ರಾಷ್ಟ್ರೀಯ

ಕಲಂ 370 ನಿಷೇಧಕ್ಕೆ ಬೆಂಬಲ ಸೂಚಿಸುತ್ತಿರುವ ಕೆಲ ಕಾಂಗ್ರೆಸ್ ನಾಯಕರು

Pinterest LinkedIn Tumblr


ನವ ದೆಹಲಿ (ಆಗಸ್ಟ್.06); ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಕಲಂ 370 ಹಾಗೂ 35ಎ ಅನ್ನು ನಿಷೇಧ ಮಾಡುವ ಮೂಲಕ ಭಾರತದ ಐತಿಹಾಸಿಕ ತಪ್ಪೊಂದನ್ನು ಸರಿಪಡಿಸಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ರಾಜ್ಯಸಭಾ ಸದಸ್ಯ ಜನಾರ್ದನ ದ್ವಿವೇದಿ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಜಮ್ಮು-ಕಾಶ್ಮೀರ ವಿಚಾರದಲ್ಲಿ ತಮ್ಮ ಮಾತೃ ಪಕ್ಷದ ಜೊತೆಗೆ ತಮಗೆ ಭಿನ್ನಾಭಿಪ್ರಾಯ ಇದೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಅವರು, “ಸ್ವತಂತ್ರ್ಯಾ ನಂತರದ ಭಾರತದಲ್ಲಿ ಮಾಡಿದ ಮೊದಲ ತಪ್ಪೊಂದನ್ನು ತಡವಾಗಿಯಾದರೂ ಈಗ ಸರಿಗಟ್ಟಲಾಗಿದೆ. ಇದು ತೀರಾ ಹಳೆಯ ವಿಚಾರವಾಗಿದ್ದು, 50ರ ದಶಕದಲ್ಲಿ ಅನೇಕ ಸ್ವಾತಂತ್ರ್ಯಾ ಹೋರಾಟಗಾರರು 370ನೇ ವಿಧಿಗೆ ವಿರೋಧ ವ್ಯಕ್ತಪಡಿಸಿದ್ದರು. ನಾನು ರಾಮ ಮನೋಹರ ಲೋಹಿಯ ಅವರ ಮಾರ್ಗದರ್ಶನದಲ್ಲಿ ರಾಜಕೀಯ ಪ್ರವೇಶಿಸಿದವನು, ಲೋಹಿಯಾ ಅವರು ಸಹ ಈ ವಿಧಿಯನ್ನು ವಿರೋಧಿಸಿದ್ದರು. ಹೀಗಾಗಿ ಇದು ವ್ಯಯಕ್ತಿಯವಾಗಿ ನನಗೂ ತೃಪ್ತಿದಾಯಕವಾದ ವಿಚಾರ” ಎಂದು ತಿಳಿಸಿದ್ದಾರೆ.

“ಕಲಂ 370 ಅನ್ನು ನಿಷೇಧ ಮಾಡುವ ಕೇಂದ್ರ ಸರ್ಕಾರದ ವಿಧೇಯಕವನ್ನು ರಾಜ್ಯಸಭೆ ಸೋಮವಾರ ಅಂಗೀಕರಿಸಿದೆ, ಮಂಗಳವಾರ ಈ ವಿಧೇಯಕ ಲೋಕಸಭೆಯಲ್ಲೂ ಅಂಗೀಕಾರವಾಗುವುದು ಖಚಿತ ಎಂದು ತಿಳಿಸಿರುವ ಜನಾರ್ದನ ದ್ವಿವೇದಿ, ಇದು ತಮ್ಮ ವ್ಯಯಕ್ತಿಕ ಅಭಿಪ್ರಾಯವಾಗಿದ್ದು, ಜಮ್ಮು-ಕಾಶ್ಮೀರದ ಕುರಿತ ಕಾಂಗ್ರೆಸ್ ಪಕ್ಷದ ನಿಲುವಿಗೂ ನನ್ನ ಅಭಿಪ್ರಾಯಕ್ಕೂ ಯಾವುದೇ ಸಂಬಂಧ ಇಲ್ಲ” ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಬಹುಕಾಲ ಅಧಿಕಾರ ವಹಿಸಿಕೊಂಡಿದ್ದ ಜನಾದರ್ನ ದ್ವಿವೇದಿ ಅವರ ಈ ನಡೆ ಜಮ್ಮು-ಕಾಶ್ಮೀರ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಎರಡು ಬಣ ಹಾಗೂ ಭಿನ್ನಾಭಿಪ್ರಾಯ ಇದೆ ಎಂಬ ವಿಚಾರಕ್ಕೆ ಸಾಕ್ಷಿ ನುಡಿಯುವಂತಿದೆ.

ಕಲಂ 370 ನಿಷೇಧಕ್ಕೆ ಬೆಂಬಲ ಸೂಚಿಸಿ ಕಾಂಗ್ರೆಸ್ ರಾಜ್ಯಸಭಾ ಸದಸ್ಯನಿಂದ ರಾಜೀನಾಮೆ;

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕಲಂ 370 ನಿಷೇಧಕ್ಕೆ ಬೆಂಬಲ ಸೂಚಿಸಿರುವ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಭುವನೇಶ್ವರ್ ಖಲಿತಾ ಸೋಮವಾರ ತಮ್ಮ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ರಾಜೀನಾಮೆ ಪತ್ರದಲ್ಲಿ ಸ್ಪಷ್ಟೀಕರಣ ನೀಡಿರುವ ಅವರು, “ಕಲಂ 370 ನಿಷೇಧವನ್ನು ಕಾಂಗ್ರೆಸ್ ವಿರೋಧಿಸುತ್ತದೆ. ಹೀಗಾಗಿ ರಾಜ್ಯಸಭೆಯಲ್ಲಿ ಈ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸುವಂತೆ ಪಕ್ಷ ಸೂಚಿಸಿತ್ತು. ಆದರೆ, ಇದು ರಾಷ್ಟ್ರದ ಮನಸ್ಥಿತಿಗೆ ವಿರೋಧವಾದದ್ದು ಹಾಗೂ ದೇಶವನ್ನು ವಿಭಜಿಸುವ ನಡೆ. ಅಲ್ಲದೆ ಕಾಂಗ್ರೆಸ್ ಪಕ್ಷ ವಿನಾಶದ ಹಾದಿ ಹಿಡಿದಿದ್ದು ನಾನು ಪಕ್ಷಕ್ಕೆ ಯಾವ ಕೊಡುಗೆಯನ್ನೂ ನೀಡಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ” ಎಂದು ವಿಷಾಧಿಸಿದ್ದಾರೆ.

ಇವರ ರಾಜೀನಾಮೆಯನ್ನು ಒಪ್ಪಿಕೊಂಡಿರುವುದಾಗಿ ಸದನದಲ್ಲಿ ರಾಜ್ಯಸಭಾ ಅಧ್ಯಕ್ಷ lok saವೆಂಕಯ್ಯ ನಾಯ್ಡು ಘೋಷಿಸಿದ್ದಾರೆ.

ಕಾಂಗ್ರೆಸ್ ಮಾಜಿ ಸಂಸದ ದೀಪೆಂದರ್ ಹೂಡ ಸಹ ಈ ಕುರಿತು ಟ್ವೀಟ್ ಮಾಡಿದ್ದು, “21ನೇ ಶತಮಾನದಲ್ಲಿ 370ನೇ ವಿಧಿಯನ್ನು ಈಗಲೂ ಪಾಲಿಸುವ ಅಗತ್ಯವಿಲ್ಲ. ಹೀಗಾಗಿ ಈ ವಿಧಿಯನ್ನು ರದ್ದು ಮಾಡಿರುವುದು ದೇಶದ ಹಿತ ದೃಷ್ಟಿಯಿಂದ ಮಾತ್ರವಲ್ಲ, ಜಮ್ಮು-ಕಾಶ್ಮೀರದ ಹಿತದೃಷ್ಟಿಯಿಂದಲೂ ಉತ್ತಮ ನಿರ್ಣಯ. ಕಣಿವೆ ರಾಜ್ಯದಲ್ಲಿ ಇನ್ನಾದರೂ ಶಾಂತಿ ಕಾಪಾಡಲು ಈ ನಿರ್ಣಯ ಸಹಕಾರಿಯಾಗಲಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

Comments are closed.