ರಾಷ್ಟ್ರೀಯ

ಇ.ಡಿ ಬಂಧನದಿಂದ ರಕ್ಷಣೆ ಪಡೆದ ಚಿದಂಬರಂ; ಮೊದಲ ಹಂತದ ಬಿಗ್​ ರಿಲೀಫ್​

Pinterest LinkedIn Tumblr


ನವದೆಹಲಿ (ಆ.23): ಐಎನ್​ಎಕ್ಸ್​ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿ ಚಿದಂಬರಂ ಅವರಿಗೆ ಶುಕ್ರವಾರ ಸುಪ್ರೀಂಕೋರ್ಟ್​ನಲ್ಲಿ ಕಾನೂನಾತ್ಮಕವಾಗಿ ಮೊದಲ ಹಂತದ ಬಿಗ್​ ರಿಲೀಫ್​ ಸಿಕ್ಕಿದೆ. ಸೋಮವಾರದವರೆಗೆ ಇ.ಡಿ. ಬಂಧನದಿಂದ ಚಿದಂಬರಂ ನ್ಯಾಯಾಲಯದ ರಕ್ಷಣೆ ಪಡೆದುಕೊಂಡಿದ್ದಾರೆ.

ಪಿ ಚಿದಂಬರಂ ಈಗಾಗಲೇ ಸಿಬಿಐ ವಶದಲ್ಲಿರುವುದರಿಂದ, ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಬಂಧನದ ಅರ್ಜಿಯನ್ನು ತಿರಸ್ಕರಿಸಿರುವುದಾಗಿ ನ್ಯಾ.ಆರ್​ ಭಾನುಮತಿ ಮತ್ತು ಎಎಸ್​ ಬೊಪ್ಪಣ್ಣ ಅವರಿದ್ದ ಪೀಠ ಆದೇಶ ನೀಡಿದೆ.

ಇದೇ ಪ್ರಕರಣ ಸಂಬಂಧ ಚಿದಂಬರಂ ನಿರೀಕ್ಷಣಾ ಜಾಮೀನು ಪಡೆದಿದ್ದು, ತನಿಖೆಗೂ ಸಹಕರಿಸುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂಬುದಕ್ಕೆ ಇದು ನಿಮ್ಮ ಪ್ರಕರಣವಲ್ಲ. ನೀವು ಯಾವಾಗ ಕರೆದರೂ ಅವರು ಬಂದಿದ್ದಾರೆ. ಕೇವಲ ಇ.ಡಿ ಮುಂದೆ ಮಾತ್ರವಲ್ಲ ಸಿಬಿಐ ಮುಂದೆ ಕೂಡ ಅವರು ಹಾಜರಾಗಿದ್ದಾರೆ ಎಂದು ನ್ಯಾ ಭಾನುಮತಿ ಇ.ಡಿ ಪರ ವಕೀಲ, ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾಗೆ ತಿಳಿಸಿದರು.

ಈ ಸಂದರ್ಭದಲ್ಲಿ ಚಿದಂಬರಂ ಪರವಾಗಿ ಮಧ್ಯಂತರ ರಕ್ಷಣೆಗೆ ಆದೇಶವೂ ಬಂದಿರುವುದು ಅತ್ಯಂತ ಮಹತ್ವವಾಗಿದೆ. ಜೊತೆಗೆ ನಾಲ್ಕು ದಿನ ಸಿಬಿಐ ವಶಕ್ಕೆ ನೀಡಿರುವುದನ್ನು ಪ್ರಶ್ನಿಸಿ ಅವರು ಸಲ್ಲಿಸಿರುವ ಹೊಸ ಅರ್ಜಿಯನ್ನು ಆಲಿಸಲು ಕೂಡ ಸುಪ್ರೀಂ ಕೋರ್ಟ್​ ಒಪ್ಪಿಗೆ ನೀಡಿದೆ.

ಸಿಬಿಐ ವಶದಲ್ಲಿ ಅವರ ವಿಚಾರಣೆ ನಡೆಸುವ ಆದೇಶವನ್ನು ಪ್ರಶ್ನಿಸಿ ಹೊಸ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಕುರಿತು ಹಿರಿಯ ವಕೀಲ ಕಪಿಲ್​ ಸಿಬಲ್​ ಮತ್ತು ಅಭಿಷೇಕ್​ ಎಂ ಸಿಂಘ್ವಿ ಮಾಹಿತಿ ನೀಡಿದ್ದಾರೆ.

ನ್ಯಾಯಾಲಯ ಸಿಬಿಐ ವಿರುದ್ಧದ ಎರಡು ಅರ್ಜಿಯನ್ನು ಆಲಿಸುವುದಾಗಿ ತಿಳಿಸಿದ್ದು, ಇ.ಡಿ ವಿರುದ್ಧದ ಮೂರನೇ ಅರ್ಜಿಯನ್ನು ಸೋಮವಾರ ಆಲಿಸುವುದಾಗಿ ತಿಳಿಸಿದೆ. ಅಲ್ಲಿಯವರೆಗೂ ಚಿದಂಬರಂ ಅವರನ್ನು ಬಂಧಿಸುವಂತಿಲ್ಲ ಎಂದು ಹೇಳಿದೆ.

ಈಗಾಗಲೇ ಸಿಬಿಐ ಬಂಧನದಲ್ಲಿರುವ ಚಿದಂಬರಂವನ್ನು ಮತ್ತೆ ಇ.ಡಿ ಬಂಧಿಸದಂತೆ ನೀಡಿರುವ ಆದೇಶವನ್ನು ತುಷಾರ್​ ಮೆಹ್ತಾ ತೀವ್ರವಾಗಿ ವಿರೋಧಿಸಿದ್ದಾರೆ.

ಸೋಮವಾರದವರೆಗೆ ಚಿದಂಬರಂ ರಕ್ಷಣೆಗೆ ಬೇಕಾದ ಸಂಗತಿಗಳು ತಿಳಿಸಬೇಕು ಎಂದು ಪೀಠ ತಿಳಿಸಿದೆ.

ಸೋಮವಾರದ ವೇಳೆ ಚಿದಂಬರಂ ಅವರ ನಾಲ್ಕು ದಿನದ ಸಿಬಿಐ ವಶದ ಸಮಯ ಕೂಡ ಮುಗಿಯಲಿದ್ದು, ಅಂದೇ ಕೆಳಹಂತದ ನ್ಯಾಯಾಲದಯ ಪ್ರಕ್ರಿಯೆ ಸೇರಿದಂತೆ ಅನೇಕ ವಿಷಯಗಳು ಸುಪ್ರೀಂಕೋರ್ಟ್​ನಲ್ಲಿ​ ವಿಚಾರಣೆಗೆ ಬರಲಿದೆ.

ಶುಕ್ರವಾರದ ಆದೇಶದಿಂದಾಗಿ ಇಡಿ ಕೈ ಕಟ್ಟಿ ಹಾಕಿದ್ದು, ಕಾಂಗ್ರೆಸ್​ನ ಹಿರಿಯ ಶಾಸಕರು ಪ್ರಕರಣದಲ್ಲಿ ಸಹಕರಿಸುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್​ ಹೇಳಿಕೆಯಿಂದಾಗಿ ವಿಚಾರಣೆಗೆ ಚಿದಂಬರಂ ಸಹಕರಿಸುತ್ತಿಲ್ಲ ಎಂಬ ಆರೋಪ ಹೊರಿಸಿದ್ದ ಸಿಬಿಐ ಇಕ್ಕಟಿಗೆ ಸಿಲುಕಿದೆ.

ಈ ವಿಚಾರ ಕುರಿತು ಸುಪ್ರೀಂಕೋರ್ಟ್​ ಆದೇಶ ನೀಡುವವರೆಗೂ ಕೆಳಹಂತದ ನ್ಕಾಯಾಯಲಯ ಕಾಯಬೇಕಿದೆ. ಈ ಮೂಲಕ ಚಿದಂಬರಂ ಕಾನೂನು ತಂಡ ನ್ಯಾಯಾಲಯದಲ್ಲಿ ಮೊದಲ ಜಯ ಪಡೆದಿದೆ.

Comments are closed.