ಕರ್ನಾಟಕ

ರಾಜ್ಯದಲ್ಲಿ ಕಳೆದ 10 ವರ್ಷದಿಂದ ಅಮ್ಮನ ಹುಡುಕಾಟದಲ್ಲಿರುವ ಜರ್ಮನ್ ಮಹಿಳೆ

Pinterest LinkedIn Tumblr


ರಾಯಚೂರು(ಜುಲೈ 21): ಹೆತ್ತ ತಾಯಿ ದೇವರಿಗೆ ಸಮಾನ ಎನ್ನುತ್ತಾರೆ. ತಾಯಿಯ ಪ್ರೀತಿ ಸಿಗದಿದ್ದರೂ ತಾಯಿಯನ್ನೂ ಆರಾಧಿಸಬೇಕೆನ್ನುವ ಹಂಬಲವಿರುತ್ತದೆ. ಈ ಹಂಬಲದಿಂದಾಗಿ ಜರ್ಮನಿಯಿಂದ ಮಹಿಳೆಯೊಬ್ಬರು ಕರುನಾಡಿನಲ್ಲಿ ತನ್ನ ತಾಯಿಯನ್ನು ಅರಸುತ್ತಿದ್ದಾರೆ. ಇವರು ಇವತ್ತು ನಿನ್ನೆಯಿಂದ ಹುಡುಕುತ್ತಿರುವುದಲ್ಲ, ಬರೋಬ್ಬರಿ 10 ವರ್ಷದಿಂದ ಛಲಬಿಡದೆ ತಾಯಿಯ ಶೋಧದಲ್ಲಿದ್ದಾರೆ. ಅದಕ್ಕಾಗಿ ನ್ಯಾಯಲಯಕ್ಕೂ ಮೊರೆ ಹೋಗಿದ್ದಾರೆ.

ಈ ಮಹಿಳೆಯ ಹೆಸರು ಮಾರಿಯಾ ಛಾಯಾ. ಈಕೆ ಮೂಲತಃ ಭಾರತೀಯಳಾದರೂ ಕಳೆದ 35 ವರ್ಷಗಳಿಂದ ಜರ್ಮನ್ ದೇಶದಲ್ಲಿ ವಾಸವಾಗಿದ್ದಾರೆ. ಜರ್ಮನಿಯಲ್ಲಿ ಶಿಕ್ಷಕಿಯಾಗಿರುವ ಮಾರಿಯಾ ಕರುನಾಡಿನ ಸಂಜಾತೆಯೇ. 1978 ರಲ್ಲಿ ಉಳ್ಳಾಲದಲ್ಲಿ ಹುಟ್ಟಿರುವ ಮಾರಿಯಾ ತಾಯಿಯ ಹೆಸರು ಗಿರಿಜಾ ಗಾಣಿಗ. ಆದರೆ, ಆಕೆಗೆ ತಂದೆ ಯಾರು ಎಂದು ಗೊತ್ತಿಲ್ಲ. ಬಡತನದ ಹಿನ್ನೆಲೆ ಹಾಗು ಕೌಟುಂಬಿಕ, ಸಾಮಾಜಿಕ ಹಿನ್ನೆಲೆಯಲ್ಲಿ ಮಾರಿಯಾಳ ತಾಯಿ ಆಕೆಯನ್ನು ಜರ್ಮನ್ ಮೂಲದವರಿಗೆ ದತ್ತು ನೀಡಿದ್ದರು.

ಜರ್ಮನಿಯಲ್ಲಿದ್ದ ಮಾರಿಯಾಗೆ ತನ್ನ ಹೆತ್ತತಾಯಿ ನೋಡಬೇಕು, ಆಕೆಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಬೇಕೆನ್ನುವ ಕಾರಣಕ್ಕೆ ಕಳೆದ ಹತ್ತು ವರ್ಷದಿಂದ ರಾಜ್ಯದಲ್ಲಿ ತಾಯಿಗಾಗಿ ತಿರುಗಾಡುತ್ತಿದ್ದಾರೆ. ಈ ಮಧ್ಯೆ ತನ್ನ ಹುಡುಕಾಟಕ್ಕೆ ಸಹಾಯ ಮಾಡಿ ಎಂದು ಬೆಂಗಳೂರು ಹೈಕೋರ್ಟಿಗೂ ಮನವಿ ಮಾಡಿಕೊಂಡಿದ್ದಾರೆ. ನ್ಯಾಯಾಲಯ ಕೂಡ ಆಕೆಯ ಮನವಿಯನ್ನು ಪುರಸ್ಕರಿಸಿ, ಈಕೆಗೆ ಸಹಾಯ ಮಾಡುವಂತೆ ಪೊಲೀಸರನ್ನು ನಿರ್ದೇಶಿಸಿದೆ. ಈ ಮಧ್ಯೆ ಆಕೆಯ ತಾಯಿ ಗಿರಿಜಾ ರಾಯಚೂರಿನಲ್ಲಿದ್ದಾರೆ ಎಂದು ಮಂಗಳೂರಿನಲ್ಲಿದ್ದ ಪರಿಚಯಸ್ಥರೊಬ್ಬರು ಹೇಳಿದ್ದರಿಂದ ಈಗ ರಾಯಚೂರಿಗೆ ಬಂದು ತಾಯಿ ಹುಡುಕುತ್ತಿದ್ದಾರೆ.

ಆಕೆ ಈ ಮೊದಲು ಮಹಿಳೆ ಹಾಗು ಮಕ್ಕಳ ಕಲ್ಯಾಣಕ್ಕಾಗಿ ಇರುವ ಸ್ವಯಂ ಸೇವಾ ಸಂಸ್ಥೆಯಲ್ಲಿಯೂ ಕೆಲಸ ಮಾಡಿದ್ದರಿಂದ ಮುಂಬೈ ಮೂಲದ ಸ್ವಯಂ ಸೇವಾ ಸಂಸ್ಥೆಯಲ್ಲಿ ಕನ್ನಡ ಭಾಷೆ ಗೊತ್ತಿರುವ ಮೋಜೆಸ್ ಎಂಬುವವರನ್ನು ಕರೆದುಕೊಂಡು ಬಂದು ತಾಯಿ ಹುಡುಕುತ್ತಿದ್ದಾರೆ. ಆಕೆಯ ಬಳಿ ಆಕೆಯ ತಾಯಿಯ ಇತ್ತೀಚಿನ ಭಾವಚಿತ್ರವಾಗಲಿ, ಆಕೆಯ ಸಂಬಂಧಿಕರ ಗುರುತಾಗಲಿ ಇಲ್ಲ. ಇದರಿಂದ ಈಗ ಎಲ್ಲೆಲ್ಲಿ ಮಾಹಿತಿ ಸಿಗುತ್ತೋ ಅಲ್ಲಿಗೆ ಹೋಗಿ ಅಮ್ಮನ ಹುಡುಕಾಟದಲ್ಲಿದ್ದಾರೆ.

ಹಡೆದ ತಾಯಿಯನ್ನು ನೋಡಬೇಕು, ಆಕೆಯೊಂದಿಗೆ ಜೀವನ ಕಳೆಯಬೇಕೆಂಬ ಹಂಬಲವಿರುವ ಮಾರಿಯಾ ಛಾಯ ಅವರ ಅವಿರತ ಯತ್ನ ಫಲ ಸಿಗಲಿ ಎಂಬುದೇ ನಮ್ಮ ಆಶಯ.

Comments are closed.