ಮಂಗಳೂರು : ಕದ್ರಿ ಪೋಲೀಸರಿಂದ ಬಂಧನಕ್ಕೊಳಗಾಗಿರುವ ಕುಖ್ಯಾತ ಆರೋಪಿ,ಕೇರಳ ಮೂಲದ ಸ್ಯಾಮ್ ಪೀಟರ್,ಮಂಗಳೂರಿನ ಗೌಡ ಸಾರಸ್ವತ ಸಮಾಜ(ಜಿಎಸ್‍ಬಿ)ದ ಪ್ರತಿಷ್ಠಿತ ವ್ಯಕ್ತಿಗಳ ಹತ್ಯೆಗೆ ಅಥವಾ ಅಪಹರಣಕ್ಕೆ ಸಂಚು ರೂಪಿಸಿದ್ದಾನೆ ಎಂಬ ಮಾಹಿತಿಗಳ ಹಿನ್ನೆಲೆಯಲ್ಲಿ ಪೋಲಿಸರು ತನಿಖೆ ಚುರುಕುಗೊಳಿಸಿದ್ದಾರೆ.
ಜಿಎಸ್‍ಬಿ ಸಮಾಜದ ಇಬ್ಬರು ಸ್ವಾಮೀಜಿಗಳ ನಡುವೆ ತಲೆದೋರಿರುವ ಆಸ್ತಿಯ ವಿವಾದವನ್ನು ಬಗೆಹರಿಸಿಕೊಡಲು ಆರೋಪಿ ಸ್ಯಾಮ್ ಪೀಟರ್ ಕ್ರಿಮಿನಲ್ ಸಂಚು ರೂಪಿಸಿದ್ದ ಎಂಬುದು ಪೋಲೀಸ್ ತನಿಖೆಯ ವೇಳೆ ಬೆಳಕಿಗೆ ಬಂದಿದೆ.ಜಿಎಸ್‍ಬಿ ಸಮಾಜದ ಮುಖಂಡರು 2 ದಿನಗಳ ಹಿಂದೆ ಕಮೀಷನರ್ ಹರ್ಷರವರನ್ನು ಭೇಟಿಯಾಗಿ ಈ ಕುರಿತು ತನಿಖೆ ನಡೆಸುವಂತೆ ಕೋರಿದ್ದರು.
ಉಡುಪಿಯ ಕಲ್ಪನಾ ರೆಸಿಡೆನ್ಸಿ ಮಾಲಕ ರಾಮಚಂದ್ರ ನಾಯಕ್ ಎಂಬವರ ಮೂಲಕ ಜಿಎಸ್‍ಬಿ ಪರಿತ್ಯಕ್ತ ಸ್ವಾಮೀಜಿಯೊಬ್ಬರನ್ನು ಸಂಪರ್ಕಿಸಿದ್ದ ಸ್ಯಾಮ್ ಪೀಟರ್, ಮಠದ ಆಸ್ತಿ ವಿವಾದವನ್ನು ಬಗೆಹರಿಸಿಕೊಡಲು ಹದಿನೈದು ಲಕ್ಷ ರೂ.ಗಳ ಮುಂಗಡ ಹಣ ಪಡೆದಿದ್ದ ಎಂಬುದು ಪೋಲೀಸ್ ತನಿಖೆಯ ವೇಳೆ ಬೆಳಕಿಗೆ ಬಂದಿದೆ.ಪೋಲೀಸರು ಈಗಾಗಲೇ ರಾಮಚಂದ್ರ ನಾಯಕ್‍ರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಜಿಎಸ್‍ಬಿ ಸಮಾಜದ ಗೌರವಾನ್ವಿತ ಸ್ವಾಮೀಜಿಗಳಾದ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರನ್ನು ಬ್ಲಾಕ್‍ಮೇಲ್ ಮೂಲಕ ಬೆದರಿಸಲು ಅಥವಾ ಸ್ವಾಮೀಜಿಯ ಅಪ್ತರ ಪೈಕಿ ಓರ್ವರನ್ನು ಅಪಹರಣ-ಹತ್ಯೆ ನಡೆಸಲು ಸ್ಯಾಮ್ ಪೀಟರ್ ಯೋಜನೆ ರೂಪಿಸಿದ್ದ ಬಗ್ಗೆ ದೊರೆತ ಮಾಹಿತಿಗಳ ಹಿನ್ನಲೆಯಲ್ಲಿ ಪೋಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಮಾಹಿತಿಯನ್ನಾಧರಿಸಿ ಜಿಎಸ್‍ಬಿ ಸಮಾಜದ ಪರಿತ್ಯಕ್ತ ಸ್ವಾಮೀಜಿ ಸಹಿತ ಹಲವರನ್ನು ಪೋಲೀಸರು ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ.
ಈ ಪ್ರಕರಣದ ತನಿಖೆಗಾಗಿ ಖುದ್ದು ಹಾಜಾರಾಗುವಂತೆ ಜಿಎಸ್‍ಬಿ ಸಮಾಜದ ಪರಿತ್ಯಕ್ತ ಸ್ವಾಮೀಜಿಗೆ ಕದ್ರಿ ಪೋಲಿಸರು ನಿನ್ನೆ ನೋಟೀಸ್ ಜಾರಿಗೊಳಿಸಿದ್ದಾರೆ.
ಕದ್ರಿ ಪೋಲಿಸ್ ಠಾಣೆ ಇನ್ಸ್‍ಪೆಕ್ಟರ್ ಶಾಂತರಾಮ್ ಕುಂದರ್ ನೇತೃತ್ವದ ಪೋಲೀಸ್ ತಂಡ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯೊಂದ ರಲ್ಲಿ ಸ್ಯಾಮ್ ಪೀಟರ್ ಸಹಿತ ಎಂಟು ಮಂದಿಯನ್ನು ಪಂಪ್‍ವೆಲ್ ಬಳಿಯ ಹೊಟೇಲ್ ಒಂದರಿಂದ ಬಂಧಿಸಲಾಗಿತ್ತು.
ಈ ಕಾರ್ಯಾಚರಣೆ ಯಲ್ಲಿ ಕದ್ರಿ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಮಾರುತಿ,ಎಎಸ್‍ಐ ಧನರಾಜ್, ಹೆಡ್ ಕಾನ್ಸ್‍ಟೇಬಲ್ ಪ್ರಶಾಂತ್ ಶೆಟ್ಟಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಪೋಲೀಸ್ ಕಮೀಷನರ್ ಪಿ.ಎಸ್.ಹರ್ಷ ನಿರ್ದೇಶನದಲ್ಲಿ ಡಿಸಿಪಿಗಳಾದ ಲಕ್ಷ್ಮೀ ಗಣೇಶ್,ಅರುಣಾಂಕ್ಷುಗಿರಿ ಮತ್ತು ಇನ್ಸ್‍ಪೆಕ್ಟರ್ ಶಾಂತರಾಮ್ ವಿಚಾರಣೆ ಮುಂದುವರಿಸಿದ್ದಾರೆ.
Comments are closed.