ರಾಷ್ಟ್ರೀಯ

ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕು ಎಂಬ ಮನಸ್ಸಿದ್ದರೆ, ಮೊದಲು ಕಹಿ ಸತ್ಯವನ್ನು ಕೇಳುವ ಮನೋಭಾವ ಬೆಳೆಸಿಕೊಳ್ಳಿ: ಮೋದಿಗೆ ಸುಬ್ರಮಣಿಯನ್ ಸ್ವಾಮಿ ಸಲಹೆ

Pinterest LinkedIn Tumblr

ನವದೆಹಲಿ: ನಿಮಗೆ ನಿಜಕ್ಕೂ ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕು ಎಂಬ ಮನಸ್ಸಿದ್ದರೆ, ಮೊದಲು ಕಹಿ ಸತ್ಯವನ್ನು ಕೇಳುವ ಮನೋಭಾವ ಬೆಳೆಸಿಕೊಳ್ಳಿ ಮತ್ತು ನಿಮ್ಮ ಸರ್ಕಾರದ ಅರ್ಥಶಾಸ್ತ್ರಜ್ಞರನ್ನು ಹೆದರಿಸುವುದನ್ನು ನಿಲ್ಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ಅವರು ಮಂಗಳವಾರ ಸಲಹೆ ನೀಡಿದ್ದಾರೆ.

ಪ್ರಧಾನಿ ಮೋದಿ ಸರ್ಕಾರ ನಡೆಸುವ ವಿಧಾನವನ್ನು ಕಟುವಾಗಿ ಟೀಕಿಸಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ, ಈ ಸರ್ಕಾರದಲ್ಲಿ ಕೆಲವೇ ಕೆಲವರು ಮಾತ್ರ ಔಟ್​ ಆಫ್​ ದಿ ಲೈನ್ ಬಂದು ಅನಿಸಿದ್ದನ್ನು ಹೇಳಬಹುದಾಗಿದೆ ಎಂದಿದ್ದಾರೆ.

ಮೋದಿಯವರೇ ನೀವು ಈ ರೀತಿ ಮಾಡಬಾರದು ಅಂತಾ ತಮಗೆ ನೇರವಾಗಿ ಹೇಳುವಂತೆ ಇತರರಿಗೆ ಪ್ರಧಾನಿ ಪ್ರೋತ್ಸಾಹಿಸಬೇಕು. ಆದರೆ ಈ ಮನೋಭಾವವನ್ನು ಮೋದಿ ಬೆಳೆಸಿಕೊಂಡಿಲ್ಲ ಅಂತ ನನಗನಿಸುತ್ತೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಸದ್ಯದ ಆರ್ಥಿಕ ಬಿಕ್ಕಟ್ಟಿಗೆ ನೋಟು ಅಮಾನ್ಯೀಕರಣ, ವಿಶೇಷವಾಗಿ ಇದರಲ್ಲಿ ಆರ್ ಬಿಐ ಪಾತ್ರ ಮತ್ತು ಹಣಕಾಸುವ ಸಚಿವಾಲಯ ಕಾರಣ. ಅಲ್ಲದೆ ಜಿಎಸ್ ಟಿಯನ್ನು ಸರಿಯಾಗಿ ಜಾರಿಗೊಳಿಸಲು ವಿಫಲವಾಗಿದ್ದೆ ಆರ್ಥಿಕ ಬಿಕ್ಕಟ್ಟಿಗೆ ಕಾರಣ ಎಂದು ಸ್ವಾಮಿ ಹೇಳಿದ್ದಾರೆ.

ಜಿಡಿಪಿ ಕಳೆದ 6 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಪ್ರತಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ವಾದ ನಡೆಸುತ್ತಿವೆ. ಇಂಥಹ ಸಮಯದಲ್ಲೇ ಆಡಳಿತಾರೂಢ ಬಿಜೆಪಿ ಮುಖಂಡ ಸ್ವಾಮಿ ನೀಡಿರುವ ಈ ಹೇಳಿಕೆ ಕೇಂದ್ರ ಸರ್ಕಾರವನ್ನು ತೀವ್ರ ಮುಜುಗರಕ್ಕಿಡು ಮಾಡಿದೆ.

ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸ್ವಾಮಿ ಈ ಹಿಂದೆ ಕೂಡ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಮಾತನಾಡಿದ್ದರು. ಮೋದಿ ಹಾಗೂ ನಿರ್ಮಲಾ ಸೀತಾರಾಮನ್​​ಗೆ ಸರಿಯಾಗಿ ಸಲಹೆ ನೀಡುವವರು ಯಾರೂ ಇಲ್ಲವೋ ಅಥವಾ ಇತರರು ನೀಡುವ ಸಲಹೆಯನ್ನು ಮೋದಿ ಮತ್ತು ನಿರ್ಮಲಾ ಸ್ವೀಕರಿಸಲು ಸಿದ್ಧರಿಲ್ಲವೋ ಎಂಬುದೇ ನನಗೆ ತಿಳಿಯುತ್ತಿಲ್ಲ ಎಂದಿದ್ದರು. ಈಗ ಮತ್ತೊಮ್ಮೆ ಮೋದಿ ವಿರುದ್ಧ ಮಾತನಾಡಿದ್ದಾರೆ.

Comments are closed.