ಕರಾವಳಿ

ಕಟ್‌ಬೆಲ್ತೂರಿನ ಮೀನು ಸಂಸ್ಕರಣಾ ಘಟಕದಲ್ಲಿ `ಅಮೋನಿಯಾ’ ಸೋರಿಕೆಯಾಗಿ 74 ಕಾರ್ಮಿಕರು ಅಸ್ವಸ್ಥ; ಡಿಸಿ, ಎಸ್‌ಪಿ ಭೇಟಿ

Pinterest LinkedIn Tumblr

ಕುಂದಾಪುರ: ಮೀನು ಸಂಸ್ಕರಣಾ ಕಾರ್ಖಾನೆಯಲ್ಲಿ ಅಮೋನಿಯಾ ಸೋರಿಕೆಯಾಗಿ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುಮಾರು 74 ಕಾರ್ಮಿಕರು ಅಸ್ವಸ್ಥರಾದ ಘಟನೆ ಸೋಮವಾರ ಬೆಳಿಗ್ಗೆ ಉಡುಪಿ ಜಿಲ್ಲೆಯ ಕುಂದಾಫುರ ತಾಲೂಕಿನ ಹೆಮ್ಮಾಡಿ ಸಮೀಪದ ಕಟ್‌ಬೆಲ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ದೇವಲ್ಕುಂದದ ಮಲ್ಪೆಫ್ರೆಶ್‌ಮರೈನ್ ಎಕ್ಸ್‌ಪೋರ್ಟ್ ಪ್ರೈ.ಲಿ. ಘಟಕದಲ್ಲಿ ನಡೆದಿದೆ.

67 ಮಂದಿ ಮಹಿಳಾ ಕಾರ್ಮಿಕರು ಹಾಗೂ 7 ಮಂದಿ ಪುರುಷ ಕಾರ್ಮಿಕರು ಅಸ್ವಸ್ಥರಾಗಿದ್ದು ಮೂರ್ನಾಲ್ಕು ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ. ಎಲ್ಲರಿಗೂ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಧಿಕಾರಿ, ಎಸ್ಪಿ ಸಹಿತ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಆಸ್ಪತ್ರೆಗೆ ಭೇಟಿನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಆಗಿದ್ದೇನು?
ಬೆಳಿಗ್ಗೆ ಸುಮಾರಿಗೆ ಈ ಘಟಕದಲ್ಲಿ ಪೈಪ್‌ನಲ್ಲಿ ದೋಷದಿಂದಾಗಿ ಅಮೋನಿಯಾ ಅನಿಲ ಸೋರಿಕೆಯಾಗಿದ್ದು ತಕ್ಷಣ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಅಗ್ನಿಶಾಮಕದವರಿಗೆ ಮಾಹಿತಿ ನೀಡುವ ಮೂಲಕ ಸ್ಥಳಕ್ಕಾಗಮಿಸಿದ ಉಡುಪಿ ಜಿಲ್ಲಾ ಅಗ್ನಿಶಾಮಕ ದಳದ ವಸಂತ ಕುಮಾರ್ ಹಾಗೂ ಕುಂದಾಪುರ ಅಗ್ನಿಶಾಮಕದಳದ ತಂಡ ಅನಿಲ ಸೋರಿಕೆಯನ್ನು ತಡೆಯುವ ಮೂಲಕ ಸ್ಥಳದಲ್ಲಿ ನೀರು ಹಾಯಿಸುವೂದ ಮೂಲಕ ಅನಿಲ ಸೋರಿಕೆಯಿಂದಾಗುವ ಹೆಚ್ಚಿನ ಅಪಾಯ ತಪ್ಪಿದೆ.

ಸ್ಥಳಕ್ಕೆ ಡಿಸಿ,ಎಸ್ಪಿ ಬೇಟಿ
ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲಾಧಿಕಾರಿ ಹೆಬ್ಸಿಪಾ ರಾಣಿ ಕೊರ್ಲಪಾಟಿಯವರು ಪರಿಶೀಲಿಸಿ ಘಟಕದಲ್ಲಿ ಕಾರ್ಮಿಕರಾಗಿದ್ದ ಸುಮಾರು 74 ಜನರು ಅಸ್ವಸ್ಥರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು ಇಬ್ಬರು ಸ್ವಲ್ಪ ತೀರ್ವ ಅಸ್ವಸ್ಥಾರಾಗಿದ್ದಾರೆ. ಸ್ಥಳದಲ್ಲಿ ಅಗ್ನಿ ಶಾಮಕ ದಳದವರು ಕಾರ್ಯಾಚರಣೆ ನಡೆಸಿ ರಾಸಾಯನಿಕ ತೀವ್ರತೆಯನ್ನು ಹತೋಟಿಗೆ ತಂದಿದ್ದಾರೆ. ಈ ಸಂಪೂರ್ಣ ಘಟನೆಯ ಬಗ್ಗೆ ತನಿಕೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಬಗ್ಗೆ ಕುಂದಾಪುರ ಉಪವಿಭಾಗಾಧಿಕಾರಿ ಬಳಿ ವರದಿ ನೀಡಲು ಸೂಚಿಸಿರುವ ಬಗ್ಗೆಯೂ ತಿಳಿಸಿದರು.

ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ನೀಶಾ ಜೇಮ್ಸ್ , ಕುಂದಾಪುರ ಡಿವೈ‌ಎಸ್‌ಪಿ ಬಿ.ಪಿ. ದಿನೇಶ್ ಕುಮಾರ್, ಕುಂದಾಪುರ ಉಪವಿಭಾಗಾಧಿಕಾರಿ ಡಾ. ಮಧುಕೇಶ್ವರ್, ತಹಶಿಲ್ದಾರ್ ತಿಪ್ಪೆಸ್ವಾಮಿ, ತಾಲೂಕು ವೈದ್ಯಾಧಿಕಾರಿ, ಡಾ. ನಾಗಭೂಷಣ್ ಉಡುಪ, ಬೈಂದೂರು ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ. ಪ್ರೇಮಾನಂದ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಮಟ್ಟದ ಅಧಿಕಾರಿ ಲಕ್ಷ್ಮೀಕಾಂತ, ಕುಂದಾಪುರ ಗ್ರಾಮಾಂತರ ಠಾಣೆ ಪಿ‌ಎಸ್‌ಐ ಶ್ರೀಧರ್ ನಾಯ್ಕ್, ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ. ಪುತ್ರನ್, ಗ್ರಾಮಪಂಚಾಯತ್ ಸದಸ್ಯರುಗಳು ಆಗಮಿಸಿದ್ದರು.

ಅಗ್ನಿಶಾಮಕ ಕಾರ್ಯಕ್ಕೆ ಪ್ರಶಂಸೆ
ಮುಂಜಾನೆ 5.30 ರಿಂದ 6 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಸಮೀಪದ ನಿವಾಸಿಗಳು ಅನಾಹುತದ ಮುನ್ಸೂಚನೆಯನ್ನು ಗ್ರಾಮಾಂತರ ಠಾಣೆ ಪಿ‌ಎಸ್‌ಐ ಶ್ರೀಧರ್ ನಾಯ್ಕ್ ಗಮನಕ್ಕೆ ತರುತ್ತಾರೆ. ತಕ್ಷಣ ಕಾರ್ಯಪ್ರವರ್ರತರಾದ ಅವರು ಅಗ್ನಿಶಾಮಕ ದಳ ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ತಾನೂ ಕೂಡ ಸ್ಥಳಕ್ಕೆ ದೌಡಾಯಿಸುತ್ತಾರೆ. ಸುಮಾರು 6.40ರ ಹೊತ್ತಿಗೆ ಫ್ಯಾಕ್ಟರಿಯತ್ತ ಎರಡು ಅಗ್ನಿಶಾಮಕದಳ ವಾಹನಗಳು ಅಧಿಕಾರಿ ಸಿಬ್ಬಂದಿಗಳ ಸಮೇತ ಆಗಮಿಸಿ ಕಾರ್ಯಾಚರಣೆ ನಡೆಸುತ್ತಾರೆ. ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ವಸಂತ ಕುಮಾರ್, ಕುಂದಾಪುರದ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಕೊರಗ ನಾಗ ಮೊಗೇರ, ಉಡುಪಿ ಠಾಣಾಧಿಕಾರಿ ಗೋಪಾಲ ಹಾಗೂ 16 ಸಿಬ್ಬಂದಿಗಳ ತಂಡ ಹತ್ತು ಗಂಟೆಗೂ ಅಧಿಕ ಕಾಲ ತಮ್ಮ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿದ್ದು ಜಿಲ್ಲಾಧಿಕಾರಿ, ಎಸ್ಪಿ, ಎಸಿ ಸಮೇತ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ. ಮುಂಜಾನೆ ಕಾರ್ಯಾಚರಣೆ ನಡೆಸುವ ವೇಲೆ ರಾಸಾಯನಿಕ ತೀವ್ರತೆ ಜಾಸ್ಥಿಯಿದ್ದಿದ್ದು ಈ ತಂಡ ಕಾರ್ಯತತ್ಪರತೆ ಮೂಲಕ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದೆ.

ಸ್ಥಳೀಯರ ಆಕ್ರೋಷ…
ಮುಂಜಾನೆ ನಿದ್ದೆಯಲ್ಲಿದ್ದ ವೇಳೆ ರಾಸಾಯನಿಕದ ವಾಸನೆ ಬಂದಿದ್ದು ಮಕ್ಕಳು-ಮರಿ ಸಹಿತ ನಾವು ಮನೆಯಿಂದ ದೂರ ಹೋದೆವು. ಈ ಘಟಕ ಆರಂಭಕ್ಕೂ ಮೊದಲೇ ನಮ್ಮ ವಿರೋಧವಿದ್ದರೂ ಕೂಡ ಜನರ ಅಭಿಪ್ರಾಯ ಮೀರಿ ಇಲ್ಲಿ ಫ್ಯಾಕ್ಟರಿ ಕಟ್ಟಿದ್ದಾರೆ. ಹಾಗಾದರೆ ಜನರು ಇಲ್ಲಿ ವಾಸ ಮಾಡೋದು ಬೇಡವೇ? ಸಾವಿರಾರು ಮನೆಗಳಿದ್ದು ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಯಾರು ಹೊಣೆ? ತಡರಾತ್ರಿ ಎಲ್ಲಾದರೂ ರಾಸಾಯನಿಕ ಸೋರಿಕೆಯಾಗಿದ್ದರೆ ಕಾರ್ಮಿಕರು ಸಹಿತ ಅಕ್ಕಪಕ್ಕದ ಮನೆಯವರಿಗೂ ದೊಡ್ಡ ಅಪಾಯವಾಗುತ್ತಿತ್ತು. ಜನರ ಆರೋಗ್ಯ ಮತ್ತು ಪ್ರಾಣಕ್ಕೆ ಬೆಲೆಯಿಲ್ಲವೇ ಎಂದು ಸ್ಥಳೀಯ ಮಹಿಳೆಯರು ಹಾಗೂ ನಾಗರಿಕರು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡು ನೋವನ್ನು ಹೊರಹಾಕಿದರು.

ರಾಸಾಯನಿಕ ಪ್ರಭಾವ…
ಮಂಜುಗಡ್ಡೆ ಸ್ಥಾವರಗಳಲ್ಲಿ ಹೆಚ್ಚಾಗಿ ಈ ಅಮೋನಿಯಾ ರಾಸಾಯನಿಕ ಬಳಸುತ್ತಾರೆ. ಏಕಾ‌ಏಕಿ ಈ ರಾಸಾಯನಿಕ ಸೋರಿಕೆಯಿಂದಾಗಿ ಸುತ್ತಮುತ್ತಲಿನ ಗಿಡಗಂಟಿಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದು ಘಟಕದ ಸುತ್ತಮುತ್ತಲಿನ ಒಂದೆರಡು ಕಿ.ಮೀಟರ್ ವರೆಗೆ ಇದರ ಪರಿಣಾಮ ಉಂಟಾಗಿರುವುದು ಕಂಡು ಬಂದಿದೆ. ಇನ್ನು ಅಗ್ನಿಶಾಮಕದಾದ ಹರಸಾಹಸದ ಕಾರ್ಯಾಚರಣೆ ನಡುವೆಯೂ ಮಧ್ಯಾಹ್ನದವರೆಗೂ ಘಟಕದ ಆಸುಪಾಸು ಮತ್ತು ಘಟಕದೊಳಗೆ ರಾಸಾಯನಿಕ ಪ್ರಭಾವ ಹೆಚ್ಚಿತ್ತು. ವಿಪರೀತ ವಾಸನೆ, ಉಸಿರಾಟದ ತೊಂದರೆ. ಕಣ್ಣುರಿಯಂತಹ ಅನುಭವ ಸ್ಥಳಕ್ಕೆ ಭೇಟಿಕೊಟ್ಟ ಅಧಿಕಾರಿಗಳು, ಪತ್ರಕರ್ತರು, ನಾಗರಿಕರಿಗೆ ಆಗಿತ್ತು.

ಅಧಿಕಾರಿಗಳಿಂದ ಮುಂಜಾಗೃತೆ…
ಸುಮಾರು ಮುನ್ನೂರೈವತ್ತಕ್ಕು ಅಧಿಕ ಕಾರ್ಮಿಕರಿರುವ ಈ ಘಟಕದಲ್ಲಿ ಘಟನೆ ನಡೆದ ಬಳಿಕವೂ ಕಾರ್ಮಿಕರಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಎಸಿ ಮಧುಕೇಶ್ವರ್ ಅವರು ಕಾರ್ಮಿಕರನ್ನು ಘಟಕದಿಂದ ಕಳಿಸುವಂತೆ ಸೂಚಿಸಿದ ಹಿನ್ನಲೆ ಕಾರ್ಮಿಕರನ್ನು ಬೇರೆಡೆಗೆ ಕಳಿಸಲಾಗಿತ್ತು. ಇನ್ನು ಮುಂಜಾಗೃತಾ ಕ್ರಮವಾಗಿ ವೈದ್ಯರು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯನ್ನು ನಿಯೋಜಿಸಿದ್ದಲ್ಲದೇ ಒಂದು ಆಂಬುಲೆನ್ಸ್ ವಾಹನವನ್ನು ಸ್ಥಳದಲ್ಲಿರಿಸಲಾಗಿತ್ತು.

ಎಚ್ಚೆತ್ತುಕೊಳ್ಳಲಿ ಅಧಿಕಾರಿ, ಜನಪ್ರತಿನಿಧಿಗಳು…
ಜನರಿಗೆ ಸಮಸ್ಯೆಯಾಗುತ್ತದೆನ್ನುವ ಬಗ್ಗೆ ಸ್ಥಳೀಯರ ಹೋರಾಟದ ನಡುವೆಯೂ ಆರಂಭಗೊಂಡ ಈ ಫ್ಯಾಕ್ಟರಿ ಸದ್ಯ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರೋದು ಸುಳ್ಳಲ್ಲ. ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. ಇಲ್ಲಿಗೆ ಸಂಬಂಧಿಸಿದ ಸ್ಥಳಿಯಾಡಳಿತದ ಒಬ್ಬಿಬ್ಬರು ಜನಪ್ರತಿನಿಧಿಗಳು ಈ ಫ್ಯಾಕ್ಟರಿ ಪರವಾಗಿ ನಿಂತ ಬಗ್ಗೆ ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಘಟಕದ ಅವ್ಯವಸ್ಥೆ ಬಗ್ಗೆ ಈ ಹಿಂದೆ ದಲಿತ ಸಂಘಟನೆ ಹೋರಾಟ ಮಾಡಿತ್ತು.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ-

ಮೀನುಸಂಸ್ಕರಣ ಕಟ್ಟಡಕ್ಕೆ ಪರವಾನಿಗೆ ನೀಡಿದ ಕಟ್‌ಬೆಲ್ತೂರ್ ಗ್ರಾ.ಪಂ.|ಜಯಕರ್ನಾಟಕ ಸಂಘಟನೆಯಿಂದ ಮಾ.15ಕ್ಕೆ ಪ್ರತಿಭಟನೆ

ಕುಂದಾಪುರ: ಮೀನು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಗ್ರಾಮಸ್ಥರ ಆಕ್ರೋಷ; ಕಟ್‌ಬೆಲ್ತೂರ್ ಪಂಚಾಯತ್ ಎದುರು ಪ್ರತಿಭಟನೆ

Comments are closed.