ಮಂಗಳೂರು, ಜುಲೈ.28: ಜನಸಾಮಾನ್ಯರ ಆಡುಭಾಷೆಯ ಅವಿಭಾಜ್ಯ ಅಂಗವಾಗಿರುವ ಒಗಟುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅಖಿಲ ಭಾರತ ಬ್ಯಾರಿ ಪರಿಷತ್ ನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪದ ಕ್ಯಾಪಿಟಲ್ ಅವೆನ್ಯೂ ಕಟ್ಟಡದ ತಳ ಅಂತಸ್ತಿನಲ್ಲಿ ಶನಿವಾರ ‘ಎದ್ರ್ ಮಸಲೆಙಲೊ ಗಮ್ಮತ್ತ್’ (ಬ್ಯಾರಿ ಒಗಟುಗಳ ಸಂಭ್ರಮ) ಕಾರ್ಯಕ್ರಮವನ್ನು ಆಯೋಜಿಸಿತ್ತು.
‘ಒಗಟುಗಳ ಮಹತ್ವ’ದ ಬಗ್ಗೆ ಮಾತನಾಡಿದ ಸಾಹಿತಿ ಸಂಶುದ್ದೀನ್ ಮಡಿಕೇರಿ ಒಗಟುಗಳು ಜಾನಪದ ಸಾಹಿತ್ಯ ಮಾತ್ರವಲ್ಲ, ಕಲೆಯೂ ಆಗಿದೆ. ಹಿಂದೆ ಬರಹ ಸಂಸ್ಕೃತಿ ಇರಲಿಲ್ಲ. ಜಾನಪದವೇ ಸಾಹಿತ್ಯಕ್ಕೆ ಮುಖ್ಯ ಆಕರವಾಗಿತ್ತು. ಒಗಟು ಕೇವಲ ಮನರಂಜನೆಯ ಕಲೆಯಲ್ಲ. ಅದೊಂದು ಸಾಹಿತ್ಯದ ಪ್ರಾಕಾರವೂ ಆಗಿದೆ. ಬುದ್ಧಿಶಕ್ತಿ ಚುರುಕುಗೊಳಿಸುವ ಪ್ರಕ್ರಿಯೆಯೂ ಇದರಲ್ಲಿದೆ ಎಂದರು.
ಅಖಿಲ ಭಾರತ ಬ್ಯಾರಿ ಪರಿಷತ್ನ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಜೆ. ಹುಸೇನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಹೈದರ್ ಪರ್ತಿಪ್ಪಾಡಿ, ಪೇರೂರು ಜಾರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಮಾಜಿ ಕಾರ್ಪೊರೇಟರ್ ಲತೀಫ್ ಕಂದುಕ, ಬ್ಯಾರಿ ಅಕಾಡಮಿಯ ಮಾಜಿ ಸದಸ್ಯ ಖಾಲಿದ್ ಉಜಿರೆ, ಅಬ್ದುಲ್ ಮಜೀದ್ ಸೂರಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಕೆ. ಅಬೂಬಕರ್ ಪಲ್ಲಮಜಲು ಸ್ವಾಗತಿಸಿದರು. ಕೋಶಾಧಿಕಾರಿ ನಿಸಾರ್ ಎಫ್. ಮುಹಮ್ಮದ್ ವಂದಿಸಿದರು. ಉಪಾಧ್ಯಕ್ಷ ಯೂಸುಫ್ ವಕ್ತಾರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪ್ರಥಮ ಬ್ಯಾರಿ ಒಗಟುಗಳು ಮತ್ತು ಬ್ಯಾರಿ ವ್ಯಾಕರಣ ಹೊರತಂದ ಹಿರಿಯ ಸಂಶೋಧಕ ಪ್ರೊ. ಬಿ.ಎಂ. ಇಚ್ಲಂಗೋಡು ಅವರನ್ನು ಗೌರವಿಸಲಾಯಿತು.
ಸಭಿಕರಿಗೆ ಏರ್ಪಡಿಸಲಾದ ಒಗಟು ಸ್ಪರ್ಧೆಯಲ್ಲಿ ವಿಜೇತರಾದ ಆಸೀಫ್ ಬಜ್ಪೆ (ಪ್ರಥಮ) ಮತ್ತು ಎನ್.ಇ. ಮುಹಮ್ಮದ್ (ದ್ವಿತೀಯ) ನಗದು ಬಹುಮಾನ ನೀಡಲಾಯಿತು. ಹಿರಿಯ ಬ್ಯಾರಿ ಕಲಾವಿದ ಮರ್ಹೂಂ ಇಬ್ರಾಹೀಂ ತಣ್ಣೀರುವಾವಿ ಅವರಿಗೆ ಸಂತಾಪ ಸಲ್ಲಿಸಲಾಯಿತು.
Comments are closed.