ಮಂಗಳೂರು, ಆಗಸ್ಟ್.12: ದೇಶಾದ್ಯಂತ ಇಂದು ಬಕ್ರಿದ್ ಹಬ್ಬದ ಸಂಭ್ರಮ. ಪ್ರವಾದಿ ಇಬ್ರಾಹಿಂ (ಅ) ಮತ್ತು ಅವರ ಪುತ್ರ ಇಸ್ಮಾಯಿಲ್ (ಅ) ಅವರ ತ್ಯಾಗದ ಸಂಕೇತವಾಗಿ ಆಚರಿಸಲಾಗುವ ಬಕ್ರೀದ್ ಹಬ್ಬವನ್ನು ಸೋಮವಾರ ಕರಾವಳಿಯಾದ್ಯಂತ ಸರಳವಾಗಿ ಆಚರಿಸಲಾಯಿತು.
ಭಾರೀ ಮಳೆಯಿಂದ ದಕ್ಷಿಣ ಕನ್ನಡದಲ್ಲಿ ಪ್ರಾಕೃತಿಕ ವಿಕೋಪದಿಂದ ಹಲವಾರು ಮಂದಿ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಮುಸ್ಲಿಮರ ಎರಡನೇ ದೊಡ್ಡ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು. ಮಂಗಳೂರು ನಗರ, ಬಂಟ್ವಾಳ, ಮೂಡಬಿದ್ರೆ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬದಲ್ಲಿ ಸರಳವಾಗಿ ಬಕ್ರೀದ್ ಆಚರಿಸಲಾಯಿತು.
ದ.ಕ. ಜಿಲ್ಲೆಯ ಎಲ್ಲಾ ಪ್ರಮುಖ ಮಸೀದಿಗಳಲ್ಲೂ ವಿಶೇಷ ನಮಾಝ್ನೊಂದಿಗೆ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಆಚರಿಸಿದರು. ಬೆಳಗ್ಗೆ ಸಾಮೂಹಿಕ ನಮಾಝ್, ಧರ್ಮ ಗುರುಗಳಿಂದ ಈದ್ ಸಂದೇಶ ಸಹಿತ ಪ್ರವಚನ, ಪರಸ್ಪರ ಈದ್ ಶುಭಾಶಯ ವಿನಿಯಮ ನಡೆಯಿತು.
ಉಳಿದಂತೆ ಕುದ್ರೊಳಿ ಜಾಮಿಯಾ ಮಸೀದಿಯಲ್ಲಿ ಧರ್ಮ ಗುರು ಮುಫ್ತಿ ಮನ್ನಾನ್ ಸಾಹೇಬ್ ಅವರ ನೇತೃತ್ವದಲ್ಲಿ ನಮಾಝ್, ಪ್ರವಚನ ನಡೆಯಿತು. ಮಂಗಳೂರು ವಾಸ್ಲೇನ್ನ ಮಸ್ಜಿದುಲ್ ಎಹ್ಸಾನ್, ಪಂಪ್ವೆಲ್ನ ತಖ್ವಾ ಮಸ್ಜಿದ್, ಹಂಪನಕಟ್ಟೆಯ ಮಸ್ಜಿದ್ ನೂರ್, ಸಿಟಿ ಬಸ್ ನಿಲ್ದಾಣ ಸಮೀಪದ ಇಬ್ರಾಹಿಂ ಖಲೀಲ್, ಬಂದರ್ನ ಕಚ್ಚಿ ಮಸ್ಜಿದ್ ಸಹಿತ ವಿವಿಧೆಡೆ ನಮಾಝ್ ನಡೆಯಿತು.
ನಗರದ ಬಾವುಟ ಗುಡ್ಡೆಯ ಈದ್ಗಾ ಮಸೀದಿಯಲ್ಲಿ ಈದುಲ್ ಅಝ್ಹಾ ಪ್ರಾರ್ಥನೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಈದ್ ಹಬ್ಬದ ವಿಶೇಷ ಪ್ರಾರ್ಥನೆ ಹಾಗೂ ಖುತ್ಬಾ ಪ್ರವಚನ ನೀಡಿದರು.
ಮಂಗಳೂರಿನ ಬಾವುಟಗುಡ್ಡೆ ಮಸೀದಿಯಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಮಾಜಿ ಸಚಿವ, ಶಾಸಕ ಯುಟಿ ಖಾದರ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಯುಟಿ ಖಾದರ್, ನೆರೆ ಬಂದು ಸಾವಿರಾರು ಮಂದಿ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾವೆಲ್ಲಾ ಸರಳವಾಗಿ ಬಕ್ರೀದ್ ಹಬ್ಬವನ್ನು ಆಚರಿಸುತ್ತಿದ್ದೇವೆ. ಇನ್ಮುಂದೆ ಇಂತಹ ಅನಾಹುತಗಳು ನಡೆಯದಿರಲಿ. ಎಲ್ಲರಿಗೂ ಸುಖ, ಶಾಂತಿ ನೀಡಲೆಂದು ವಿಶೇಷವಾಗಿ ಪ್ರಾರ್ಥಿಸಿದ್ದೇವೆಎಂದು ಹೇಳಿ, ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಶುಭಾಶಯ ನೀಡಿದರು.
ಪೊಲೀಸ್ ಆಯುಕ್ತರಿಂದ ಬಕ್ರಿದ್ ಶಭಾಶಯ :
ಇದೇ ವೇಳೆ ನಗರದ ನೂತನ ಪೊಲೀಸ್ ಆಯುಕ್ತ ಡಾ. ಹರ್ಷ ಅವರು ನಗರದ ಬಾವುಟ ಗುಡ್ಡ ಈದ್ಗಾ ಮಸೀದಿಗೆ ಭೇಟಿ ನೀಡಿ ಮಕ್ಕಳು ಸೇರಿದಂತೆ ಅಲ್ಲಿದ್ದ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು. ಹಬ್ಬಗಳು ಯಾವತ್ತೂ ಭಾತ್ರತ್ವ ಹಾಗೂ ಶಾಂತಿಯ ಸಂದೇಶವನ್ನು ನೀಡುತ್ತವೆ ಎಂದು ತಮ್ಮ ಸಂದೇಶದಲ್ಲಿ ಅವರು ಹೇಳಿದರು.ಇವರ ಜೊತೆ ಡಿಸಿಪಿಗಳಾದ ಹನುಮಂತರಾಯ ಹಾಗೂ ಲಕ್ಷ್ಮೀ ಗಣೇಶ್ ಅವರು ಕೂಡ ಅಲ್ಲಿಗೆ ಭೇಟಿ ನೀಡಿ ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿದರು.
Comments are closed.