ಗುವಾಹತಿ(ಜುಲೈ 12): ಅಸ್ಸಾಮ್ ರಾಜ್ಯದಲ್ಲಿ ಭೀಕರ ನೆರೆ ಪ್ರವಾಹ, ಭೂಕುಸಿತ ಸಂಭವಿಸುತ್ತಿದ್ದು, ಲಕ್ಷಾಂತರ ಜನರು ಸಂತ್ರಸ್ತರಾಗಿದ್ದಾರೆ. ಅರ್ಧರಾಜ್ಯವೇ ಪ್ರವಾಹಕ್ಕೆ ಸಿಲುಕಿ ತತ್ತರಿಸಿಹೋಗುತ್ತಿದೆ. ಈವರೆಗೆ 6ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ವರದಿಯಾಗಿದ್ದು, 4.23 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ.
ಗೋಲಾಘಟ್ ಮತ್ತು ದಿಮಾ ಹಸಾವೋ ಜಿಲ್ಲೆಗಳಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆಂದು ಪಿಟಿಐ ವರದಿ ಮಾಡಿದೆ. ಬಾರ್ಪೇಟಾದಲ್ಲಿ ಅತೀ ಹೆಚ್ಚು ಪ್ರವಾಹ ಮತ್ತು ಭೂಕಸಿತಗಳು ಸಂಭವಿಸಿವೆ. ರಾಜ್ಯದ ಅನೇಕ ಕಡೆ ರೈಲು ಸಂಚಾರ ಸ್ಥಗಿತಗೊಂಡಿದೆ.
ಧೇಮಜಿ, ಲಖೀಮ್ಪುರ್, ಬಿಸ್ವನಾಥ್, ನಲ್ಬಾರಿ, ಚಿರಾಂಗ್, ಗೋಲಘಾಟ್, ಮಜೂಲಿ, ಜೋರ್ಹಾತ್, ದಿಬ್ರುಗಡ್, ನಾಗಾಂವ್, ಮೊರಿಗಾಂವ್, ಕೋಕ್ರಜಾರ್, ಬೋಂಗೈಗಾಂವ್, ಬಕಸ, ಸೋನಿತ್ಪುರ್, ದರ್ರಾಂಗ್ ಮತ್ತು ಬಾರ್ಪೇಟಾ ಜಿಲ್ಲೆಗಳ 800 ಹಳ್ಳಿಗಳು ಹೆಚ್ಚೂಕಡಿಮೆ ಜಲಾವೃತಗೊಂಡಿವೆ.
ಕಾಜಿರಂಗ ನ್ಯಾಷನಲ್ ಪಾರ್ಕ್ನಲ್ಲಿ ವನ್ಯಜೀವಿಗಳು ಗಾಬರಿಗೊಂಡಿವೆ. ಅಲ್ಲಿಯ ಸಮೀಪ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ತಡೆಗಳನ್ನು ನಿರ್ಮಿಸಲಾಗಿದೆ. ವನ್ಯಜೀವಿಗಳು ಹೆದ್ದಾರಿಗೆ ನುಗ್ಗುವ ಸಾಧ್ಯತೆ ಇರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಹಾಗೆಯೇ, ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ವೇಗಕ್ಕೆ ಮಿತಿ ಸೂಚಿಸಲಾಗಿದೆ.
ಬ್ರಹ್ಮಪುತ್ರ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಇರುವುದರಿಂದ ಪ್ರಯಾಣಿಕರನ್ನು ಕರೆದೊಯ್ಯುವ ಹಡಗು, ದೋಣಿಗಳನ್ನು ತಡೆ ಹಿಡಿಯಲಾಗಿದೆ.
Comments are closed.