ಕರಾವಳಿ

ಬಾಲಕಿಗೆ ಅಶ್ಲೀಲ ವೀಡಿಯೊ ತೋರಿಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪಿಯ ಬಂಧನ

Pinterest LinkedIn Tumblr

ಮಂಗಳೂರು/ಕೊಣಾಜೆ: ಫ್ಯಾನ್ಸಿ ಅಂಗಡಿಯೊಂದಕ್ಕೆ ಬ್ಯಾಗ್ ಖರೀದಿಸಲು ಬಂದ ವಿದ್ಯಾರ್ಥಿನಿಯೋರ್ವಳಿಗೆ ಅಶ್ಲೀಲ ವೀಡಿಯೊ ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪುವಿನಲ್ಲಿ ನಡೆದಿದ್ದು,ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ದೇರಳಕಟ್ಟೆಯ ನಿವಾಸಿ ಸಲೀಂ ಝಕರಿಯ (40) ಎಂದು ಗುರುತಿಸಲಾಗಿದೆ. ಆರೋಪಿಯು ಪುತ್ತೂರಿನಲ್ಲಿ ನಡೆದಿದ್ದ ಸಮೂಹಿಕ ಅತ್ಯಾಚಾರದ ವಿಡಿಯೋ ತೋರಿಸಿ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ತಿಳಿದು ಬಂದಿದೆ.

ವಿದ್ಯಾರ್ಥಿನಿ ತನ್ನ ತಂದೆಯೊಂದಿಗೆ ರವಿವಾರ ಮುಡಿಪುವಿನ ಫ್ಯಾನ್ಸಿಗೆ ಬಂದು ಬ್ಯಾಗ್ ಖರೀದಿಸಿದ್ದಳೆನ್ನಲಾಗಿದ್ದು, ಸೋಮವಾರ ಬ್ಯಾಗ್ ಬದಲಾಯಿಸಲೆಂದು ಮತ್ತೆ ಫ್ಯಾನ್ಸಿಗೆ ಬಂದಾಗ ಅಂಗಡಿ ಮಾಲಕ ಸಲೀಂ ವಿದ್ಯಾರ್ಥಿನಿಗೆ ಮೊಬೈಲ್ ನಲ್ಲಿ ಅಶ್ಲೀಲ ವೀಡಿಯೊ ತೋರಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂದು ಆರೋಪಿಸಿ, ವಿದ್ಯಾರ್ಥಿನಿ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಳು. ಇದರಂತೆ ಕೊಣಾಜೆ ಪೊಲೀಸರು ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.

ಕೊಣಾಜೆ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರೆಸಲಾಗಿದೆ.

Comments are closed.