ನವದೆಹಲಿ: ಕೇಂದ್ರ ಸರ್ಕಾರದ ಮಾಜಿ ಹಣಕಾಸು ಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂಗೆ ಸುಪ್ರೀಂ ಕೋರ್ಟ್ ನಲ್ಲಿ ತೀವ್ರ ಹಿನ್ನಡೆಯಾಗಿದ್ದು, ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಳ್ಳಿ ಹಾಕಿದೆ.
ಐಎನ್ ಎಕ್ಸ್ ಮೀಡಿಯಾ ಅಕ್ರಮ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ದೆಹಲಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಚಿದಂಬರಂ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಇಂದು ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಅರ್ಜಿಯನ್ನು ತಳ್ಳಿಹಾಕಿರುವುದಲ್ಲದೆ, ಚಿದಂಬರಂ ಅವರನ್ನು ಈಗಾಗಲೇ ಸಿಬಿಐ ಬಂಧಿಸಿರುವುದರಿಂದ ಈ ಕೇಸು ಅಪ್ರಸ್ತುತವಾಗುತ್ತದೆ ಎಂದು ಹೇಳಿದೆ.
ಸಾಧಾರಣ ಜಾಮೀನಿಗೆ ವಿಚಾರಣಾಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಹೇಳಿದ ಸುಪ್ರೀಂ ಕೋರ್ಟ್, ಅವರನ್ನು ಈಗಾಗಲೇ ಸಿಬಿಐ ಬಂಧಿಸಿರುವುದರಿಂದ ದೆಹಲಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ರದ್ದು ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಿರುವ ಮನವಿ ಅಪ್ರಸ್ತುತವಾಗುತ್ತದೆ ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ಭಾನುಮತಿ ನೇತೃತ್ವದ ನ್ಯಾಯಪೀಠ, ಚಿದಂಬರಂ ಅವರನ್ನು ಈಗಾಗಲೇ ಬಂಧಿಸಿರುವುದರಿಂದ ಸಿಬಿಐ ವಿಷಯಗಳು ಇಲ್ಲಿ ಅಪ್ರಸ್ತುತವಾಗುತ್ತವೆ ಎಂದರು.
ಆಗ ವಾದ ಮಂಡಿಸಿದ ಚಿದಂಬರಂ ಪರ ವಕೀಲ ಕಪಿಲ್ ಸಿಬಲ್, ಚಿದಂಬರಂ ಅವರ ಬಂಧನ ಮೊದಲೇ ಆಗಿ ನಂತರ ನಾನು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರೆ ಆಗ ಅದು ಅಪ್ರಸ್ತುತವಾಗುತ್ತಿತ್ತು. ಜಾಮೀನು ಕೇಳಲು ನನ್ನ ಕಕ್ಷಿದಾರರಿಗೆ ಕಾನೂನಿನಡಿಯಲ್ಲಿ ಹಕ್ಕಿದೆ ಎಂದು ಹೇಳಿದರು.
ಆಗ ಉತ್ತರಿಸಿದ ನ್ಯಾಯಾಧೀಶೆ, ನಿಮ್ಮ ಕಕ್ಷಿದಾರರ ನಿರೀಕ್ಷಣಾ ಜಾಮೀನು ನಿರಾಕರಣೆ ಅರ್ಜಿಯನ್ನು ಸಾಮಾನ್ಯ ಜಾಮೀನು ಅರ್ಜಿಯಾಗಿ ಬದಲಾಯಿಸಲು ಸಾಧ್ಯವಾಗುವುದಿಲ್ಲ.
ಇದಕ್ಕೆ ಕಪಿಲ್ ಸಿಬಲ್, ನಾವು ಮೇಲ್ಮನವಿ ಅರ್ಜಿ ಸಲ್ಲಿಸಿದ ನಂತರ ಚಿದಂಬರಂ ಅವರನ್ನು ಸಿಬಿಐ ಬಂಧಿಸಿದೆ. ನಾವು ವಿಚಾರಣಾಧೀನ ನ್ಯಾಯಾಲಯದ ಬಂಧನ ಆದೇಶವನ್ನು ಕೂಡ ಪ್ರಶ್ನಿಸಿದ್ದೇವೆ ಎಂದರು. ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆ ಹಂತದಲ್ಲಿರುವಾಗ ಸಿಬಿಐ ಬಂಧಿಸಬಾರದಾಗಿತ್ತು ಎಂದು ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಸಹ ವಾದ ಮುಂದಿಟ್ಟರು.
ಇದನ್ನು ಆಲಿಸಿದ ನ್ಯಾಯಾಧೀಶರು ಸಾಮಾನ್ಯ ಜಾಮೀನು ಅರ್ಜಿ ಕೋರಿ ವಿಚಾರಣಾಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಎಂದು ಆದೇಶ ನೀಡಿದರು.
ಐಎನ್ ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೆರಡು ಕೇಸುಗಳ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದೆ.
Comments are closed.