ಬೆಂಗಳೂರು: ಕರ್ನಾಟಕ ವಿಧಾನಸಭೆ ಅಧ್ಯಕ್ಷರಾದ ಕೆ.ಆರ್. ರಮೇಶ್ ಕುಮಾರ್ ಅತೃಪ್ತರ ರಾಜೀನಾಮೆಯನ್ನು ಖುದ್ದಾಗಿ ಸ್ವೀಕರಿಸಿದ ನಂತರ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದರು.
“ಎಲ್ಲಾ ಮಾಧ್ಯಮ ಮಿತ್ರರಿಗೆ ನಾನೇ ಬರುವಂತೆ ತಿಳಿಸಿದ್ದೆ. ನಿಮ್ಮೆಲ್ಲರಿಗೂ ಸ್ವಾಗತ. ರಾಜ್ಯದ ಸಾರ್ವಜನಿಕ ಜೀವನದಲ್ಲಿ ಇಂದು ವಿಶಿಷ್ಟವಾದ ಸನ್ನಿವೇಶ ಸೃಷ್ಟಿಯಾಗಿದೆ. ವಿಧಾನಸಭೆ ಅಧ್ಯಕ್ಷನಾಗಿ, ಏನು ಗೊಂದಲ ಇದೆ, ಯಾವ ವಿಚಾರದಲ್ಲಿ ಸ್ಪಷ್ಟತೆ ಕೊಡಬೇಕು, ಸಾರ್ವಜನಿಕರಿಗೆ ಮಾಹಿತಿ ಕೊಡುವುದು ನನ್ನ ಕರ್ತವ್ಯ.
ಈ ಇಡೀ ಪ್ರಕ್ರಿಯೆ, ಯಾರನ್ನ ಉಳಿಸುವುದು ಅಥವಾ ಕಳಿಸುವುದು ನನ್ನ ಕೆಲಸವಲ್ಲ. ನಾನು ಅದಕ್ಕೆ ಎಂದೂ ಕೈಹಾಕುವುದಿಲ್ಲ. 40 ವರ್ಷದ ಸಾರ್ವಜನಿಕ ಜೀವನದಲ್ಲಿ ಮರ್ಯಾದೆಯಿಂದ ಬದುಕಿದ್ದೇನೆ. ಇಂದು ಬೆಳಗ್ಗೆ ಕೆಲ ಪತ್ರಿಕೆ ನೋಡಿದಾಗ ನನ್ನ ಮನಸ್ಸಿಗೆ ನೋವಾಯ್ತು,” ಎಂದು ತಮ್ಮ ನೋವು ಹೊರ ಹಾಕಿದರು.
“ಸ್ಪೀಕರ್ ನಿಧಾನ ಮಾಡಿದ್ದರಿಂದ ಅತೃಪ್ತರು ಸುಪ್ರೀಂ ಕೋರ್ಟ್ಗೆ ಹೋದರು ಎಂದು ಬರೆಯಲಾಗಿತ್ತು. ನನ್ನ ಕಚೇರಿಗೆ ರಾಜೀನಾಮೆ ಪತ್ರ ಬಂದಿದ್ದು 6ನೇ ತಾರೀಖು. ನಾನು ಆ ವೇಳೆ ಬೇರೆಡೆ ಹೋಗಿದ್ದೆ. ಶಾಸಕರು ಯಾರೂ ರಾಜೀನಾಮೆ ಸಲ್ಲಿಸಲು ಬರುತ್ತಿದ್ದೇನೆ ಎಂದು ನನಗೆ ಮೌಖಿಕವಾಗಿ, ಲಿಖಿತವಾಗಿ ಮಾಹಿತಿ ನೀಡಿರಲಿಲ್ಲ. ಅದರ ನಂತರ ಭಾನುವಾರ. ಅಂದು ರಜೆ. ಸೋಮವಾರ ಕಚೇರಿಗೆ ನಾನು ಬರಲು ಸಾಧ್ಯವಾಗಲಿಲ್ಲ,” ಎಂದು ವಿವರಣೆ ನೀಡಿದರು.
“ಮಂಗಳವಾರ ಕಚೇರಿಗೆ ಬಂದ ನಂತರ, ಕರ್ನಾಟಕ ವಿಧಾನಸಭೆಯ ನಿಯಮಾವಳಿಯನ್ನು ನೋಡಿದೆ. ನಮ್ಮ ಕಚೇರಿಗೆ ತಲುಪಿದ್ದ 13 ರಾಜೀನಾಮೆಗಳಲ್ಲಿ 8 ರಾಜೀನಾಮೆ ಪತ್ರ ವಿಧಾನಸಭೆಯ ನಿಯಮ ನಡಾವಳಿ 202ರ ಪ್ರಕಾರ ಕ್ರಮಬದ್ಧವಾಗಿರಲಿಲ್ಲ. ಉಳಿದ ಐವರ ರಾಜೀನಾಮೆ ಕ್ರಮಬದ್ಧವಾಗಿದ್ದವು. ಸಂವಿಧಾನದ 190ರ ಪ್ರಕಾರ, ನಾನು ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಮನವರಿಕೆ ಮಾಡಿಕೊಳ್ಳುವ ಹೊಣೆ ನನ್ನ ಮೇಲಿದೆ,” ಎಂದರು.
“ಇಂದಿನ ರಾಜ್ಯ ರಾಜಕೀಯ ಸ್ಥಿತಿಯಲ್ಲಿ ರಾಜೀನಾಮೆ ಸ್ವಯಂ ಪ್ರೇರಿತವಾ ಅಲ್ಲವಾ ಎಂಬುದನ್ನು ನಿರ್ಧರಿಸುವುದು ಸಾರ್ವಜನಿಕರಿಗೆ ಬಿಡುತ್ತೇನೆ. ಆದರೆ ನನ್ನ ಜವಾಬ್ದಾರಿಗಳ ಪ್ರಕಾರ ನಾನು ತನಿಖೆ ಮಾಡಬೇಕಾಗುತ್ತದೆ. ರಾಜ್ಯದ ಜನರ ಹಂಗಿನ ಮೇಲೆ ನಾನು ಬದುಕುತ್ತೇನೆ, ಸಂವಿಧಾನದ ಆಶಯದ ಮೇಲಿನ ಹಂಗಿನ ಮೇಲೆ ನಾನು ಬದುಕುತ್ತೇನೆ. ಇದನ್ನು ಹೊರತುಪಡಿಸಿ ಇನ್ಯಾರ ಹಂಗಲ್ಲೂ ನಾನಿಲ್ಲ,” ಎಂದು ತಮ್ಮ ಸ್ವಾಭಿಮಾನ ಮತ್ತು ಸಂವಿಧಾನ ಪರವಾದ ನಿಲುವನ್ನು ಸ್ಪಷ್ಟಪಡಿಸಿದರು.
“ನನಗೆ ಎಪ್ಪತ್ತು ವರ್ಷ ವಯಸ್ಸಾಗಿದೆ. ನಾನೇನು ಇನ್ನೂ ನೂರು ವರ್ಷ ಬದುಕುವುದಿಲ್ಲ. ಆದರೆ ನೆಮ್ಮದಿಯ ಸಾವಾದರೂ ಬೇಕು. ಬೆಳಗ್ಗೆ ತಿಂಡಿಗೊಂದು ಪಕ್ಷ, ಮಧ್ಯಾಹ್ನ ಊಟಕ್ಕೊಂದು ಪಕ್ಷ, ರಾತ್ರಿ ಊಟಕ್ಕೆ ಮತ್ತೊಂದು ಪಕ್ಷ ಎಂದರೆ ಎಷ್ಟು ಸರಿ. ನಾನು ರಾಜೀನಾಮೆ ನೀಡಿದ ಶಾಸಕರಿಗೆ ಕೇಳಲು ಬಯಸುತ್ತೇನೆ? ನಿಮ್ಮ ಸದನದ ಸ್ಪೀಕರ್ ಅವರನ್ನು ಭೇಟಿ ಮಾಡಲು ಸುಪ್ರೀಂ ಕೋರ್ಟ್ನ ಅವಶ್ಯಕತೆ ಇತ್ತಾ? ಕರ್ನಾಟಕದಲ್ಲಿರುವವರು ಸಮಯ ನೋಡಿ ಬಂದು ಭೇಟಿ ಆಗುವ ಬದಲು, ಮುಂಬೈಗೆ ಹೋಗಿ ಕೂತು ನಂತರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು ಸರಿಯೇ? ನನಗೆ ಮಾಹಿತಿ ನೀಡಿ ಬಂದು ಭೇಟಿ ಮಾಡಬೇಕಿತ್ತು. ಅವರೇ ಬರದೇ, ನನ್ನ ಮೇಲೆ ಆರೋಪ ಮಾಡುವುದು ಎಷ್ಟು ಸರಿ,” ಎಂದು ಪ್ರಶ್ನೆ ಮಾಡಿದರು.
ಇಷ್ಟೆಲ್ಲಾ ಪೊಲೀಸ್ ಭದ್ರತೆಯಲ್ಲಿ ಬಂದು ರಾಜೀನಾಮೆ ನೀಡಬೇಕಿತ್ತೇ. ಸುಪ್ರೀಂಕೋರ್ಟ್ನಿಂದ ರಕ್ಷಣೆ ಬಯಸಬೇಕಿತ್ತಾ. ಅವರು ನೇರವಾಗಿ ನನ್ನನ್ನೇ ಬಂದು ಭೇಟಿಯಾಗಿದ್ದರೆ, ನಾನೇ ಅವರ ಬೇಕಾದ ರಕ್ಷಣೆ ಒದಗಿಸುತ್ತಿದ್ದೆ. ಅದನ್ನು ಬಿಟ್ಟು ಇವರು ಮುಂಬೈಗೆ ಹೋಗಿ, ಕುಳಿತು, ಸುಪ್ರೀಂಕೋರ್ಟ್ ಮೆಟ್ಟಿಲೇರಿದರು ಎಂದು ರಾಜೀನಾಮೆ ನೀಡಿದ ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದರು.
ಮುಂದುವರೆದ ಅವರು, “ಸಂವಿಧಾನದ ಕಲಂ 190ರ ಪ್ರಕಾರ ಕ್ರಮಬದ್ಧವಾಗಿ ರಾಜೀನಾಮೆ ಈಗ ನೀಡಿದ್ದಾರೆ, ಅದನ್ನು ಸ್ವೀಕರಿಸಿದ್ದೇನೆ. ಆದರೆ ಈಗಿಂದೀಗಲೇ ರಾಜೀನಾಮೆ ಅಂಗೀಕರಿಸಬೇಕು ಎಂದರೆ ಸಾಧ್ಯವಿಲ್ಲ. ಅವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರ ಎಂಬ ಬಗ್ಗೆ ನಾನು ರಾತ್ರಿಯೆಲ್ಲಾ ಕುಳಿತು ಯೋಚಿಸಬೇಕು. ಯಾಕೆಂದರೆ ನಾನಿಲ್ಲದ ಹೊತ್ತಲ್ಲಿ ರಾಜೀನಾಮೆ ನೀಡಿ, ಮುಂಬೈಗೆ ಹೋಗಿ, ಪತ್ರಿಕಾಗೋಷ್ಠಿ ಮಾಡಿದ್ದಾರೆ. ಅವರು ಯಾಕೆ ಅಲ್ಲಿಗೆ ಹೋದರು, ಅಲ್ಲೇನು ನಡೆಯಿತು. ಎಲ್ಲವೂ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ನಾನು ತನಿಖೆ ನಡೆಸಿ, ಸಮಾಲೋಚಿಸಿ, ಚಿಂತಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇನೆ. ಈ ಎಲ್ಲ ಪ್ರಕ್ರಿಯೆಗಳನ್ನು ವಿಡಿಯೋ ಚಿತ್ರೀಕರಣ ಮಾಡಿಸಿದ್ದೇನೆ. ನಾಳೆ ಎಲ್ಲಾ ದಾಖಲೆಗಳು, ವಿಡಿಯೋವನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸುತ್ತೇನೆ” ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದರು.
Comments are closed.