ಕರಾವಳಿ

ನೆರೆ – ಪ್ರವಾಹ : ನಿರಂತರ ನಿಗಾವಹಿಸುವಂತೆ ಜಿಲಾಧಿಕಾರಿ ಸೂಚನೆ

Pinterest LinkedIn Tumblr

ಮಂಗಳೂರು : ಜಿಲ್ಲೆಯಲ್ಲಿ ಉಂಟಾಗಿರುವ ನೆರೆ – ಪ್ರವಾಹ ಸ್ಥಿತಿ ಮೇಲೆ ಎಲ್ಲಾ ಅಧಿಕಾರಿಗಳು ನಿರಂತರ ನಿಗಾ ವಹಿಸಿ, ಸಾರ್ವಜನಿಕ ಜೀವ ಹಾನಿ ತಪ್ಪಿಸಲು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ.

ಅವರು ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ಮುಖ್ಯವಾಗಿ ನದೀ ಪಾತ್ರದಲ್ಲಿ ವಾಸಿಸುತ್ತಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಕೆಳ ಪ್ರದೇಶಗಳಿಗೆ ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅವರು ಅಲ್ಲಿಯೇ ಇದ್ದು, ಪರಿಸ್ಥಿತಿಯನ್ನು ಗಮನಿಸಬೇಕು ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿರುವ ಗಂಜೀ ಕೇಂದ್ರಗಳಲ್ಲಿ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಬೇಕು. ಉತ್ತಮ ಆಹಾರ, ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕ ಕೋಣೆ, ಕುಡಿಯುವ ನೀರು ಸೇರಿದಂತೆ ಯಾವುದೇ ಕೊರತೆಯಾಗದಂತೆ ಎಲ್ಲಾ ಸೌಲಭ್ಯ ಒದಗಿಸಬೇಕು. ಪ್ರತೀ ಮೂರು ಗಂಟೆಗೊಮ್ಮೆ ಈ ಬಗ್ಗೆ ತನಗೆ ವರದಿ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಹಾನಿಗೊಂಡಿರುವ ರಸ್ತೆಗಳು, ವಿದ್ಯುತ್ ಕಂಬಗಳ ಬಗ್ಗೆ ಶೀಘ್ರವಾಗಿ ಪರಿಶೀಲನೆ ನಡೆಸಿ ಸಂಪರ್ಕ ಕಲ್ಪಿಸಬೇಕು. ಹಾನಿಯ ಅಂದಾಜು ಮಾಡಿ ತನಗೆ ವರದಿ ನೀಡಲು ಅವರು ತಿಳಿಸಿದ್ದಾರೆ.

Comments are closed.