ರಾಷ್ಟ್ರೀಯ

ಇಂದು ರಾತ್ರಿ ಪ್ರಸಾರವಾಗುವ ‘ಮ್ಯಾನ್​ ವರ್ಸಸ್​ ವೈಲ್ಡ್’ ನೋಡಿ; ನೀವೆಲ್ಲರೂ ನಮಗೆ ಜತೆಯಾಗಿ ಎಂದು ಟ್ವೀಟ್​ ಮಾಡಿದ ‘ಮೋದಿ ಆ್ಯಂಡ್​ ಬೇರ್

Pinterest LinkedIn Tumblr

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಡಿಸ್ಕವರಿ ಚಾನೆಲ್​ನ ಹೆಸರುವಾಸಿ ಕಾರ್ಯಕ್ರಮ ‘ಮ್ಯಾನ್​ ವರ್ಸಸ್​ ವೈಲ್ಡ್​’ ದಲ್ಲಿ ಕಾರ್ಯಕ್ರಮ ನಿರೂಪಕ ಎಡ್ವರ್ಡ್​ ಮೈಕಲ್​ ಗ್ರಿಲ್ಸ್ (ಬೇರ್​ ಗ್ರಿಲ್ಸ್) ​ ಜತೆ ಭಾಗಿಯಾಗಿರುವ ವಿಶೇಷ ಸಂಚಿಕೆ ಇಂದು ರಾತ್ರಿ 9 ಗಂಟೆಗೆ ಡಿಸ್ಕವರಿಯ ಒಟ್ಟು 12 ಚಾನೆಲ್​ಗಳಲ್ಲಿ ಪ್ರಸಾರವಾಗಲಿದೆ.

ಈ ಬಗ್ಗೆ ಎಡ್ವರ್ಡ್​ ಬೇರ್ ಗ್ರಿಲ್ಸ್​ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಟ್ವೀಟ್​ ಮಾಡಿ ತಪ್ಪದೆ ಕಾರ್ಯಕ್ರಮ ವೀಕ್ಷಿಸಿ ಎಂದು ಮನವಿ ಮಾಡಿದ್ದಾರೆ.

ಮ್ಯಾನ್​ ವರ್ಸಸ್​ ವೈಲ್ಡ್​ನಲ್ಲಿ ಪ್ರಧಾನಿ ಮೋದಿಯವರ ಜತೆಗಿನ ನನ್ನ ಪಯಣದ ವಿಶೇಷ ಕಾರ್ಯಕ್ರಮ ಇಂದು ಡಿಸ್ಕವರಿ ಚಾನೆಲ್​ನಲ್ಲಿ ಪ್ರಸಾರವಾಗಲಿದೆ. ನಾವೆಲ್ಲರೂ ಒಟ್ಟಾಗಿ ಈ ಭೂಮಿ, ಪರಿಸರದ ರಕ್ಷಣೆ ಮಾಡೋಣ. ಶಾಂತಿಯನ್ನು ಸ್ಥಾಪಿಸೋಣ. ಹಾಗೇ ನಮ್ಮ ಕನಸುಗಳನ್ನು ಬೆನ್ನತ್ತಬೇಕು. ಯಾವತ್ತೂ ಪ್ರಯತ್ನವನ್ನು ಬಿಡಬಾರದು ಎಂಬ ಚೈತನ್ಯವನ್ನು ಹೆಚ್ಚೆಚ್ಚು ಪ್ರೋತ್ಸಾಹಿಸೋಣ. ಇವತ್ತಿನ ಕಾರ್ಯಕ್ರಮವನ್ನು ಎಂಜಾಯ್​ ಮಾಡಿ ಎಂದು ಬೇರ್ ಗ್ರಿಲ್ಸ್​ ಟ್ವೀಟ್​ ಮಾಡಿದ್ದಾರೆ.

ಈ ಟ್ವೀಟ್​ನ್ನು ರೀಟ್ವೀಟ್​ ಮಾಡಿರುವ ನರೇಂದ್ರ ಮೋದಿಯವರು, ಭಾರತದ ಹಚ್ಚ ಹಸಿರಿನ ಕಾಡುಗಳಿಗಿಂತಲೂ ಉತ್ತಮವಾದುದು ಏನಿದೆ? ಪ್ರಕೃತಿಯ ಮಧ್ಯದಲ್ಲೇ ಸಂಚರಿಸುತ್ತಾ ಪರಿಸರ ಸಂರಕ್ಷಣೆ ಮತ್ತು ಬದಲಾಗುತ್ತಿರುವ ಹವಾಮಾನಕ್ಕೆ ಸಂಬಂಧಪಟ್ಟ ವಿಷಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಈ ಕಾರ್ಯಕ್ರಮದಲ್ಲಿ ಮಾಡಲಾಗಿದೆ. ಇಂದು ರಾತ್ರಿ 9 ಗಂಟೆಗೆ ನಮಗೆ ನೀವೂ ಜತೆಯಾಗಿ ಎಂದು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಉತ್ತರಾಖಂಡದ ಜಿಮ್ ಕಾರ್ಬೆಟ್ ಮತ್ತು ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನಗಳಲ್ಲಿ ಈ ಕಾರ್ಯಕ್ರಮದ ಚಿತ್ರೀಕರಣ ನಡೆದಿದೆ. ‘ಮ್ಯಾನ್ ವರ್ಸಸ್ ವೈಲ್ಡ್’ ಪ್ರಚಾರ ವಿಡಿಯೋ ತುಣುಕನ್ನು (ಟೀಸರ್) ಕೇಂದ್ರ ಪ್ರವಾಸೋದ್ಯಮ ಇಲಾಖೆ ‘ಇನ್​ಕ್ರೆಡಿಬಲ್ ಇಂಡಿಯಾ’ ವೆಬ್​ಸೈಟ್​ನಲ್ಲಿ ಹಾಕಿದ್ದು, ಪ್ರಧಾನಿ ಮೋದಿ ಪ್ರವಾಸೋದ್ಯಮದ ಬಹುದೊಡ್ಡ ರಾಯಭಾರಿ ಎಂದು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಹೇಳಿದ್ದಾರೆ.

Comments are closed.