ಕರ್ನಾಟಕ

ಯಾವುದೇ ಕಾರಣಕ್ಕೂ ನಾವು ಗುರುವಾರ ಸದನಕ್ಕೆ ಹಾಜರಾಗಲ್ಲ, ಇದು ತಮ್ಮ ಒಗ್ಗಟ್ಟಿನ ನಿರ್ಣಯ: ವಿಶ್ವನಾಥ್

Pinterest LinkedIn Tumblr

ಬೆಂಗಳೂರು: ನಮ್ಮ ನಿರ್ಧಾರ ಅಚಲ, ಯಾವುದೇ ಕಾರಣಕ್ಕೂ ನಾವು ಗುರುವಾರ ಸದನಕ್ಕೆ ಹಾಜರಾಗಲ್ಲ ಎಂದು ಜೆಡಿಎಸ್ ಶಾಸಕ ವಿಶ್ವನಾಥ್ ಅವರು ಅತೃಪ್ತರ ದೃಢ ನಿರ್ಧಾರವನ್ನು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶವನ್ನು ಅತ್ಯಂತ ಸಂತೋಷದಿಂದ ನಾನು ಸ್ವಾಗತ ಮಾಡುತ್ತೇನೆ. ಕರ್ನಾಟಕದಲ್ಲಿದ್ದ ಸಾಂವಿಧಾನಿಕ ಬಿಕ್ಕಟ್ಟಿಗೆ ಮಧ್ಯಂತರ ತೀರ್ಪು ಸಮಾಧಾನ ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಾವು ಈ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಶಾಸಕರಷ್ಟೇ ಹೊರತು ಅತೃಪ್ತರಲ್ಲ. ನಾವು ಯಾರು ಕೂಡ ನಾಳೆ ವಿಧಾನಸಭೆಗೆ ಬರುತ್ತಿಲ್ಲ ಎಂದು ತಮ್ಮ ಒಗ್ಗಟ್ಟಿನ ನಿರ್ಣಯವನ್ನು ತಿಳಿಸಿದರು.

ಬಳಿಕ ಶಾಸಕರ ಅನರ್ಹತೆಯ ವಿಚಾರವಾಗಿ ಮಾತನಾಡಿ, ಇವತ್ತು ಸ್ಪೀಕರ್ ರಮೇಶ್ ಕುಮಾರ್ ಅವರು ಸುಪ್ರೀಂ ಕೋರ್ಟ್ ತೀರ್ಪನ ಬಗ್ಗೆ ಪ್ರತಿಕ್ರಿಯಿಸುತ್ತ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ನನಗೆ ಸಮಾಧಾನಕರವಾಗಿ ಹೋಗಬೇಕೆಂಬ ಆದೇಶವನ್ನು ನೀಡಿದೆ. ಆದೇ ರೀತಿ ನಾನು ಕೂಡ ಸಮಾಧಾನಕರವಾಗಿ ಇರುತ್ತೇನೆ ಎಂದಿದ್ದಾರೆ. ನಮ್ಮ ಸ್ಪೀಕರ್ ಮೇಲೆ ನಮಗೆ ವಿಶ್ವಾಸವಿದೆ. ಸುಪ್ರೀಂ ಆದೇಶವನ್ನ ಸಮಾಧಾನಕರವಾಗಿ ಜಾರಿಗೆ ತರುತ್ತಾರೆ ಎಂಬ ನಂಬಿಕೆ ಭರವಸೆ ನಮಗೆ ನಮ್ಮ ಸ್ಪೀಕರ್ ಮೇಲೆ ಇದೆ.

ಒಂದು ವೇಳೆ ಶಾಸಕರನ್ನು ಅರ್ನರ್ಹಗೊಳಿಸಿದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿ, ನಮ್ಮ ದೇಶದಲ್ಲಿ ಕಾನೂನಿದೆ ಅದರ ಆಧಾರದ ಮೇಲೆ ನಾವು ಹೋರಾಡುತ್ತೇವೆ ಎಂದರು.

ಒಂದು ವೇಳೆ ಗುರುವಾರ ಸ್ಪೀಕರ್ ಶಾಸಕರ ರಾಜೀನಾಮೆ ಅಂಗೀಕಾರ ಮಾಡದಿದ್ದರೆ ಅತೃಪ್ತ ಶಾಸಕರ ಮೇಲೂ ವಿಪ್ ಅನ್ವಯವಾಗುವ ಬಗ್ಗೆ ಪ್ರತಿಕ್ರಿಯಿಸಿ, ನಾವು ಕಾನೂನಿನ ಬಗ್ಗೆ ಹೆಚ್ಚು ತಿಳುವಳಿಕೆ ಹೊಂದಿರುವ ಕಾನೂನು ಸಲಹೆಗಾರರನ್ನು ಸಂಪರ್ಕಿಸುತ್ತೇವೆ. ಈ ಬಗ್ಗೆ ಏನೂ ಮಾಡಬೇಕು ಎನ್ನುವ ಬಗ್ಗೆ ತಿಳಿದುಕೊಳ್ಳುತ್ತೇವೆ. ಮುಂದೆ ಬರುವ ಪರಿಸ್ಥಿತಿಯನ್ನು ನಾವು ಎದರಿಸುವುದಕ್ಕೆ ಸಿದ್ಧರಿದ್ದೇವೆ.

ನಾವು ನಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಲೇ ನಾವು ಯಾವುದೇ ಪರಿಸ್ಥಿತಿಯನ್ನಾದರೂ ಎದುರಿಸುತ್ತೇವೆ ಎಂದು ರಾಜ್ಯದ ಒಳಿತಿಗೆ ಮನಸ್ಸನ್ನು ಗಟ್ಟಿ ಮಾಡಿಕೊಂಡೇ ಸರ್ಕಾರದಿಂದ ಹೊರಬಂದಿದ್ದೇವೆ. ನಾವು ರಾಜೀನಾಮೆ ನೀಡುವ ಮುಂಚೆಯೇ ಕಾನೂನು ಪಂಡಿತರ ಜೊತೆ ಎಲ್ಲವನ್ನೂ ಚರ್ಚೆ ಮಾಡಿದ್ದೇವೆ. ಬಂದಿದ್ದೆಲ್ಲಾ ಬರಲಿ ಕರ್ನಾಟಕದ ಜನರ ಆಶೀರ್ವಾದ ನಮ್ಮ ಮೇಲೆ ಇರಲಿ ಎಂದು ಹೇಳಿದರು.

ಕಳೆದ 13-14 ತಿಂಗಳಿನಿಂದ ನಮ್ಮ ರಾಜ್ಯದಲ್ಲಿ ಸರ್ಕಾರವೇ ಇಲ್ಲವೇನೋ ಎನ್ನುವ ರೀತಿ ಸ್ಥಿತಿ ಇದೆ. ಸರ್ಕಾರದ ಬೊಕ್ಕಸದಲ್ಲಿರುವ ಅನುದಾನ ಸರಿಯಾದ ರೀತಿಯಲ್ಲಿ ಹಂಚಿಕೆಯಾಗದೆ ಸರ್ಕಾರವೇ ಇಲ್ಲದ ರೀತಿ ಇದೆ. ರಾಜ್ಯದಲ್ಲಿ ಇಷ್ಟೆಲ್ಲ ನಡೆಯುತ್ತಿದೆ. ಆದರೆ ಈ ಬಗ್ಗೆ ಯಾರು ಕೂಡ ಯಾಕೆ ಈ ಸರ್ಕಾರ ಕೆಡವಬೇಕು ಎಂದು ಪ್ರಶ್ನೆ ಮಾಡಿದ್ದಾರಾ? ಇಡೀ ರಾಜ್ಯದ ಜನರ ಅವಕೃಪೆಗೆ ಒಳಗಾಗಿರುವ ಸಮ್ಮಿಶ್ರ ಸರ್ಕಾರ ಎಷ್ಟು ಬೇಗ ಹೋಗುತ್ತೆ ಎನ್ನುವ ಪ್ರಶ್ನೆ ಜನರಲ್ಲಿ ಮನೆಮಾಡಿದೆ. ಅದಕ್ಕೆ ಪ್ರತಿನಿಧಿಗಳಾಗಿರುವ ನಾವು ಮತದಾರರಿಗೆ ಗೌರವ ನೀಡಲು ನಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಈ ಸರ್ಕಾರವನ್ನ ತೊಲಗಿಸಿ ಮುಂದೆ ಯಾವುದಾದರೂ ಸರ್ಕಾರ ಬರಲಿ, ಜನರಿಗೆ ಒಳ್ಳೆಯದು ಮಾಡಲಿ ಎಂದು ಮೈತ್ರಿಯಿಂದ ಹೊರಬಂದಿದ್ದೇವೆ ಎಂದು ದೋಸ್ತಿ ಸರ್ಕಾರ ವಿರುದ್ಧ ಕಿಡಿಕಾರಿದರು.

Comments are closed.