ಕರಾವಳಿ

‘ಮೈ ಮುಟ್ಟಿಸಿಕೊಂಡು’ ಹನಿ ಟ್ರ್ಯಾಪ್: ಜ್ಯೋತಿಷಿ, ವೈದ್ಯರುಗಳೇ ಇವರ ಟಾರ್ಗೆಟ್- ಉಡುಪಿಯಲ್ಲಿ ಇಬ್ಬರು ಸೆರೆ

Pinterest LinkedIn Tumblr

ಉಡುಪಿ/ಕುಂದಾಪುರ: ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ಜ್ಯೋತಿಷಿಗಳು ಮತ್ತು ಕೆಲವು ವೈದ್ಯರ ಬಳಿ ತೆರಳಿ ಸಾಂದರ್ಭಿಕತೆ ಸ್ರಷ್ಟಿಸಿ ಮೈಮುಟ್ಟಿಸಿಕೊಳ್ಳುವ ನಾಟಕವಾಡಿ ಅದರ ಗೌಪ್ಯ ವಿಡಿಯೋ ಚಿತ್ರೀಕರಿಸಿ ಅದನ್ನು ತೋರಿಸಿ ಬೆದರಿಸಿ ಹಣಕ್ಕೆ ಬೇಡಿಕೆಯಿಡುತ್ತಿದ್ದ ಖತರ್ನಾಕ್ ತಂಡವೊಂದನ್ನು ಉಡುಪಿ ಪೊಲೀಸರು ಪತ್ತೆಹಚ್ಚಿದ್ದಾರೆ.

ಬೆಳಿಂಜೆ ನಿವಾಸಿ ಸುಮ ಯಾನೆ ಸುನಂದಾ ಹಾಗೂ ಕುಂದಾಪುರ ಜನ್ನಾಡಿಯ ನಿವಾಸಿ ಕಿರಣ ಯಾನೆ ಶಶಾಂಕ್ ಶೆಟ್ಟಿ ಪ್ರಕರಣದಲ್ಲಿ ಬಂಧಿತ ಆರೋಪಿಗಳು. ಆರೋಪಿತರಾದ ಸುಮ ಹಾಗೂ ಕಿರಣ ಯಾನೆ ಶಶಾಂಕ್ ಶೆಟ್ಟಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಇನ್ನಿಬ್ಬರು ಆರೋಪಿಗಳಿಗ ಬಂಧನಕ್ಕೆ ಬಲೆ ಬೀಸಲಾಗಿದೆ.

ಬೆಳಕಿಗೆ ಬಂದಿದ್ದು ಹೇಗೆ?
ಜುಲೈ19 ರಂದು ಹೆಬ್ರಿಯಲ್ಲಿ ಜ್ಯೋತಿಷಿಯೊಬ್ಬರ ಬಳಿ ಸಾಯಂಕಾಲದ ವೇಳೆ ಬಂದ ಇಬ್ಬರು ಆ ಜ್ಯೋತಿಷಿಯು ಹೆಣ್ಣೊಬ್ಬಳ ಮೈಮುಟ್ಟಿ ಪರೀಕ್ಷಿಸುವ ದೃಶ್ಯವಿರುವ ಮೊಬೈಲ್ ವೀಡಿಯೊ ತೋರಿಸಿ ಅದನ್ನು ಮೀಡಿಯಾಗಳಿಗೆ ಕೊಟ್ಟು ಮರ್ಯಾದೆಯನ್ನು ತೆಗೆಯುತ್ತೇನೆ ಇಲ್ಲದಿದ್ದಲ್ಲಿ ನಮಗೆ 40 ಲಕ್ಷ ಹಣ ಕೊಡಬೇಕು ಎಂದು ಚಾಕು ತೋರಿಸಿ, ಹಣ ಕೊಡದಿದ್ದಲ್ಲಿ ನಿನ್ನ ಮರ್ಯಾದೆ ತೆಗೆಯುವುದಲ್ಲದೇ ನಿನ್ನನ್ನು ಮುಗಿಸಿ ಬಿಡುತ್ತೇವೆ ಎಂದು ಬೆದರಿಸಿ ನಾಳೆ ಸಂಜೆ ಒಳಗಡೆ 40 ಲಕ್ಷ ಹಣ ಕೊಡಬೇಕು ಎಂದು ಬೆದರಿಕೆ ಹಾಕಿದ್ದು ಅದಕ್ಕೆ ಹೆದರಿ ಆ ಜ್ಯೋತಿಷಿ ಎಂಭತ್ತು ಸಾವಿರ ರೂಪಾಯಿಗಳನ್ನು ಕೊಟ್ಟಿದ್ದು ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಗೆ ಜುಲೈ.20ರಂದು ದೂರು ನೀಡಿದ್ದರು.

ಆರಂಭವಾಗಿತ್ತು ತನಿಖೆ….ಸಿಕ್ಕಿಬಿದ್ದರು ಆರೋಪಿಗಳು…
ಉಡುಪಿ ಎಸ್ಪಿ ನಿಶಾ ಜೇಮ್ಸ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕಾರ್ಕಳ ಎಎಸ್ಪಿ ಕೃಷ್ಣಕಾಂತ್ ಮಾರ್ಗದರ್ಶನದಲ್ಲಿ ಕಾರ್ಕಳ ಸಿಪಿಐ ಹಾಲಮೂರ್ತಿ ರಾವ್ ಹಾಗೂ ಹೆಬ್ರಿ ಪಿಎಸ್ಐ ಮಹಾಬಲ ಶೆಟ್ಟಿ ಈ ಬಗ್ಗೆ ಮುತುವರ್ಜಿಯ ತನಿಖೆ ಕೈಗೊಂಡು ಹಲವಾರು ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಈ ವೇಳೆಯೇ ಪತ್ತೆಯಾಗಿದ್ದು ಆರೋಪಿಗಳ ಜಾಡು. ಅದರಂತೆಯೇ ಹೆಬ್ರಿ ತಾಲೂಕು ಬೇಳಿಂಜೆ ಗ್ರಾಮದ ಸುಮಾ ಯಾನೆ ಸುನಂದ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಹೆಬ್ರಿ ಪ್ರಕರಣದಲ್ಲಿ ತಾನು ಭಾಗಿಯಾದ ಬಗ್ಗೆ ಒಪ್ಪಿಕೊಂಡಿದ್ದಾಳೆ. ಅಲ್ಲದೇ ತನಗೆ ದೂರದ ಸಂಬಂಧಿ ಕುಂದಾಪುರ ತಾಲೂಕು ಜನ್ನಾಡಿಯ ಕಿರಣ್ ಯಾನೆ ಶಶಾಂಕ್ ಶೆಟ್ಟಿ (26) ಹಾಗೂ ಅವನ ಹೆಂಡತಿ ಲಕ್ಷ್ಮೀ (26) ಮತ್ತು ಕುಂದಾಪುರ ತಾಲೂಕು ಕರ್ಕಿ ಎಂಬಲ್ಲಿಯ ಮಂಜುನಾಥ ಎಂಬ ನಾಲ್ಕು ಜನರು ಸೇರಿ ಈ ಕೃತ್ಯ ಮಾಡಿದ ಬಗ್ಗೆ ಬಾಯ್ಬಿಡುತ್ತಾಳೆ.

(ಉಡುಪಿ ಎಸ್ಪಿ ನಿಶಾ ಜೇಮ್ಸ್)

ಖತರ್ನಾಕ್ ತಂಡ:
ಆರೋಪಿ ಸುಮಾ ನೀಡಿದ ಮಾಹಿತಿಯಂತೆ ಪ್ರಕರಣದ ಪ್ರಮುಖ ಆರೋಪಿಯಾದ ಕಿರಣ್ ಯಾನೆ ಶಶಾಂಕ್ ಶೆಟ್ಟಿಯನ್ನು ಇಂದು (ಜುಲೈ.25) ರಂದು ತನಿಖಾ ತಂಡ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿರುತ್ತಾರೆ. ಈ ವೇಳೆ ಆರೋಪಿ ಕಿರಣ್ ಹೆಬ್ರಿಯಲ್ಲಿ ತಾನು ಬ್ಲ್ಯಾಕ್ ಮೇಲ್ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ತನ್ನ ಡಸ್ಟರ್ ಕಾರಿನಲ್ಲಿ ಬಂದ ಸುಮಾ, ಲಕ್ಷ್ಮೀ ಹಾಗೂ ಮಂಜುನಾಥ ಸೇರಿ ಹೆಬ್ರಿ ಗ್ರಾಮದದಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ವ್ಯಕ್ತಿಯಲ್ಲಿ ಹಣವನ್ನು ವಸೂಲಿ ಮಾಡಬೇಕೆಂಬ ಯೋಚನೆ ಮಾಡಿ ಭಟ್ಟರು ಹೆಂಗಸಿನ ಮೈಮುಟ್ಟುವ ದೃಶ್ಯವನ್ನು ವೀಡಿಯೋ ಮಾಡಿ ನಂತರ ಅವರಿಂದ ಹಣ ಕೀಳಬೇಕು ಎಂದು ನಾಲ್ಕು ಜನ ಸೇರಿ ಒಳಸಂಚು ರೂಪಿಸಿ ಅವರು ಈಗಾಗಲೇ ತಯಾರಿಸಿ ಇಟ್ಟಿದ್ದ ಒಂದು ವ್ಯಾನಿಟಿ ಬ್ಯಾಗಿನಲ್ಲಿ ಕಿರಣ್ ಯಾನೆ ಶಶಾಂಕ್ ತನ್ನ ಮೊಬೈಲನ್ನು ಇಟ್ಟು ಅದರಲ್ಲಿ ವೀಡಿಯೋ ಆನ್ ಮಾಡಿ ಜು.18 ರಂದು ಮಧ್ಯಾಹ್ನ ಸುಮಾಳನ್ನು ಜ್ಯೋತಿಷಿ ಹತ್ತಿರ ಕಳುಹಿಸಿ ಜ್ಯೋತಿಷ್ಯ ಹೇಳುವಂತೆ ಹಾಗೂ ತನಗೆ ಎದೆಭಾಗದಲ್ಲಿ ತುರಿಕೆ ಬರುತ್ತಿದೆ ಸರ್ಪ ಸುತ್ತು ಆಗಿರಬಹುದು ತನ್ನನ್ನು ಮುಟ್ಟಿ ಪರೀಕ್ಷಿಸಿ ಹೇಳಿ ಎಂದು ವಿಶ್ವಾಸ ಬರುವ ಹಾಗೆ ಮಾತನಾಡಿ ಮೊಬೈಲ್ ಕ್ಯಾಮರಾ ಇರುವ ವ್ಯಾನಿಟಿ ಬ್ಯಾಗನ್ನು ಸುಮಾಳಲ್ಲಿ ಕೊಟ್ಟಿದ್ದರು. ಸುಮಾರು ಒಂದು ಗಂಟೆಯ ನಂತರ ಸುಮಾ ವಾಪಾಸ್ಸು ಬಂದಿದ್ದು ವೀಡಿಯೋವನ್ನು ನೋಡಿದ್ದು ಅದರಲ್ಲಿ ಜ್ಯೋತಿಷಿ ಆರೋಪಿ ಸುಮಾಳಿಗೆ ಮೈಮುಟ್ಟುವ ದೃಶ್ಯವಿದ್ದು ಮರುದಿನ ಅಂದರೆ ಜು.19ರಂದು ಸಂಜೆ ಜ್ಯೋತಿಷ್ಯಿಯ ಕೊಠಡಿಗೆ ಆರೋಪಿ ಕಿರಣ್ ಯಾನೆ ಶಶಾಂಕ್ ಮತ್ತು ಮಂಜುನಾಥ ಇವರು ಬೈಕಿನಲ್ಲಿ ಅವರಿಗೆ ವೀಡಿಯೋ ತೋರಿಸಿ ಬೆದರಿಕೆ ಹಾಕಿ 40 ಲಕ್ಷ ಹಣ ಕೇಳಿದ್ದು ಆ ಸಮಯದಲ್ಲಿ ಜ್ಯೋತಿಷಿ ಇದಕ್ಕೆ ಹೆದರಿ 80 ಸಾವಿರ ಹಣವನ್ನು ಕೊಟ್ಟಿದ್ದು ಉಳಿದ ಹಣಕ್ಕೆ ಮಾರನೆ ದಿನ ಬರುವ ಬೆದರಿಕೆಯೊಡ್ಡಿ ತೆರಳಿದ್ದರು.

(ಕಾರ್ಕಳ ಎಎಸ್ಪಿ ಕೃಷ್ಣಕಾಂತ್ )

ತಲ್ಲೂರು, ಗೋಳಿಯಂಗಡಿ,ಜನ್ನಾಡಿಯಲ್ಲೂ ಬೆದರಿಕೆ!
ಆರೋಪಿಗಳನ್ನು ಇನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಈ ಗ್ಯಾಂಗಿನವರು ಇದೇ ರೀತಿಯಲ್ಲಿ ಕುಂದಾಪುರ ತಾಲೂಕಿನ ತಲ್ಲೂರಿನಲ್ಲಿ ವೈದ್ಯರೊಬ್ಬರಿಗೆ ಇದೇ ರೀತಿ ವಿಶ್ವಾಸಕ್ಕೆ ಪಡೆದು ಅವರು ಸುಮಾಳಿಗೆ ಮೈಮುಟ್ಟಿ ಚೆಕ್ ಮಾಡುವ ದೃಶ್ಯವನ್ನು ಸೆರೆಹಿಡಿದು ವೈದ್ಯರಿಗೆ ಬ್ಲಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಿದ ಬಗ್ಗೆ ಹಾಗೂ ಗೋಳಿಯಂಗಡಿಯಲ್ಲಿ ವೈದ್ಯರೊಬ್ಬರಿಗೆ ಇದೇ ರೀತಿ ಮಾಡುವ ಪ್ಲ್ಯಾನ್ ಮಾಡಿದ್ದಾರೆನ್ನಲಾಗಿದೆ. ಇದಲ್ಲದೇ ಕುಂದಾಪುರ ತಾಲೂಕಿನ ಜನ್ನಾಡಿಯ ಉದ್ಯಮಿಯೊಬ್ಬರಿಗೆ ಹಾಗೂ ಕುಂದಾಪುರದ ಹೊಸಂಗಡಿಯ ಜ್ಯೋತಿಷ್ಯರೊಬ್ಬರ ಹತ್ತಿರ ಹೋಗಿ ಅವರಲ್ಲಿ ಸಹ ವಿಶ್ವಾಸ ಗಳಿಸಿ ಮೈಮುಟ್ಟುವ ದೃಶ್ಯಗಳನ್ನು ಮೊಬೈಲ್‌ನಿಂದ ಸೆರೆ ಹಿಡಿದು ಅವರಿಗೆ ಬ್ಲಾಕ್ ಮೇಲ್ ಮಾಡಿ ಉದ್ಯಮಿದಾರರಿಂದ 1,50,000 ರೂಪಾಯಿ ಹಾಗೂ ಜ್ಯೋತಿಷ್ಯ ಹೇಳುವ ಭಟ್ಟರಿಂದ 3,00,000 ರೂಪಾಯಿ ಹಣವನ್ನು ಪಡೆದು ಸ್ವಂತಕ್ಕೆ ಖರ್ಚು ಮಾಡಿದ ಬಗ್ಗೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಬ್ಲಾಕ್ ಮೇಲ್ ಮಾಡಿ ಸಂಪಾದಿಸಿದ ಹಣದಲ್ಲಿ ಶಶಾಂಕ್ ದೊಡ್ಡದೊಂದು ಮನೆ ಕಟ್ಟಿಸುತ್ತಿದ್ದ ಎಂದು ತಿಳಿದುಬಂದಿದೆ.

ತಲವಾರು, ಕಾರು, ನಗದು ವಶ…
ಈ ಕಾರ್ಯಾಚರಣೆಯಲ್ಲಿ ಆರೋಪಿಯಿಂದ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಡಸ್ಟರ್ ಕಾರು, ಹೊಸ ಬೈಕ್, 26,000 ರೂಪಾಯಿ ನಗದ, ಮೊಬೈಲ್ ಅಳವಡಿಸಿದ ವ್ಯಾನಿಟಿ ಬ್ಯಾಗ್, ಬೇರೆ ಬೇರೆ ಕಂಪೆನಿಯ ಒಟ್ಟು ಏಳು ಮೊಬೈಲ್‌ಗಳು, ಚಾಕು ಹಾಗೂ ತಲವಾರು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ರಾಜೇಶ್ ಕೊಕ್ಕರ್ಣೆ, ಪ್ರವೀಣ್ ಶೆಟ್ಟಿ, ಸುರೇಂದ್ರ ಶೆಟ್ಟಿ, ದಿನೇಶ್, ದಾಮೋದರ್, ಉಲ್ಲಾಸ್, ಹಾಲೇಶಪ್ಪ, ಜ್ಯೋತಿ, ಜಯಲಕ್ಷ್ಮೀ ಹಾಗೂ ಸತೀಶ್ ಮೊದಲಾದವರು ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.