ಕರಾವಳಿ

ತಡರಾತ್ರಿ ವೈದ್ಯೆಯೊಬ್ಬರಿಗೆ ಸಹಾಯ ಮಾಡಿದ ಎಎಸ್ಸೈ ಸಂತೋಷ್‌ ಅವರಿಗೆ ಅಭಿನಂದನೆ ಸಲ್ಲಿಸಿದ ಕಮಿಷನರ್

Pinterest LinkedIn Tumblr

ಮಂಗಳೂರು : ಅನಾರೋಗ್ಯಕ್ಕೀಡಾದ ತಂದೆಗೆ ಔಷಧಿ ತರಲು ತಡರಾತ್ರಿ ರಸ್ತೆ ಬದಿ ನಿಂತಿದ್ದ ವೈದ್ಯೆಯೊಬ್ಬರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದ ಪೊಲೀಸ್ ಸಿಬ್ಬಂದಿಯನ್ನು ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅಭಿನಂದಿಸಿದ್ದಾರೆ.

ಇತ್ತೀಚಿಗೆ ತಡರಾತ್ರಿ 1:30ರ ವೇಳೆಗೆ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯ ಎಎಸ್ಸೈ ಸಂತೋಷ್ ಮತ್ತು ಚಾಲಕ ನಾಗರಾಜ್ ಗಸ್ತಿನಲ್ಲಿದ್ದರು. ಈ ಸಂದರ್ಭ ಶಿವಭಾಗ್ ಬಳಿ ವೈದ್ಯೆಯೊಬ್ಬರು ಅಡ್ಡಾದಿಡ್ಡಿ ಹೋಗುತ್ತಿದ್ದುದನ್ನು ಕಂಡು ಪೊಲೀಸರು ವಿಚಾರಿಸಿದ್ದಾರೆ. ಈ ಸಂದರ್ಭ ಮಹಿಳೆ “ತಂದೆಗೆ ಹುಷಾರಿಲ್ಲ, ತುರ್ತಾಗಿ ಔಷಧಿಗೆ ಮೆಡಿಕಲ್‌ಗೆ ಹೋಗಬೇಕಾಗಿದೆ. ಅದಕ್ಕೆ ರಿಕ್ಷಾಕ್ಕೆ ಕಾಯುತ್ತಿದ್ದೇನೆ” ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪೊಲೀಸರು, “ರಾತ್ರಿ ಹೊತ್ತು ಈ ರೀತಿ ರಸ್ತೆ ಬದಿ ನಿಲ್ಲುವುದು ಸರಿಯಲ್ಲ, ನೀವು ನಮ್ಮ ಗಾಡಿಯಲ್ಲಿ ಬನ್ನಿ, ಔಷಧಿ ಕೊಟ್ಟು ಕಳುಹಿಸುತ್ತೇವೆ” ಎಂದರು. ಇದಕ್ಕೆ ಮಹಿಳೆ ಸಹಮತ ವ್ಯಕ್ತಪಡಿಸಿದ್ದು, ಬಳಿಕ ಪೊಲೀಸರು, ವಾಹನದಲ್ಲಿ ಕರೆದುಕೊಂಡು ಹೋಗಿ ಕರಂಗಲ್ಪಾಡಿ ಮೆಡಿಕಲ್‌ವೊಂದರಲ್ಲಿ ಔಷಧಿ ತೆಗೆಸಿಕೊಟ್ಟು ಮನೆಗೆ ಬಿಟ್ಟಿದ್ದರು.

ಟ್ವೀಟ್ ಮಾಡಿದ ಡಾಕ್ಟರ್: ಮನೆಗೆ ಬಂದ ಬಳಿಕ ವೈದ್ಯೆಯು ತಂದೆಗೆ ಔಷಧಿ ನೀಡಿದ್ದಲ್ಲದೆ, ಪೊಲೀಸರ ಸಹಾಯವನ್ನು ನೆನೆದು ಪೊಲೀಸ್ ಆಯುಕ್ತರಿಗೆ ಟ್ವೀಟ್ ಮಾಡಿದ್ದರು. ಸಂದೇಶದಲ್ಲಿ “ಮಂಗಳೂರು ಪೊಲೀಸರನ್ನು ಹೃದಯಸ್ಪರ್ಶಿಯಾಗಿ ನಾನು ಅಭಿನಂದಿಸುತ್ತೇನೆ. ತಡರಾತ್ರಿ ನನ್ನ ತಂದೆ ಹುಷಾರಿಲ್ಲದ ಕಾರಣ ಔಷಧಿ ಬೇಕಿತ್ತು. ಕದ್ರಿ ಠಾಣೆಯ ಸಂತೋಷ್ ಎಂಬವರು ರಾತ್ರಿ ಗಸ್ತಿನಲ್ಲಿದ್ದಾಗ ನಾನು ರಸ್ತೆ ಬದಿ ಕಾಯುತ್ತಿರುವುದನ್ನು ನೋಡಿದರು. ಬಳಿಕ ನನ್ನನ್ನು ಪೊಲೀಸ್ ವಾಹನದಲ್ಲೇ ಮೆಡಿಕಲ್‌ಗೆ ಕರೆದುಕೊಂಡು ಹೋಗಿ ಔಷಧಿ ತೆಗೆದುಕೊಂಡ ಬಳಿಕ ಮರಳಿ ಮನೆಗೆ ಬಿಟ್ಟಿದ್ದಾರೆ. ಈ ಸಿಬ್ಬಂದಿಗೆ ನನ್ನ ವಂದನೆ…. ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.

ಆಯುಕ್ತರ ಅಭಿನಂದನೆ: ಮಾನವೀಯತೆ ಮೆರೆದ ಎಎಸ್ಸೈ ಸಂತೋಷ್ ಅವರನ್ನು ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಕಚೇರಿಗೆ ಕರೆದು ಅಭಿನಂದಿಸಿ, ಸಂತೋಷ್ ಅವರ ಕಾರ್ಯವೈಖರಿ ಅನ್ಯರಿಗೆ ಮಾದರಿ ಎಂದು ಶ್ಲಾಸಿದ್ದಾರೆ.

Comments are closed.