ಮಂಗಳೂರು,ಜುಲೈ.23: ಅಂಗನವಾಡಿ ಕಾರ್ಯಕರ್ತೆಯರಿಗೆ, ಬೀಡಿ ಕಟ್ಟುವ ಮಹಿಳೆಯರಿಗೆ, ಬಿಸಿಯೂಟ ಕಾರ್ಯಕರ್ತೆಯರಿಗೆ ಕನಿಷ್ಟ ವೇತನ ಸಿಗದೆ ಉನ್ನಲು ಅನ್ನ ಇಲ್ಲದೆ ಮಹಿಳೆಯರು ಕಷ್ಟ ಪಡುತ್ತಿದ್ದಾರೆ ಹಾಗಿರುವಾಗ ಭಾರತ ಮಾತೆಗೆ ಜೈ ಅಂದರೆ ಏನು ಪ್ರಯೋಜನ. ಆ ಜೈಕಾರ ಭಾರತ ಮಾತೆ ಸ್ವೀಕರಿಸುವುದಿಲ್ಲ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷರಾದ ವಿ.ಗೀತಾ ಹೇಳಿದರು.
ಹಿಂಸೆ ಮುಕ್ತ ಸ್ವಾವಲಂಬಿ ಸೌಹಾರ್ದ ಬದುಕಿಗಾಗಿ ನಗರದ ಎನ್.ಜಿ.ಒ. ಸಭಾಂಗಣದಲ್ಲಿ ನಡೆದ ಜನವಾದಿ ಮಹಿಳಾ ಸಂಘಟನೆಯ ದ. ಕ. ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತಾನಾಡಿದ ಅವರು,ರೈತರ ಸಂಕಷ್ಟ, ನಿರುದ್ಯೋಗ, ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ತಡೆಯಲು ಆಗಿಲ್ಲ ಎಂದು ರಾಜಿನಾಮೆ ಕೊಡಬೇಕಾದ ಸಚಿವರು ಹಣದ ಆಸೆಗೆ ಅಧಿಕಾರಕ್ಕಾಗಿ ರಾಜಿನಾಮೆ ಕೊಡುತ್ತಿದ್ದಾರೆ. ನಾಯಕರು ಏನು ಮಾಡಿದರು ನಡೆಯುತ್ತದೆ ಎನ್ನುವ ರೀತಿ ಪ್ರಜಾಪ್ರಭುತ್ವದ ದುರುಪಯೋಗ ಮಾಡುತ್ತಿದ್ದಾರೆ ಎಂದು ಹೇಳಿದರು.
ಚುನಾವಣೆಯಲ್ಲಿ ಜಯಗಳಿಸಿ ಅಧಿಕಾರ ಪಡೆದವರ ಮೇಲೆ ಹಲವು ಕೇಸುಗಳಿವೆ. ಇಂತಹ ಲೂಟಿಕೋರರಿಂದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಪ್ರಜಾಪ್ರಭುತ್ವ ಉಳಿಸಲು ಚಳುವಳಿಗೆ ಸಜ್ಜಾಗಬೇಕು. ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚಲು ಕಾರಣ ಸರಿಯಾದ ತನಿಖೆ ಹಾಗೂ ಶಿಕ್ಷೆ ಆಗದೆ ಇರುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ದ. ಕ. ಜಿಲ್ಲಾಧ್ಯಕ್ಷೆ ಜಯಂತಿ ಬಿ. ಶೆಟ್ಟಿ , ಮಹಿಳೆಯರ ಮೇಲೆ ನಡೆಯುವ ಶೋಷಣೆ ತಡೆಗಟ್ಟಲು ನಾವು ಸಂಘಟಿತರಾಗಬೇಕು. ಮಹಿಳೆ ಯಾವುದೇ ಧರ್ಮವಾಗಲಿ ಜಾತಿಯಾಗಲಿ ಶೋಷಣೆ ಒಂದೆ. ನಮ್ಮ ಮುಂದಿನ ಯೋಜನೆಗಳ ಬಗ್ಗೆ ಈ ಸಮ್ಮೇಳನದಲ್ಲಿ ಚರ್ಚಿಸಿ ನಿರ್ಣಯ ಮಾಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ದ.ಕ ಜಿಲ್ಲಾ ಪದಾಧಿಕಾರಿಗಳಾದ ಪದ್ಮಾವತಿ ಶೆಟ್ಟಿ, ಕಿರಣ್ ಪ್ರಭಾ, ಭಾರತಿ ಬೋಳಾರ್, ಹೇಮಲತಾ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ರಾಧ ಸ್ವಾಗತಿಸಿದರು. ಖಜಾಂಚಿ ವಿಲಾಸಿನಿ ವಂದಿಸಿದರು
Comments are closed.