ಹೊಸದಿಲ್ಲಿ: “ಆಪರೇಷನ್’ನಿಂದಾಗಿ ಅನರ್ಹತೆಯ ಸುಳಿಗೆ ಸಿಲುಕಿರುವ 17 ಅನರ್ಹ ಶಾಸಕರಿಗೆ ಕೇಂದ್ರ ಚುನಾವಣ ಆಯೋಗ ನಿರಾಳತೆ ನೀಡಿದೆ. ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಅವರ ಅನರ್ಹತೆ ಆದೇಶ ಪ್ರಶ್ನಿಸಿ, 17 ಶಾಸಕರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ಕೈಗೆತ್ತಿಕೊಂಡಿತು. ಈ ಸಂದರ್ಭದಲ್ಲಿ ಅನರ್ಹ ಶಾಸಕರು ಮತ್ತು ಸ್ಪೀಕರ್ ಪರ ವಕೀಲರ ನಡುವೆ ವಾದ-ಪ್ರತಿವಾದ ನಡೆಯುವ ವೇಳೆ ಮಧ್ಯಪ್ರವೇಶಿಸಿದ ಆಯೋಗ ಪರ ವಕೀಲರು, ಅನರ್ಹ ಶಾಸಕರ ಸ್ಪರ್ಧೆಗೆ ಅಡ್ಡಿ ಇಲ್ಲ ಎಂಬ ಅಭಿಪ್ರಾಯ ಮಂಡಿಸಿದರು. ಇ.ಸಿ. ಪರ ವಕೀಲರ ಈ ವಾದ ಅನರ್ಹರಿಗೆ ಮುಳುಗುವವನಿಗೆ ಹುಲ್ಲಿನ ಆಸರೆ ಸಿಕ್ಕಂತಾದರೆ, ಸ್ಪೀಕರ್ ಪರ ವಕೀಲರು ಈ ನಡೆ ಭಾರೀ ಅಚ್ಚರಿ ತಂದಿದೆ ಎಂದು ಹೇಳಿದರು.
ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರಿದ್ದ ತ್ರಿಸದಸ್ಯ ಪೀಠವು ವಿಚಾರಣೆಗೆ ಕೈಗೆತ್ತಿಕೊಂಡರು. ಈ ಸಂದರ್ಭ ತಮ್ಮ ವಾದ ಮಂಡನೆಗೂ ಅವಕಾಶ ನೀಡಬೇಕು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪರ ವಕೀಲರಾದ ಕಪಿಲ್ ಸಿಬಲ್ ಹೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಯಿತು.
ಸ್ಪರ್ಧೆಗಾದರೂ ಅವಕಾಶ ಕೊಡಿ
ಅನರ್ಹ ಶಾಸಕರ ಪರ ಹಿರಿಯ ವಕೀಲರಾದ ಮುಕುಲ್ ರೋಹrಗಿ, ಉಪ ಚುನಾವಣೆಗೆ ಮಧ್ಯಾಂತರ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಿದರು. ಒಂದು ವೇಳೆ ಸಾಧ್ಯವಿಲ್ಲ ಎಂದಾದರೆ, ಸ್ಪರ್ಧಿಸಲಾದರೂ ಅವಕಾಶ ಕಲ್ಪಿಸಬೇಕು. ಈ ಸಂಬಂಧ ಇಂದೇ (ಸೋಮವಾರವೇ) ಮಧ್ಯಾಂತರ ಆದೇಶ ನೀಡಬೇಕು ಎಂದು ಮನವಿ ಮಾಡಿದರು.
ಕಪಿಲ್ ಸಿಬಲ್ ಆಕ್ಷೇಪ
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಪಿಲ್ ಸಿಬಲ್ ಅವರು, ಈ ಹಂತದಲ್ಲಿ ಕೇಂದ್ರ ಚುನಾವಣ ಆಯೋಗ ಯಾವುದೇ ಅಭಿಪ್ರಾಯ ಮಂಡನೆ ಮಾಡು ವಂತಿಲ್ಲ ಎಂದರು. ಅಲ್ಲದೆ, ಅನರ್ಹರಿಗೆ ಚುನಾ ವಣೆಯಲ್ಲಿ ಸ್ಪರ್ಧಿಸುವ ಅವಕಾಶವಿದೆ ಎಂದು ಹೇಳಿದ್ದು ಏಕೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು. ಜತೆಗೆ ಸೋಮವಾರವೇ ಯಾವುದೇ ರೀತಿಯ ಮಧ್ಯಾಂತರ ಆದೇಶ ನೀಡಬೇಡಿ ಎಂದು ಅರಿಕೆ ಮಾಡಿದರು. ನಮ್ಮ ವಾದವನ್ನು ಕೇಳಿದ ಬಳಿಕ ಬೇಕಾದರೆ ಈ ಬಗ್ಗೆ ನಿರ್ಧರಿಸಬಹುದು ಎಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕೋರ್ಟ್, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
ಸೆಪ್ಟಂಬರ್ 30ರೊಳಗೆ ನಾಮಪತ್ರ
ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಚುನಾವಣ ಆಯೋಗ ಅನರ್ಹರ ಸ್ಪರ್ಧೆಗೆ ತಮ್ಮದೇನೂ ಆಕ್ಷೇಪವಿಲ್ಲ ಎಂದು ಹೇಳಿರುವುದರಿಂದಾಗಿ ಹೆಚ್ಚು ಕಡಿಮೆ ಈ ಅನರ್ಹ ಶಾಸಕರೇ ಕಣಕ್ಕಿಳಿ ಯುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಅನರ್ಹರು ತಮ್ಮ ಪ್ರಕರಣಕ್ಕೆ ಸೆ. 30ರೊಳಗೆ ಸುಪ್ರೀಂ ಕೋರ್ಟ್ ಯಾವುದೇ ಆದೇಶ ನೀಡದೆ ಮುಂದೂಡಿದರೆ, ಸೆ. 30ರೊಳಗೆ ನಾಮಪತ್ರ ಸಲ್ಲಿಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ ಎಂದು ಹೇಳ ಲಾಗುತ್ತಿದೆ. ಬುಧವಾರ ಸು. ಕೋರ್ಟ್‌ನಲ್ಲಿ ಆಗುವ ಬೆಳವಣಿಗೆ ಬಳಿಕ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಅನರ್ಹ ಶಾಸಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಅನರ್ಹ ಶಾಸಕರು ಸೂಚಿಸುವವರಿಗೆ ಟಿಕೆಟ್?
15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮೊದಲಿಗೆ ಪಕ್ಷದ ಟಿಕೆಟ್ ಆಕಾಂಕ್ಷಿಗಳು, ಪರಾಜಿತ ಅಭ್ಯರ್ಥಿಗಳ ಮನವೊಲಿಸಲು ಆದ್ಯತೆ ನೀಡಿರುವ ಬಿಜೆಪಿ, ಅನಂತರ ಅವಕಾಶ ಸಿಕ್ಕರೆ ಅನರ್ಹ ಶಾಸಕರು ಇಲ್ಲವೇ ಅವರು ಸೂಚಿಸುವವರಿಗೆ ಟಿಕೆಟ್ ನೀಡಿ ಚುನಾವಣೆ ಎದುರಿಸಲು ನಿರ್ಧರಿಸಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿ ಡಾ| ಸಿ.ಎನ್.ಅಶ್ವತ್ಥನಾರಾಯಣ ಸಹಿತ ಬೆಂಗಳೂರಿನ ಸಚಿವರು, ಶಾಸಕರೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದರು.
ಚುನಾವಣೆ ಮುಂದೂಡಲಾಗದು
ಈ ಸಂದರ್ಭದಲ್ಲಿ ವಾದ ಮಂಡಿಸಿದ ಕೇಂದ್ರ ಚುನಾವಣ ಆಯೋಗದ ಪರ ವಕೀಲ ರಾಕೇಶ್ ದ್ವಿವೇದಿ, ಉಪಚುನಾವಣೆ ಮುಂದೂಡಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಈಗಾಗಲೇ ಎಲ್ಲ ಪ್ರಕ್ರಿಯೆಗಳು ಶುರುವಾಗಿವೆ. ಈಗ ಮುಂದೂಡುವುದು ಸರಿಯಲ್ಲ. ಆದರೆ ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶವು ಅನರ್ಹ ಶಾಸಕರನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಇರುವ ಹಕ್ಕಿನಿಂದ ವಂಚಿತರನ್ನಾಗಿಸುವಂತಿಲ್ಲ. ಹೀಗಾಗಿ ಅವರು ಚುನಾವಣೆಗೆ ನಿಲ್ಲಬಹುದು ಎಂದು ಹೇಳಿದರು. ಜತೆಗೆ ಈ ಸಂದರ್ಭದಲ್ಲಿ ಅನರ್ಹತೆಯ ಆದೇಶದ ಕುರಿತಂತೆ ಏನನ್ನೂ ಮಾತನಾಡುವುದಿಲ್ಲ. ಇವರನ್ನು ಸ್ಪೀಕರ್ ಅನರ್ಹ ಮಾಡಿರುವುದರಿಂದ ಸ್ಥಾನಗಳು ಖಾಲಿ ಉಳಿದಿವೆ. ಹೀಗಾಗಿ ಉಪಚುನಾವಣೆ ಮಾಡಲೇಬೇಕು ಎಂದು ವಾದ ಮಂಡಿಸಿದರು.
ಅನರ್ಹ ಶಾಸಕರು ಸ್ಪರ್ಧೆ
ಮಾಡಲು ತಕರಾರಿಲ್ಲ ಎಂದು ಕೇಂದ್ರ ಚುನಾವಣ ಆಯೋಗ ಹೇಳಿರುವುದರಿಂದ ಬಿಜೆಪಿಯಿಂದಲೇ ಅವರು ನಾಮಪತ್ರ ಸಲ್ಲಿಸುತ್ತಾರೆ.
-ಪ್ರತಾಪ್‌ಗೌಡ ಪಾಟೀಲ್, ಅನರ್ಹ ಶಾಸಕ
Comments are closed.