ಉಡುಪಿ: ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಸಾಸ್ತಾನ ಟೋಲ್ ಗೇಟ್ ಬಳಿ ಜು.12 ಬೆಳಿಗ್ಗೆನ ಜಾವ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಜಾನುವಾರುಗಳನ್ನು ರಕ್ಷಿಸಿ ಆರು ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಆರೋಪಿಗಳ ವಿಚಾರಣೆ ವೇಳೆ ಆತಂಕಕಾರಿ ಅಂಶವೊಂದು ಬೆಳಕಿಗೆ ಬಂದಿದ್ದು ಜಾನುವಾರು ಸಾಗಾಟದ ಜಾಲದ ಹಿಂದೆ ಪೊಲೀಸರ ಕೈವಾಡದ ಹಿನ್ನೆಲೆ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಬಂಧಿಸಲಾಗಿದೆ.
ಮಲ್ಪೆ ಕರಾವಳಿ ಕಾವಲುಪಡೆಯಲ್ಲಿ ಸಿಬ್ಬಂದಿಯಾದ ಸಂತೋಷ್ ಶೆಟ್ಟಿ ಹಾಗೂ ಮಂಕಿ ಪೊಲೀಸ್ ಠಾಣೆ ಸಿಬ್ಬಂದಿ ವಿನೋದ್ ಗೌಡ ಬಂಧಿತ ಪೊಲೀಸರು. ಇನ್ನು ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿನ ವಿವಿಧ ಠಾಣೆಯ ನಾಲ್ವರು ಪೊಲೀಸರ ಹೆಸರು ಕೇಳಿಬಂದಿದ್ದು ಸದ್ಯ ಅವರೆಲ್ಲಾ ತಲೆಮರೆಸಿಕೊಂಡಿದ್ದಾರೆ. ಇದರಲ್ಲಿ ಪೊಲೀಸ್ ಅಧಿಕಾರಿಯ ಗನ್ ಮ್ಯಾನ್ ಕೂಡ ಇದ್ದರೆಂಬ ಮಾಹಿತಿ ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.
ಅಂದು ನಡೆದಿದ್ದೇನು?
ಜು.12 ಬೆಳಿಗ್ಗೆನ ಜಾವ ಕೋಟ ಪಿಎಸ್ಐ ನಿತ್ಯಾನಂದ ಗೌಡ ಅವರಿಗೆ ಸಿಕ್ಕ ಖಚಿತ ವರ್ತಮಾನದಂತೆ ಕಾರನ್ನು ಬೆಂಗಾವಲು ವಾಹನವಾಗಿಟ್ಟುಕೊಂಡು ಲಾರಿಯೊಂದರಲ್ಲಿ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಬಗ್ಗೆ ಸಾಸ್ತಾನ ಟೋಲ್ ಗೇಟ್ ಬಳಿ ಕಾರ್ಯಾಚರಣೆ ನಡೆಸಿದ್ದು ಆರೋಪಿಗಳಾದ ಕಾರಿನ ಚಾಲಕ ಶಿವಾನಂದ ಹಾಗೂ ಮಾರುತಿ ನಾರಾಯಣ ನಾಯ್ಕ, ಲಾರಿ ಚಾಲಕ ಸೈನುದ್ದೀನ್ ಹಾಗೂ ಲಾರಿಯಲ್ಲಿದ್ದ ಗಣೇಶನ್, ಹಮೀದ್ಸಿ.ಹೆಚ್. , ಸಮೀರ್ ಎನ್ನುವರನ್ನು ಬಂಧಿಸಲಾಗಿತ್ತು. ೬೫ ಸಾವಿರ ಮೌಲ್ಯದ 13 ಕೋಣ, 35 ಸಾವಿರ ಮೌಲ್ಯದ 7 ಎಮ್ಮೆಗಳನ್ನು ಪೊಲೀಸರ ತಂಡ ರಕ್ಷಿಸಿದ್ದರು. 12 ಲಕ್ಷ ಮೌಲ್ಯದ ಲಾರಿ, 2 ಲಕ್ಷ ಮೌಲ್ಯದ ಇಂಡಿಕಾ ಕಾರು ವಶಕ್ಕೆ ಪಡೆಯಲಾಗಿತ್ತು.
ಪೊಲೀಸರ ಹೆಸರು ಕೇಳಿ ಪೊಲೀಸರೇ ಶಾಕ್!
ಆರೋಪಿಗಳು 20 ಜಾನುವಾರುಗಳನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ಕಾಸರಗೋಡಿನ ಅಬ್ದುಲ್ ಎಂಬವರಿಗೆ ಮಾರಾಟ ಮಾಡಲು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕಸಾಯಿಖಾನೆಗೆ ವಾಹನದಲ್ಲಿ ಸಾಗಾಟ ಮಾಡುತ್ತಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಲ್ಲದೇ ತಮ್ಮ ಅಕ್ರಮ ಸಾಗಾಟಕ್ಕೆ ಪೊಲೀಸರು ಕೂಡ ಸಾತ್ ನೀಡುವ ಬಗ್ಗೆ ಬಾಯ್ಬಿಟ್ಟಿದ್ದರು. ಆರೋಪಿಗಳು ನೀಡಿದ ಮಾಹಿತಿಯಂತೆ ಇಬ್ಬರು ಪೊಲೀಸರನ್ನು ಈಗಾಗಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಇಬ್ಬರಿಗೂ ಹದಿನೈದು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನು ನಾಲ್ವರು ಪೊಲೀಸ್ ಸಿಬ್ಬಂದಿಗಳು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಬಲೆಬೀಸಲಾಗಿದೆ. ಇನ್ನು ಮಂಗಳವಾರದಂದು ಇತರ ನಾಲ್ವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದಿದ್ದು ಅವರ ತನಿಖೆ ನಡೆಯುತ್ತಿದೆ.
ಬೆಚ್ಚಿಬಿದ್ದ ನಾಗರಿಕರು!
ಇನ್ನು ಜಿಲ್ಲಾದ್ಯಂತ ನಡೆಯುತ್ತಿರುವ ಅಕ್ರಮ ಹಾಗೂ ಅಪರಾಧ ಚಟುವಟಿಕೆಗಳಲ್ಲಿ ಪೊಲೀಸರು ನೇರವಾಗಿ ಹಾಗೂ ಪರೋಕ್ಷವಾಗಿ ಭಾಗಿಯಾಗುತ್ತಿರುವುದು ನಾಗರಿಕರನ್ನು ಆತಂಕಕ್ಕೀಡು ಮಾಡಿದೆ. ಇತ್ತ ಎಸ್ಪಿ ನಿಶಾ ಜೇಮ್ಸ್ ಅಕ್ರಮ ಜಾನುವಾರು ಕಳ್ಳತನ ಹಾಗೂ ಸಾಗಾಟ ತಡೆಗೆ ವಿವಿಧ ಕ್ರಮಗಳನ್ನು ಕೈಗೊಂಡಿದ್ದು ಚೆಕ್ ಪೋಸ್ಟ್, ಗಸ್ತು ವ್ಯವಸ್ಥೆ, ಎಂ.ಒ.ಬಿ. ಪರೇಡ್ ಸೇರಿದಂತೆ ಕಾನೂನು ಚೌಕಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದ್ದರೂ ಕೂಡ ಅವರದ್ದೇ ಇಲಾಖೆಯ ಕೆಲವು ಸಿಬ್ಬಂದಿಗಳು ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದು ಇಲಾಖೆಗೆ ಒಂದು ಕಪ್ಪು ಚುಕ್ಕೆಯಾಗಿದೆ.
ಅದೇನೆ ಇರಲಿ ಈ ಪ್ರಕರಣದ ಸಮಗ್ರ ತನಿಖೆಯಾಗಬೇಕಿದೆ. ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕ್ರಮಕೈಗೊಂಡು ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಿರಲು ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.