ಮಂಗಳೂರು, ಜುಲೈ.21: ಕರ್ನಾಟಕ ಕರಾವಳಿ ಪ್ರದೇಶದಲ್ಲಿ ಜು.22ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ರೆಡ್ ಅಲರ್ಟ್ ಘೋಷಿಸಿದ್ದು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರುವಂತೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕರಾವಳಿಯಲ್ಲಿ ಮುಂದಿನ ಮೂರು ದಿನಗಳ ಕಾಲ ದಿನಪ್ರತಿ 200 ಮಿ.ಮೀ.ಗೂ ಹೆಚ್ಚು ಮಳೆಯಾಗುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನಗಳ ಕಾಲ (ಜು.22ರವರೆಗೆ) ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವೂ ಕಟ್ಟೆಚ್ಚರ ವಹಿಸಿದೆ.
ದ.ಕ. ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರಿದಿದೆ. ಗುರುವಾರ ಆರಂಭವಾದ ಮಳೆ ಶನಿವಾರವೂ ಮುಂದುವರಿದಿದೆ. ದ.ಕ. ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಕೋಪ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶನಿವಾರ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ರವಿವಾರದ ಮಳೆಯ ಪರಿಸ್ಥಿತಿ ನೋಡಿ ಸೋಮವಾರದ ರಜೆಯನ್ನು ನಿರ್ಧರಿಸಲಾಗುವುದು ಎಂದವರು ತಿಳಿಸಿದ್ದಾರೆ.
ಕರ್ನಾಟಕ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಅರಬ್ಬಿ ಸಮುದ್ರವು ಪ್ರಕ್ಷುಬ್ಧವಾಗುವ ಸಂಭವವಿರುವುದರಿಂದ ಜು.20ರಿಂದ 22ರವರೆಗೆ ಎಲ್ಲಾ ಮೀನುಗಾರರು ಕಡ್ಡಾಯವಾಗಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ ಅಲ್ಲದೆ, ಕಡಲ ತೀರ, ನದಿ ಪ್ರದೇಶಕ್ಕೆ ಪ್ರವಾಸಿಗರು ತೆರಳದಂತೆ ನಿರ್ಬಂಧಿಸಲಾಗಿದೆ. ನೀರು ನಿಲ್ಲುವ ತಗ್ಗು ಪ್ರದೇಶ, ಕೆರೆ, ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಂಟ್ರೋಲ್ ರೂಂ ಸರ್ವಸಜ್ಜು: ವಿಕೋಪ ಪರಿಸ್ಥಿತಿ ನಿಯಂತ್ರಿಸಿ ಜನರ ಸಮಸ್ಯೆಗಳಿಗೆ ಸಕಾಲಿಕವಾಗಿ ಸ್ಪಂದಿಸಲು ಆಯಾ ತಾಲೂಕು ಕೇಂದ್ರಗಳಲ್ಲಿ ಕಂಟ್ರೋಲ್ ರೂಂಗಳನ್ನು ಸಕ್ರಿಯಗೊಳಿಸಲಾಗಿದೆ. ದ.ಕ. ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಂ ದೂ. ಸಂಖ್ಯೆ 1077ಗೆ ಕರೆ ಮಾಡಿ ಸಾರ್ವಜನಿಕರು ದೂರುಗಳನ್ನು ಸಲ್ಲಿಸಬಹುದಾಗಿದೆ.
Comments are closed.