ಕುಂದಾಪುರ: ಇದು ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಮಗುವಿನ ನಾಪತ್ತೆ, ಅಪಹರಣ ನಾಟಕ ಪ್ರಕರಣ. ಇದೀಗಾ ಈ ಪ್ರಕರಣದ ನಿಜಾಂಶ ಬಯಲಾಗಿದ್ದು ಪೊಲೀಸರು ತಾಯಿಯೇ ಇದರ ಸೂತ್ರಧಾರಿ ಎಂಬುದನ್ನು ಖಚಿತಪಡಿಸಿದ್ದಾರೆ. ಕುಂದಾಪುರದ ಯಡಮೊಗೆಯಲ್ಲಿ ನಡೆದ ಕಿಡ್ನಾಪ್..ಮರ್ಡರ್ ಹೈಡ್ರಾಮದ ಕುರಿತ ಕಂಪ್ಲೀಟ್ ಸ್ಟೋರಿಯಿದು.
ಯಾರೇ ನೋಡಿದ್ರೂ ಎತ್ತಿಕೊಂಡು ಮುದ್ದಾಡಬೇಕು ಅನ್ನೋವಷ್ಟು ಮುದ್ದಾದ ಪುಟಾಣಿ ಕಂದಮ್ಮ. ಈಗಷ್ಟೇ ಒಂದು ವರ್ಷ ಮೂರು ತಿಂಗಳು ಕಳೆಯುತ್ತಿತ್ತು. ಆ ತಡರಾತ್ರಿ ಪುಟಾಣಿ ಕಂದಮ್ಮ ತನ್ನ ಹೆತ್ತಮ್ಮ, ಇನ್ನೋರ್ವ ಅಣ್ಣನೊಂದಿಗೆ ಮನೆಯಲ್ಲಿ ಮಲಗಿದ್ದು ಮಾರನೇ ದಿನದ ಬೆಳಕು ನೋಡಿಯೇ ಇರಲಿಲ್ಲ. ಬಳಿಕ ಆ ಕಂದ ಪತ್ತೆಯಾಗಿದ್ದು ಹೊಳೆಯಲ್ಲಿ ಶವವಾಗಿ. ಮೊದಲಿಗೆ ಕಿಡ್ನಾಪ್ ಅನ್ನೋ ವಿಚಾರದಲ್ಲಿ ಬೆಚ್ಚಿಬೀಳಿಸಿದ ಈ ಪ್ರಕರಣ ಇದಾಗಿತ್ತು. ಪೊಲೀಸರು, ಮಾಧ್ಯಮ ಹಾಗೂ ಜನರನ್ನು ಕೂಡ ಈ ಪ್ರಕರಣ ಗೊಂದಲಕ್ಕೀಡುಮಾಡಿತ್ತು. ಅಷ್ಟಕ್ಕೂ ಇಲ್ಲಿ ನೈಜ್ಯತೆ ಮುಚ್ಚಿಟ್ಟು ಡ್ರಾಮಾ ಕ್ರಿಯೇಟ್ ಮಾಡಿದವಳೇ ಹಾಲುಗಲ್ಲದ ಮಗುವಿನ ಅಮ್ಮ.
(ಆರೋಪಿ ರೇಖಾ)
ತಾಯಿ ಮಾಡಿದ ಡ್ರಾಮಾ!
ನಂಬಲಿಕ್ಕಾಗದೇ ಇದ್ರೂ ಕೂಡ ಇದು ನಡೆದ ವಾಸ್ತವ. ಕುಂದಾಪುರ ತಾಲೂಕಿನ ಯಡಮೊಗೆ ಕುಮ್ಟಿಬೇರು ಎಂಬಲ್ಲಿ ಸಾನ್ವಿಕಾ ಎನ್ನುವ ಒಂದೂಕಾಲು ವರ್ಷದ ಹೆಣ್ಣು ಮಗುವನ್ನು ಆಕೆ ತಾಯಿಯೇ ಕೊಂದು ಬಿಟ್ಟಿದ್ದಳು. ಎಲ್ಲಿ ತಾನು ಮಾಡಿದ್ದು ಅವಾಂತರ ಆಯ್ತೋ ಎನ್ನೋ ಭಯ ಕಾಡಿದ್ದೇ ತಡ ಆಕೆ ಇದೊಂದು ಅಪಹರಣ ಅನ್ನೋ ಡ್ರಾಮ ಮಾಡಿಬಿಟ್ಟಿದ್ದಳು. ಬೆಳ್ಳಂಬೆಳಿಗ್ಗೆ ತನ್ನ ಮಗು ಕಿಡ್ನಾಪ್ ಆಗಿದೆ, ಕಿಡ್ನಾಪ್ ಮಾಡಿದಾತ ಹೊಳೆಯಲ್ಲಿಳಿದು ನಾಪತ್ತೆಯಾದ, ಹಿಂದೆ ಸಾಗಿದ ತಾನು ಹಾಊ ಮಗ ಸ್ಥಳೀಯರ ಸಹಾಯ ಪಡೆದು ಬದುಕುಳಿದೆವು ಅನ್ನೋ ವಿಡಿಯೋ ಹೇಳಿಕೆಯೊಂದು ಮಾಧ್ಯಮಕ್ಕೆ, ಪೊಲೀಸರಿಗೆ ಸಿಕ್ಕಿದ್ದೆ ಎಲ್ಲರೂ ಆ ಕುಗ್ರಾಮದತ್ತ ದೌಡಾಯಿಸುವಂತೆ ಮಾಡಿಬಿಟ್ಟಿದ್ದಳು. ಅಷ್ಟೇ ಯಾಕೆ ಉಡುಪಿ ಜಿಲ್ಲಾ ಎಸ್ಪಿಯೇ ಖುದ್ದು ಬೆಳಗ್ಗೆನಿಂದ ಸಂಜೆತನಕ ಆ ಊರಿನಲ್ಲಿ ಕುಳಿತು ತಲೆಕೆಡಿಸಿಕೊಳ್ಳುವಂತೆ ಮಾಡಿದ್ದಳು ಈ ಖತರ್ನಾಕ್. ಏನಾಯ್ತು..ಮುಂದೇನು? ಎಂಬ ತಲೆಬಿಸಿಯಲ್ಲಿ ಎಲ್ಲರೂ ಹುಡುಕಾಟ, ವಿಚಾರಣೆಯಲ್ಲಿದ್ದರೇ ತಾನು ಮಾತ್ರ ಗಟ್ಟಿಗಿತ್ತಿಯಂತೆ ಹೇಳಿಕೆಗಳನ್ನು ಕೊಡುತ್ತಾ ನಾರ್ಮಲ್ ಆಗಿದ್ದಳು ಆಕೆ.
ಅಂದು ನಡೆದಿದ್ದೇನು?
ಹೊಸಂಗಡಿ ಸಂಡೂರಿನ ಪವರ್ ಹೌಸ್’ನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಸಂತೋಷ್ ನಾಯ್ಕ್ ಎನ್ನುವಾತನ ಪತ್ನಿಯೇ ಈ ರೇಖಾ. ಐದು ವರ್ಷದ ಓರ್ವ ಮಗ, ಒಂದೂಕಾಲು ವರ್ಷದ ಪುಟಾಣಿ ಮಗು ಇವರಿಬ್ಬರಿಗಿತ್ತು. ರಾತ್ರಿ ಪಾಳಿಯಲ್ಲಿ ಕೆಲಸವಿದ್ದಾಗ ಸಂತೊಷ್ ತಾಯಿಯೊಂದಿಗೆ ರೇಖಾ ಹಾಗೂ ಮಕ್ಕಳಿಬ್ಬರು ಆ ಮನೆಯಲ್ಲಿರುತ್ತಿದ್ರು. ಆದರೆ ಮೊನ್ನೆ ಗುರುವಾರ ರಾತ್ರಿ ಸಂತೋಷ್ ಕೆಲಸಕ್ಕೆ ಹೋಗಿದ್ರೆ ಆತನ ತಾಯಿ ಮಗಳ ಮನೆಯಲ್ಲಿದ್ರು. ರೇಖಾ ಮಾತ್ರ ಇಬ್ಬರು ಮಕ್ಕಳ ಜೊತೆ ಮನೆಲಿದ್ದು ಬೆಳಿಗ್ಗೆ ಸಣ್ಣ ಮಗು ಸಾನ್ವಿಕಾಳ ಕಿಡ್ನಾಪ್ ಡ್ರಾಮಾ ಮಾಡಿದ್ಲು. ಪೊಲೀಸರಿಗೆ ಮೊದಲೇ ರೇಖಾಳ ವಿಭಿನ್ನ ಹೇಳಿಕೆ ಬಗ್ಗೆ ಅನುಮಾನ ಮೊದಲೇ ಇತ್ತು. ಆದರೂ ಕೂಡ ಕೂಲಂಕುಷ ವಿಚಾರಣೆ ಸಲುವಾಗಿ ರೇಖಾಳ ಮೇಲೆ ನಿಗಾ ಇಟ್ಟು ತನಿಖೆ ಮುಂದುವರೆಸಿದ್ದು ಸಂಪೂರ್ಣ ಮಾಹಿತಿಯನ್ನು ಕಲೆಹಾಕಿಬಿಟ್ಟಿದ್ರು. ಇದಾಗಿ ಒಂದೇ ದಿನಕ್ಕೆ ಸಾನ್ವಿಕಾಳ ಮೃತದೇಹ ಮನೆಯಿಂದ ಸುಮಾರು 2 ಕಿ.ಮೀ ದೂರದಲ್ಲಿ ಕಾರೂರು ಬಳಿ ಕುಬ್ಜಾ ನದಿಯಲ್ಲಿ ಸಿಕ್ಕಿತ್ತು. ಇಷ್ಟಾಗಿದ್ದೇ ತಡ ಪೊಲೀಸರ ತಲೆಯಲ್ಲಿ ಇದು ಅಪಹರಣವಲ್ಲ..ಇದೊಂದು ವ್ಯವಸ್ಥಿಥ ಕೊಲೆಯೆಂಬುದು ಮೂಡಿತ್ತು. ಎಸ್ಪಿ ನಿಶಾ ಜೇಮ್ಸ್ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್ ನೇತೃತ್ವ ಪೊಲೀಸರು ತನಿಖೆ ನಡೆಸಿದ್ದಾರೆ. ಸಾಯಬೇಕೆಂಬ ಉದ್ದೇಶದಿಂದ 5 ವರ್ಷದ ಮಗ ಹಾಗೂ ಮಗು ಸಾನ್ವಿಕಾಳನ್ನು ಎತ್ತಿಕೊಂಡು ಮನೆಯ ಪಕ್ಕದ ಕುಬ್ಜಾ ಹೊಳೆಗೆ ಇಳಿದಿದ್ದು, ಬಲಕೈಯಲ್ಲಿದ್ದ ಸಾನ್ವಿಕಾಳು ಕೈಯಿಂದ ಜಾರಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ತಾನು ಹಾಗೂ ಇನ್ನೊಂದು ಮಗು ಬಚಾವ್ ಆದ ಕಥೆ ಬಾಯ್ಬಿಟ್ಟಿದ್ದಾಳೆ. ತಾನು ಹೆದರಿ ಮಗು ಅಪಹರಣವಾದಂತೆ ದೂರು ನೀಡಿರುವುದಾಗಿ ಹೇಳಿದ್ದಾಳೆ.
ರೇಖಾಳಿಗೆ ಮಾನಸಿಕ ಖಿನ್ನತೆ?
ಆಕೆ ನಡವಳಿಕೆ ಬಗ್ಗೆ ಅನುಮಾನಗೊಂಡ ಪೊಲೀಸರು ನುರಿತ ಮನೋ ವೈದ್ಯರಿಂದ ಆಪ್ತ ಸಮೋಲೋಚನೆ ನಡೆಸಿ ವಿಚಾರಣೆ ನಡೆಸಿದ್ದಾರೆ. ವೈದ್ಯರು ಆಕೆಯು ಮಾನಸಿಕ ಖಿನ್ನತೆಯಲ್ಲಿದ್ದು ಸೂಕ್ತ ಚಿಕಿತ್ಸೆ ಅಗತ್ಯವೆಂದು ಸಲಹೆ ನೀಡಿದ ಹಿನ್ನೆಲೆ ಡಾ.ಎ.ವಿ. ಬಾಳಿಗಾ ಮೆಮೋರಿಯಲ್ ಆಸ್ಪತ್ರೆ ಉಡುಪಿಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮುಂದೇನು?
ಆಕೆ ಹೇಳಿಕೆಯನ್ನು ಆಧರಿಸಿ ಪ್ರಕರಣದಲ್ಲಿ ಐಪಿಸಿ ಕಲಂ 302(ಕೊಲೆ), 307(ಕೊಲೆ ಯತ್ನ) ಮತ್ತು 309(ಆತ್ಮಹತ್ಯೆ ಯತ್ನ) ಅಡಿಯಲ್ಲಿ ತನಿಖೆಯನ್ನು ಮುಂದುವರೆಸಲಾಗಿದೆ. ರೇಖಾ ಚಿಕಿತ್ಸೆಯನ್ನು ಮುಗಿಸಿ ಮಾನಸಿಕ ಖಿನ್ನತೆಯಿಂದ ಹೊರ ಬಂದು ಸಂಪೂರ್ಣ ಶಕ್ತಳಾದ ಮೇಲೆ ತನಿಖಾಧಿಕಾರಿಯಾಗಿರುವ ಕುಂದಾಪುರ ಡಿವೈಎಸ್‌ಪಿ ನೇತ್ರತ್ವ ಸಮಗ್ರ ತನಿಖೆ ನಡೆಯಲಿದೆ. ಒಟ್ಟಿನಲ್ಲಿ ತನ್ನ ಕೈಯಾರೆ ಕರುಳಕುಡಿಯನ್ನು ಕೊಂದ ತಾಯಿಗೆ ಇದೀಗಾ ಕ್ರೂರಿ ಪಟ್ಟ ಸಿಕ್ಕಿದೆ. ಅಷ್ಟಕ್ಕೂ ಆಕೆ ಆತ್ಮಹತ್ಯೆ ದಾರಿ ಹಿಡಿದಿದ್ಯಾಕೆ? ಈ ಪ್ರಕರಣದಲ್ಲಿ ಬೇರೆ ಯಾವ ಹಿನ್ನೆಲೆಯಿದೆಯೇ ಅನ್ನೋದನ್ನು ಪೊಲೀಸರು ಬಯಲಿಗೆಳೆಯಬೇಕಿದೆ.
(ವರದಿ- ಯೋಗೀಶ್ ಕುಂಭಾಸಿ)
ಇದನ್ನೂ ಓದಿರಿ-
ಹೆತ್ತಮ್ಮನ ಮಡಿಲಲ್ಲಿ ಮಲಗಿದ್ದ ಕಂದಮ್ಮನ ಅಪಹರಣ; ಸ್ಥಳದಲ್ಲಿ ಎಸ್ಪಿ ಮೊಕ್ಕಾಂ, ಡಿವೈಎಸ್ಪಿಯಿಂದ ತನಿಖೆ (Video)
ಯಡಮೊಗೆಯಲ್ಲಿ ಅಪಹರಣಕ್ಕೊಳಗಾಗಿತ್ತೆನ್ನಲಾದ ಮಗುವಿನ ಶವ ಪತ್ತೆ: ಮುಂದುವರಿದ ತನಿಖೆ
Comments are closed.