ಮಡಿಕೇರಿ: ಶಾಸಕ ಸ್ಥಾನಕ್ಕೆ ಅಡಗೂರು ಎಚ್.ವಿಶ್ವನಾಥ್ ರಾಜೀನಾಮೆ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ನಿರ್ದೇಶನದಂತೆ ಮೈತ್ರಿ ಶಾಸಕರು ಕೋಟಿ, ಕೋಟಿ ಹಣಕ್ಕೆ ಮಾರಾಟವಾಗಿದ್ದಾರೆ ಎಂದು ಆರೋಪಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕನಿಷ್ಠ ಕಾರ್ಯಕರ್ತರ ಅಭಿಪ್ರಾಯ ಕೇಳದೆ ಎಚ್. ವಿಶ್ವನಾಥ್ ರಾಜೀನಾಮೆ ನೀಡಿದ್ದು ತಪ್ಪು, ಜೆಡಿಎಸ್ ನನಗೆ ರಾಜಕೀಯ ಪುನರ್ಜನ್ಮ ನೀಡಿದೆ ಎಂದಿದ್ದರು. ಇದೀಗ ಸರ್ಕಾರ ಉರುಳಿಸಲು ಮುಂದಾಗಿದ್ದಾರೆ. ಜೆಡಿಎಸ್ನಲ್ಲಿ ಎಲ್ಲಾ ರೀತಿಯ ರಾಜಕೀಯ ಸವಲತ್ತುಗಳನ್ನು ಅನುಭವಿಸಿ ಪಕ್ಷಕ್ಕೆ ಅನ್ಯಾಯ ಮಾಡಿದ್ದಾರೆ . ಮುಂದೊಂದು ದಿನ ಬಿಜೆಪಿಯಲ್ಲೂ ಇಂತಹ ಬೆಳವಣಿಗೆಗಳು ತಪ್ಪಿದ್ದಲ್ಲ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ ಗಣೇಶ್ ತಿಳಿಸಿದರು.
ಈ ಹಿಂದೆ ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನಲೆ ಶಾಸಕ ಹೆಚ್ ವಿಶ್ವನಾಥ್ ಅವರ ರಾಜೀನಾಮೆ ವಿರೋಧಿಸಿ ಜೆಡಿಎಸ್ನಿಂದ ಆಕ್ರೋಶ ವ್ಯಕ್ತವಾಗಿತ್ತು. ವಿಶ್ವನಾಥ್ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಕೋರಿ ಜೆಡಿಎಸ್ ಕಾರ್ಯಕರ್ತರು ತಮ್ಮ ಸಿಟ್ಟನ್ನು ಹೊರಹಾಕಿದ್ದರು. ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ವಿಶ್ವನಾಥ್ ವಿರುದ್ಧ ಅವಹೇಳನಕಾರಿ ಬರಹ ಬರೆದಿದ್ದಾರೆ. ಈ ಮೂಲಕ ವಿಶ್ವನಾಥ್ ಅವರು ರಾಜೀನಾಮೆ ನೀಡಿರುವುದನ್ನು ತೀವ್ರವಾಗಿ ಕಾರ್ಯಕರ್ತರು ವಿರೋಧಿಸಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಒಟ್ಟಾರೇ 14 ಮಂದಿ ಶಾಸಕರು ಸ್ಪೀಕರ್ ಗೆ ರಾಜೀನಾಮೆ ನೀಡಿರುವುದಾಗಿ ಜೆಡಿಎಸ್ ಪಕ್ಷದ ಶಾಸಕ ಹೆಚ್. ವಿಶ್ವನಾಥ್ ಸ್ಪಷ್ಟಪಡಿಸಿದ್ದರು. ಜನರ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ ಸಮ್ಮಿಶ್ರ ಸರ್ಕಾರ ವಿಫಲವಾಗಿದೆ. ಉಭಯ ಪಕ್ಷಗಳ ಶಾಸಕರನ್ನು ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.ಸರ್ಕಾರದ ನಡೆ , ಧೋರಣೆ ವಿರುದ್ಧ ರಾಜೀನಾಮೆ ಸಲ್ಲಿಸಿರುವುದಾಗಿ ಹೆಚ್. ವಿಶ್ವನಾಥ್ ತಿಳಿಸಿದ್ದರು.
Comments are closed.