ಹುಬ್ಬಳ್ಳಿ(ಅ. 22): ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯ ಜತೆ ನಂಟು ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಹಳೇಹುಬ್ಬಳ್ಳಿಯ ಅರವಿಂದ ನಗರದ ಮಹಮ್ಮದ್ ಜಾಫರ್ ಸಾದಿಕ್ ಎಂಬಾತನನ್ನು ಬಂಧಿಸಲಾಗಿದೆ. ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಆಂತರಿಕ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ.
ಮಹಮ್ಮದ್ ಜಾಫರ್ ಸಾದಿಕ್ ಹುಬ್ಬಳ್ಳಿಯ ರೈಲ್ವೆ ಕಾರ್ಯಾಗಾರದಲ್ಲಿ ಮೆಕ್ಯಾನಿಕ್ ಕೆಲಸ ನಿರ್ವಹಿಸುತ್ತಿದ್ದ. ಉತ್ತರ ಪ್ರದೇಶದ ಹಿಂದೂ ಸಂಘಟನೆಯ ಮುಖಂಡ ಕಮಲೇಶ್ ತಿವಾರಿ ಹತ್ಯೆ ಪ್ರಕರಣದಲ್ಲಿ ಐಎಸ್‌ಡಿ ಪೊಲೀಸರಿಗೆ ಬೇಕಾಗಿದ್ದ. ಈ ಹಿಂದೆ ಸಿಮಿ ಸೇರಿ ದೇಶವಿರೋಧಿ ಸಂಘಟನೆ ಜತೆ ಗುರುತಿಸಿಕೊಂಡಿದ್ದ ಆರೋಪವೂ ಮಹಮ್ಮದ್ ಜಾಫರ್ ಸಾದಿಕ್ ಮೇಲಿದೆ.
ಆದರೆ ಹಮ್ಮದ್ ಜಾಫರ್ ಸಾಧಿಕ್ ಅಮಾಯಕ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಆತ ಅಪರಾಧ ಚಟುವಟಿಕೆಯಲ್ಲಿ ಭಾಗವಹಿಸುವಂತಹ ವ್ಯಕ್ತಿಯಲ್ಲ ಎಂದು ಪತ್ನಿ ಕಣ್ಣೀರು ಸುರಿಸಿದ್ದಾರೆ.
ಸಾಧಿಕ್ ಪತ್ನಿ ಬ್ರೇನ್ ಹ್ಯಾಮರೇಜ್‌ನಿಂದ ಬಳಲುತ್ತಿದ್ದಾರೆ. ಮೂವರು ಪುಟ್ಟ ಮಕ್ಕಳಿವೆ. ಬಂಧಿತನಿಗೆ ಮೂವರು ಸಹೋದರರು ಮತ್ತು ಇಬ್ಬರು ಸಹೋದರಿಯರಿದ್ದಾರೆ. ಎಲ್ಲರೂ ಹುಬ್ಬಳ್ಳಿಯಲ್ಲಿಯೇ ವಾಸಿಸುತ್ತಾರೆ.
ಮಹಮ್ಮದ್ ಜಾಫರ್ ಸಾಧಿಕ್‌ರನ್ನು ಪೊಲೀಸರು ವಿಚಾರಣೆ ನಡೆಸುವುದಿದೆ ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ. ಅವರು ಸುನ್ನಿ ಜಮಾತ್ ಸಂಘಟನೆ ಜೊತೆಗೆ ಸೇರಿ ಸಮಾಜ ಸೇವೆ ಮಾಡುತ್ತಿದ್ದರು. ಬಡ ಹಿಂದೂಗಳ ಮಕ್ಕಳ ವಿದ್ಯಾಭ್ಯಾಸ, ಮದುವೆಗೂ ಆರ್ಥಿಕ ಸಹಾಯ ಮಾಡುತ್ತಿದ್ದರು. ಅವರ ಮೇಲೆ ಸುಳ್ಳು ಆರೋಪ ಹೊರಿಸಿ ಕರೆದೊಯ್ಯಲಾಗಿದೆ ಎಂದು ಮಹಮ್ಮದ್ ಜಾಫರ್ ಸಾಧಿಕ್ ಪತ್ನಿ, ಸಹೋದರಿ ಮತ್ತು ಸಹೋದರರು ಆರೋಪಿಸಿದ್ದಾರೆ.
ಅಕ್ಟೋಬರ್ 18ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ಹಿಂದೂ ಸಂಘಟನೆಯ ಮುಖಂಡ ಕಮಲೇಶ್ ತಿವಾರಿಯನ್ನು ಅವರ ನಿವಾಸದಲ್ಲಿ ಇಬ್ಬರು ವ್ಯಕ್ತಿಗಳು ಇರಿದು ಕೊಂದಿದ್ದರು. ಈ ಪ್ರಕರಣದಲ್ಲಿ ಐದಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಪ್ರತೀಕಾರವಾಗಿ ಈ ಕೊಲೆ ನಡೆದಿರಬಹುದೆಂಬ ಶಂಕೆ ಇದೆ.
Comments are closed.