ಕರ್ನಾಟಕ

ಸುಪ್ರೀಂ​ಗೆ ಮತ್ತೊಂದು ಪ್ರಮಾಣಪತ್ರ ಸಲ್ಲಿಸಿದ ಸ್ಪೀಕರ್

Pinterest LinkedIn Tumblr


ನವದೆಹಲಿ: ಸುಪ್ರೀಂಕೋರ್ಟಿಗೆ ಕರ್ನಾಟಕ ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್​ಕುಮಾರ್​ ಅವರು 18 ಪುಟಗಳ ಮತ್ತೊಂದು ಪ್ರಮಾಣಪತ್ರ ಸಲ್ಲಿಸಿದ್ದಾರೆ.

ಸ್ಪೀಕರ್ ಸಲ್ಲಿಸಿರುವ 18 ಪುಟಗಳ ಪ್ರಮಾಣಪತ್ರದಲ್ಲಿ ಶಾಸಕರು ರಾಜೀನಾಮೆ ನೀಡಿರುವ ಟೈಮ್​ಲೈನ್ ಒಳಗೊಂಡಿದೆ. ಜೊತೆಗೆ ತಾವು ಕೋರ್ಟ್​ಗೆ ಹೇಳಬೇಕಿರುವುದನ್ನು ಸವಿವರವಾಗಿ ವಿವರಿಸಿದ್ದಾರೆ.

ಜು. 11ರಂದು 2 ಗಂಟೆಗೆ ಒಂದು ಪ್ರಮಾಣಪತ್ರ ಸಲ್ಲಿಸಿದ್ದೆ. ಸಮಯದ ಕೊರತೆಯಿಂದ ವಿವರವಾಗಿ ಹೇಳಲು ಸಾಧ್ಯವಾಗಿರಲಿಲ್ಲ. ಅತೃಪ್ತ ಶಾಸಕರು ದುರುದ್ದೇಶದಿಂದ ನನ್ನ ವಿರುದ್ಧ ದೂರು ನೀಡಿದ್ದಾರೆ. ಅವರು ನೀಡಿರುವ ದೂರಿನಲ್ಲಿ ಹುರುಳಿಲ್ಲ. ಜು. 6ರಂದು ಮಾಹಿತಿ ನೀಡದೆ ಕಚೇರಿಗೆ ಬಂದು ರಾಜೀನಾಮೆ ಕೊಟ್ಟಿದ್ದಾರೆ. ಅವರುಗಳಿಗೆ ನಮ್ಮ ಕಚೇರಿಯಿಂದ ಸ್ವೀಕೃತಿ ಪ್ರತಿ ನೀಡಲಾಗಿದೆ. ಅಂದು ನೀಡಿದ 13 ರಾಜೀನಾಮೆ ಪತ್ರಗಳನ್ನು ಪರಿಶೀಲಿಸಲಾಗಿದೆ. ಅವುಗಳಲ್ಲಿ 5 ರಾಜೀನಾಮೆಗಳು ಕ್ರಮಬದ್ದವಾಗಿವೆ, ಉಳಿದ 8 ರಾಜೀನಾಮೆಗಳು ಕ್ರಮಬದ್ದವಾಗಿಲ್ಲ. ಈ ಬೆಳವಣಿಗೆಯನ್ನು ರಾಜ್ಯಪಾಲರ ಗಮನಕ್ಕೆ ತರಲಾಗಿದೆ. ಜು. 10 ರಂದು ಮತ್ತೆ ರಾಜೀನಾಮೆ ಸಲ್ಲಿಸಿದ್ದಾರೆ. ಆ ಪ್ರಕ್ರಿಯೆಯ ವಿಡಿಯೋ ದಾಖಲೆಗಳನ್ನು ಸುಪ್ರೀಂಕೋರ್ಟ್ ಸಲ್ಲಿಸಿದೆ. ಜು. 10ರಂದು ಈ ಶಾಸಕರ ವಿರುದ್ಧ ಕಾಂಗ್ರೆಸ್ ಅನರ್ಹತೆ ಅರ್ಜಿ ಸಲ್ಲಿಸಿದೆ. ಇಬ್ಬರು ಶಾಸರ ವಿರುದ್ಧ ಈ ಮೊದಲೇ ಅನರ್ಹತೆ ಅರ್ಜಿ ಬಂದಿತ್ತು. ಇದರ ಬಗ್ಗೆ ಈಗಾಗಲೇ ವಿಚಾರಣೆ ನಡೆದಿದೆ. ಈಗ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿರುವ 8 ಶಾಸಕರ ವಿರುದ್ಧವೂ ಅನರ್ಹತೆ ದೂರು ದಾಖಲಾಗಿದೆ. ಇದನ್ನೆಲ್ಲಾ ಪರಿಶೀಲನೆ ನಡೆಸಬೇಕಾಗಿರುವುದರಿಂದ ತಡವಾಗುತ್ತಿದೆ. ಶಾಸಕರು ಈ ವಾಸ್ತವ ಮುಚ್ಚಿಟ್ಟು ನ್ಯಾಯಾಲಯದ ದಾರಿ ತಪ್ಪಿಸುತ್ತಿದ್ದಾರೆ ಎಂದು ಸ್ಪೀಕರ್ ರಮೇಶ್ ಕುಮಾರ್ ಪ್ರಮಾಣಪತ್ರದಲ್ಲಿ ವಿವರಿಸಿದ್ದಾರೆ.

ಸ್ಪೀಕರ್ ರಾಜೀನಾಮೆ ಅಂಗೀಕರಿಸಲು ತಡ ಮಾಡುತ್ತಿದ್ದಾರೆ ಎಂದು 10 ಶಾಸಕರು ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜು.10ರಂದು ಶಾಸಕರು ಸ್ಪೀಕರ್ ಅವರನ್ನು ಖುದ್ದಾಗಿ ಭೇಟಿಯಾಗಿ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಬೇಕು. ಮತ್ತು ಆ ರಾಜೀನಾಮೆಗಳ ಬಗ್ಗೆ ಅಂದೇ ಸ್ಪೀಕರ್​ ಒಂದು ತೀರ್ಮಾನಕ್ಕೆ ಬರಬೇಕು ಎಂದು ಸೂಚನೆ ನೀಡಿತ್ತು. ಆದರೆ, ರಾಜೀನಾಮೆಗಳನ್ನು ಅಧ್ಯಯನ ಮಾಡಲು ಸಮಯದ ಅವಶ್ಯಕತೆ ಇದೆ ಎಂದು ಜು.11ರ ವಿಚಾರಣೆ ವೇಳೆ ಹೇಳಿದ್ದರು. ನಂತರ ನ್ಯಾಯಾಲಯ ಶಾಸಕರ ರಾಜೀನಾಮೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿ, ಮಂಗಳವಾರಕ್ಕೆ ವಿಚಾರಣೆ ಮುಂದೂಡಿದೆ.

Comments are closed.