಜಿಲ್ಲೆ ನರಗುಂದದವರು ಎಂಬ ಮಾಹಿತಿ ಸಿಕ್ಕಿತು. ಆರೋಪಿಗಳ ಇರುವಿಕೆಯ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಿದಾಗ ಇಬ್ಬರೂ ಗೋವಾ ರಾಜ್ಯದ ಓಲ್ಡ್ ಗೋವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವುದು ಪತ್ತೆಯಾಯಿತು. ಈ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡಿ ಆರೋಪಿಗಳನ್ನು ವಶಕ್ಕೆ ಪಡೆಯುವಂತೆ ಕೋರಿಕೊಂಡು ವಿಶೇಷ ತಂಡವನ್ನು ಗೋವಾಕ್ಕೆ ಕಳುಹಿಸಿಕೊಡಲಾಯಿತು.

ಉಡುಪಿಯ ವಿಶೇಷ ತನಿಖಾ ತಂಡ, ಗೋವಾ ಪೊಲೀಸರ ಸಹಕಾರದಿಂದ ಆರೋಪಿಗಳನ್ನು ಸೆಂಟಾಕ್ರೂಸ್‌ನಲ್ಲಿ ಬಂಧಿಸಿ ಬುಧವಾರ ಉಡುಪಿಗೆ ಕರೆ ತಂದಿದೆ.

ದುಂದುವೆಚ್ಚ, ಮೋಜಿನ ಜೀವನಕ್ಕೆ ಹಣದ ಅಡಚಣೆಯಾದ ಕಾರಣ ಕೊಲೆ ಕೃತ್ಯ ಎಸಗಿರುವುದಾಗಿ ಅಂಬಣ್ಣ ಪೊಲೀಸರಿಗೆ ವಿಚಾರಣೆಯ ವೇಳೆ ತಿಳಿಸಿದ್ದಾನೆ. ತಮಗೆ ಬಾಡಿಗೆ ಮನೆ ನೀಡಿದ ಯಜಮಾನಿ ರತ್ನಾವತಿ ಶೆಟ್ಟಿ ಅವರ ಕುತ್ತಿಗೆ ಮತ್ತು ಕೈಯಲ್ಲಿದ್ದ ಚಿನ್ನವನ್ನು ನೋಡಿ ಮನೆಯಲ್ಲಿ ತುಂಬಾ ಚಿನ್ನ ಇರಬಹುದೆಂದು ತಿಳಿದು ತಾವು ಕೊಲೆ ಮಾಡಿದ್ದೇವೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆ ಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆರೋಪಿ ಅಂಬಣ್ಣ ಬಸಪ್ಪ ಜಾಡರ್ ಈ ಹಿಂದೆ ಹಲವು ಪ್ರಕರಣಗಳ ಆರೋಪಿಯಾಗಿದ್ದಾನೆ. ಹುಬ್ಬಳ್ಳಿ ಯಲ್ಲಿ ಮೊಬೈಲ್ ಕಳವು , ಬಿಜಾಪುರದಲ್ಲಿ ಸ್ಕೂಟರ್ ಕಳವು, ಬಾದಾಮಿಯಲ್ಲಿ ಸರ ಸುಲಿಗೆ, ಮಂಗಳೂರಿನ ಕಾವೂರಿನಲ್ಲಿ ಮನೆ ಕಳವು ಪ್ರಕರಣಗಳು ಆತನ ವಿರುದ್ಧ ದಾಖಲಾಗಿವೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.

ಉಡುಪಿ ಜಿಲ್ಲಾ ವರಿಷ್ಠಾಧಿಕಾರಿರವರ ಮಾಗದರ್ಶನದಂತೆ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಡಿವೈ‌ಎಸ್‌ಪಿ ಉಡುಪಿರವರ ಆದೇಶದಂತೆ ಪೊಲೀಸ್ ವೃತ್ತ ನಿರೀಕ್ಷಕರು ಉಡುಪಿ ವೃತ್ತರವರ ನೇತೃತ್ವದ ವಿಶೇಷ ತಂಡವು, ಡಿ.ಸಿ.ಐ.ಬಿ. ತಂಡದ ಸದಸ್ಯರೊಂದಿಗೆ ಜಂಟಿಯಾಗಿ ಪ್ರಕರಣ ದಾಖಲಾಗಿ 5 ದಿನದೊಳಗೆ ಈ ಲಾಭಕ್ಕಾಗಿ ಕೊಲೆ ಪ್ರಕರಣವನ್ನು ಚಾಣಾಕ್ಷತನದಿಂದ ಭೇದಿಸಿರುತ್ತದೆ.

Comments are closed.