ಕರ್ನಾಟಕ

ಭಾರೀ ಮಳೆಗೆ ಕುಸಿದ ಐತಿಹಾಸಿಕ ಕಿತ್ತೂರು ರಾಣಿ ಚೆನ್ನಮ್ಮ ಕೋಟೆ

Pinterest LinkedIn Tumblr


ಬೆಳಗಾವಿ,(ಆ.06): ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳೆದ 10 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನಜೀವನ ಸಂಪೂರ್ಣ ಅಸ್ಯವ್ಯಸ್ತವಾಗಿದೆ. ಆ ಭಾಗದ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ನೆರೆಪೀಡಿತ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಆದರೆ ಈ ನಡುವೆಯೇ ಕುಂದಾನಗರಿ ಬೆಳಗಾವಿಯಲ್ಲಿ ಐತಿಹಾಸಿಕ ಕೋಟೆಯ ಗೋಡೆ ಕುಸಿದಿದೆ.

ಹೌದು, ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿರುವ ಐತಿಹಾಸಿಕ ಕೋಟೆ ಎಂದೇ ಹೆಸರಾದ ಕಿತ್ತೂರು ರಾಣಿ ಚೆನ್ನಮ್ಮ ಕೋಟೆಯ ಗೋಡೆ ಕುಸಿದಿದ್ದು, ಆತಂಕಕ್ಕೆ ಕಾರಣವಾಗಿದೆ. ಕಳೆದ 10 ದಿನಗಳಿಂದ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿರುವುದರಿಂದ ಕೋಟೆಯ ಗೋಡೆಗಳು ಶಿಥಿಲಗೊಂಡಿವೆ. ಐತಿಹಾಸಿಕ ಕೋಟೆಯ ಒಟ್ಟು ಮೂರು ಕಡೆ ಗೋಡೆ ಕುಸಿತವಾಗಿದೆ.

ಕೋಟೆ ಆವರಣದ ಒಳಗಡೆ ಅಂದಾಜು 30 ಅಡಿ, ಕೋಟೆ ಆವರಣದ ಹೊರಗಡೆ 80 ಅಡಿಯಷ್ಟು ಗೋಡೆ ಕಳಚಿ ಬಿದ್ದಿದೆ. ಮಳೆಯ ಆರ್ಭಟ ಹೀಗೆ ಮುಂದುವರೆದರೆ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಗೋಡೆ ಕಳಚಿ ಬೀಳಲಿದೆ ಎನ್ನಲಾಗುತ್ತಿದೆ. ಹೀಗಾಗಿ ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಆತಂಕ ಮನೆ ಮಾಡಿದೆ.

ಕೋಟೆಯಲ್ಲಿರುವ ದರ್ಬಾರ್ ಹಾಲ್, ಮದ್ದುಗುಂಡುಗಳ ಸಂಗ್ರಹಾಗಾರ, ಬತೇರಿ, ಅರಮನೆಯ ಮುಖ್ಯದ್ವಾರ, ಅತಿಥಿ ಕೋಣೆಗಳು, ಸಭಾಗೃಹ, ಭೋಜನಾಲಯ, ಪೂಜಾ ಕೊಠಡಿ, ಬಾವಿಗಳು, ಸ್ನಾನದ ಮನೆಗಳು ಮುಂತಾದವು ಈಗಾಗಲೇ ಅವಸಾನದಂಚಿಗೆ ತಲುಪಿದ್ದವು ಎಂದು ತಿಳಿದುಬಂದಿದೆ. ಮಳೆಯ ಆರ್ಭಟ ಹೆಚ್ಚಾದರೆ ಕೋಟೆ ಸಂಪೂರ್ಣ ಹಾಳಾಗುವುದರಲ್ಲಿ ಅನುಮಾನವೇ ಇಲ್ಲ.

Comments are closed.