ಕಾರವಾರ: ಮದ್ಯ ಅಮಲಿನಲ್ಲಿ ಮಾಜಿ ಯೋಧನೊಬ್ಬ ತಮ್ಮನ ಪತ್ನಿ ಹಾಗೂ ಪುತ್ರನನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ.
ಅಂಕೋಲಾದ ಮಠಾಕೇರಿ ಬಡಾವಣೆಯ ನಿವಾಸಿ ಅಜೀತ್ ಅವರ ಪತ್ನಿ ಮೇಧಾ (40) ಹಾಗೂ ಪುತ್ರ ಅನುಜ್ (09) ಕೊಲೆಯಾದವರು. ಅಜಯ್ ಪ್ರಭು ಕೊಲೆ ಮಾಡಿದ ಮಾಜಿ ಯೋಧ.
ಅಜಯ್ ಪ್ರಭು 2009ರಲ್ಲಿ ಸೇನೆಯಿಂದ ನಿವೃತ್ತಿ ಹೊಂದಿದ್ದ. ಆದರೆ ಕೌಟುಂಬಿಕ ಕಲಹದಿಂದಾಗಿ ಕೆಲ ತಿಂಗಳ ಹಿಂದೆ ಪತ್ನಿ ಆತನನ್ನು ಬಿಟ್ಟು ತವರು ಮನೆ ಹೋಗಿದ್ದಾಳೆ. ಹೀಗಾಗಿ ನಿತ್ಯವೂ ಅಜಯ್ ಪ್ರಭು ಮದ್ಯ ಸೇವನೆ ಮಾಡುತ್ತಿದ್ದ. ಅಷ್ಟೇ ಅಲ್ಲದೆ ಕೆಳಗಿನ ಮನೆಯಲ್ಲಿ ವಾಸವಿದ್ದ ತಮ್ಮ ಅಜೀತ್ ಹಾಗೂ ಆತನ ಪತ್ನಿಯ ಜೊತೆಗೆ ಆಗಾಗ ಜಗಳವಾಡುತ್ತಿದ್ದ.
ಅಜಯ್ ಎಂದಿನಂತೆ ಶನಿವಾರವೂ ಮದ್ಯದ ಸೇವಿಸಿ ಮನೆಗೆ ಬಂದಿದ್ದ. ಈ ವೇಳೆ ತನ್ನ ಬಳಿ ಇದ್ದ ಗನ್ನಿಂದ ಅನುಜ್ ಹಾಗೂ ಮೇಧಾ ಮೇಲೆ ಗುಂಡು ಹಾರಿಸಿದ್ದಾನೆ. ಪರಿಣಾಮ ಇಬ್ಬರಿಗೂ ಗುಂಡು ತಗುಲಿ ಅನುಜ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೇಧಾ ಗಂಭೀರವಾಗಿ ಗಾಯಗೊಂಡಿದ್ದರು. ಗುಂಡಿನ ಸದ್ದು ಕೇಳಿದ ತಕ್ಷಣವೇ ಸ್ಥಳೀಯರು ಘಟನಾ ಸ್ಥಳಕ್ಕೆ ಬಂದಿದ್ದು, ರಕ್ತಸ್ರಾವದಿಂದ ಬಳಲುತ್ತಿದ್ದ ಮೇಧಾ ಅವರನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೇಧಾ ಅವರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೊನ್ನಾವರ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೇಧಾ ಸಾವನ್ನಪ್ಪಿದ್ದಾರೆ. ಈ ಸಂಬಂಧ ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಜಯ್ ಪ್ರಭುನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
Comments are closed.