ಕರಾವಳಿ

ಮಂಗಳೂರು : ಆ. 10ರೊಳಗೆ ಉದ್ದಿಮೆ ಪರವಾನಗಿ ನವೀಕರಿಸದಿದ್ದಲ್ಲಿ ಉದ್ದಿಮೆ ರದ್ದು

Pinterest LinkedIn Tumblr

ಮಂಗಳೂರು ಆಗಸ್ಟ್ 06 :ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ನಡೆಸುತ್ತಿರುವ ಎಲ್ಲಾ ಉದ್ದಿಮೆದಾರರು ಪ್ರತಿ ಆರ್ಥಿಕ ವರ್ಷಾಂತ್ಯದ ಮಾರ್ಚ್ ತಿಂಗಳೊಳಗೆ ತಮ್ಮ ಉದ್ದಿಮೆ ಪರವಾನಗಿಯನ್ನು ಮಂಗಳೂರು ಮಹಾನಗರಪಾಲಿಕೆಯಲ್ಲಿ ನವೀಕರಿಸಿಕೊಂಡು ಉದ್ದಿಮೆಯನ್ನು ಮುಂದುವರಿಸ ಬೇಕಾಗಿರುತ್ತದೆ. ಮತ್ತು ಹೊಸ ಉದ್ದಿಮೆ ಪ್ರಾರಂಭಿಸುವ ಮೊದಲು ಉದ್ದಿಮೆ ಪರವಾನಗಿಯನ್ನು ಪಡೆದುಕೊಂಡೇ ಉದ್ದಿಮೆಯನ್ನು ನಡೆಸಬೇಕಾಗಿರುತ್ತದೆ.

ಆದರೆ ಪ್ರಸ್ತುತ ಹೆಚ್ಚಿನ ಉದ್ದಿಮೆದಾರರು ಈವರೆಗೂ ತಮ್ಮ ಉದ್ದಿಮೆ ಪರವಾನಗಿಯನ್ನು ನವೀಕರಿಸದೇ ಉದ್ದಿಮೆಯನ್ನು ಮುಂದುವರಿಸುತ್ತಿರುವುದು ಹಾಗೂ ಹೊಸ ಉದ್ದಿಮೆ ಪ್ರಾರಂಭಿಸಿದ್ದಲ್ಲಿ ಉದ್ದಿಮೆ ಪರವಾನಗಿಯನ್ನು ಪಡೆಯದೇ ಇರುವುದು ಮಂಗಳೂರು ಮಹಾನಗರಪಾಲಿಕೆಯ ಗಮನಕ್ಕೆ ಬಂದಿರುತ್ತದೆ.

ಆದುದರಿಂದ ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಪ್ರಸ್ತುತ ಉದ್ದಿಮೆ ನಡೆಸುತ್ತಿರುವ ಎಲ್ಲಾ ಉದ್ದಿಮೆದಾರರು ಆಗಸ್ಟ್ 10 ರೊಳಗೆ ತಮ್ಮ ಉದ್ದಿಮೆ ಪರವಾನಗಿಯನ್ನು ನವೀಕರಿಸಲು ಅರ್ಜಿ ಸಲ್ಲಿಸಿ ಉದ್ದಿಮೆಯನ್ನು ನವೀಕರಿಸಬೇಕು ಹಾಗೂ ಹೊಸ ಉದ್ದಿಮೆದಾರರು, ಉದ್ದಿಮೆ ಪರವಾನಗಿಯನ್ನು ಪಡೆದುಕೊಳ್ಳತಕ್ಕದ್ದು.

ತಪ್ಪಿದ್ದಲ್ಲಿ ಈ ಪತ್ರಿಕಾ ವರದಿಯನ್ನು ಅಂತಿಮ ನೋಟೀಸು ಎಂದು ಪರಿಗಣಿಸಿ ಇನ್ನು ಮುಂದಕ್ಕೆ ಯಾವುದೇ ಮುನ್ಸೂಚನೆ ನೀಡದೆ ನಿಮ್ಮ ಉದ್ದಿಮೆಯನ್ನು ರದ್ದುಪಡಿಸುವ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.

Comments are closed.