ಮಂಗಳೂರು, ಜುಲೈ 17 : ನಗರದಲ್ಲಿ ಬೃಹತ್ ಪ್ರಮಾಣದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಮಾದಕ ವಸ್ತು ದಂಧೆಕೋರರ ನ್ನು 12 ಲಕ್ಷ ರೂ. ಮೌಲ್ಯದ 40 ಕೆ.ಜಿ. ಗಾಂಜಾ ಸಹಿತ ಕಾವೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧಿತರನ್ನು ಕಾಸರಗೋಡು ಪರಿಸರದ ಇಕ್ಬಾಲ್ ಹಾಗೂ ಫಝಲ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಕೆಎಲ್ 60 ಎನ್ 9381 ಕೇರಳ ನೋಂದಣಿಯ ಮಾರುತಿ 800 ಕಾರಿನಲ್ಲಿ ಗಾಂಜಾ ಸಾಗಾಟ ನಡೆಸುತ್ತಿದ್ದಾಗ ಪೊಲೀಸರು ಕಾವೂರಿನಲ್ಲಿ ಕಾರು ತಡೆದು ಆರೋಪಿಗಳನ್ನು ಬಂಧಿಸಿದ್ದಾರೆ.
ಕೇರಳ ನೋಂದಣಿ ಸಂಖ್ಯೆಯ ಮಾರುತಿ ಕಾರಿನಲ್ಲಿ ಗಾಂಜಾ ಸಾಗಾಟ ಮಾಡಿ ಬೋಂದೆಲ್ ಬಳಿ ಮಾರಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಕಾವೂರು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸುಮಾರು 12 ಲಕ್ಷ ರೂ. ಅಂದಾಜು ಮೌಲ್ಯದ 40 ಕಿ.ಗ್ರಾಂ ಗಾಂಜಾ ಸಹಿತಾ ಬಂಧಿಸಿದ್ದಾರೆ. ಮಂಗಳೂರು ನಗರದಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಪತ್ತೆಯಾದ ಗರಿಷ್ಠ ಪ್ರಮಾಣದ ಗಾಂಜಾ ಇದಾಗಿದೆ.
ಆರೋಪಿಗಳು ಕೇರಳದಿಂದ ಗಾಂಜಾ ಖರೀದಿಸಿ ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಹಾಗೂ ಸಾರ್ವಜನಿಕರನ್ನು ಕೇಂದ್ರೀಕರಿಸಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.