ಮಂಗಳೂರು : ದೀಪಾವಳಿ ಪ್ರಯುಕ್ತ ನಮ್ಮ ಕುಡ್ಲ ವಾಹಿನಿ ಪ್ರತಿವರ್ಷ ಹಮ್ಮಿಕೊಂಡು ಬಂದಿರುವ ಗೂಡುದೀಪ ಸ್ಪರ್ಧೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಶನಿವಾರ ಸಂಜೆ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಈಗ ಎಲ್ಲೆಲ್ಲೂ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ. ದೀಪಾವಳಿ ಬೆಳಕಿನ ಹಬ್ಬ. ಈ ದೀಪಾವಳಿಯ ಸಂಭ್ರಮದ ಪ್ರತೀಕವೇ ಈ ಗೂಡು ದೀಪಗಳು ಅಥವಾ ಆಕಾಶ ಬುಟ್ಟಿಗಳು. ಇದನ್ನು ವ್ಯೊಮ ದ್ವೀಪ ಎಂದು ಕರೆಯಲಾಗುತ್ತದೆ. ಕಗ್ಗತ್ತಲ ರಾತ್ರಿಯಲ್ಲಿ ಬಣ್ಣ-ಬಣ್ಣದ ಬೆಳಕಿನ ಚಿತ್ತಾರ ಮೂಡಿಸುವ ಗೂಡು ದೀಪಗಳನ್ನು ನೊಡುವುದೇ ಕಣ್ಣಿಗೆ ಹಬ್ಬ. ಈ ಹಿಂದೆ ಪ್ರತಿ ಮನೆಗಳಲ್ಲಿ ಹಬ್ಬದ ಸಂದರ್ಭದಲ್ಲಿ ಈ ಗೂಡು ದೀಪಗಳನ್ನು ರಚಿಸಲಾಗುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ.
ಜಾಗತೀಕರಣದ ಭರಾಟೆಯಲ್ಲಿ ರೆಡಿಮೇಡ್ ಗೂಡು ದೀಪಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅಂಧಕಾರದಲ್ಲಿ ಬೆಳಕಿನ ಚಿತ್ತಾರ ಮೂಡಿಸುವ ಈ ಗೂಡು ದೀಪಗಳ ಪರಂಪರೆ ಕ್ಷೀಣಿಸುತ್ತಿದೆ. ಆದ್ದರಿಂದ, ಜನರನ್ನು ಮತ್ತೆ ಗೂಡು ದೀಪಗಳತ್ತ ಆಕರ್ಷಿಸುವಂತೆ ಮಾಡುವ ಪ್ರಯತ್ನ ಮಂಗಳೂರಿನಲ್ಲಿ ನಡೆದಿದೆ. ಇದಕ್ಕಾಗಿ ಗೂಡು ದೀಪ ರಚನೆ ಮಾಡುವ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ.
ಸಾಂಪ್ರಾದಾಯಿಕ ಸೊಗಡನ್ನು ಪ್ರೇರೇಪಿಸುವ ಹಾಗು ಗೂಡು ದೀಪ ರಚಿಸುವ ಪರಂಪರೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಮಂಗಳೂರಿನ ನಮ್ಮಕುಡ್ಲ ಸಂಸ್ಥೆ ಕಳೆದ 19 ವರ್ಷಗಳಿಂದ ಗೂಡು ದೀಪ ರಚನೆ ಮಾಡುವ ಸ್ಪರ್ಧೆ ಏರ್ಪಡಿಸುತ್ತಿದೆ. ಶ್ರೀ ಕ್ಷೇತ್ರ ಗೋಕರ್ಣ ನಾಥೇಶ್ವರ ದೇವಾಲಯದ ಆವರಣದಲ್ಲಿ ಪ್ರತಿ ವರ್ಷ ಈ ಗೂಡು ದೀಪ ಸ್ಪರ್ಧೆ ಏರ್ಪಡಿಸಲಾಗುತ್ತದೆ.
ಪಾರಂಪರಿಕ, ಆಧುನಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಈ ಗೂಡು ದೀಪ ರಚಿಸುವ ಸ್ಪರ್ಧೆ ನಡೆಯಿತು. ಗೂಡು ದೀಪ ಸ್ಪರ್ಧೆಯಲ್ಲಿ ಸಾಂಪ್ರದಾಯಿಕ, ಆಧುನಿಕ ಶೈಲಿ, ಮಾದರಿ ಎಂಬ ಮೂರು ವಿಭಾಗಗಳಲ್ಲಿ ಗೂಡುದೀಪಗಳ ಸ್ಪರ್ಧೆ ನಡೆಯಿತು.. ಸಾಂಪ್ರಾದಾಯಿಕ ವಿಭಾಗದಲ್ಲಿ ಧಾನ್ಯ ಕಾಳುಗಳು, ತರಕಾರಿ, ತೆಂಗಿನ ಗರಿ, ಹೂವಿನ ,ರುದ್ರಾಕ್ಷಿ, ಹರಳು, ಬಳೆ, ಬಿದಿರು, ಕಸೂತಿ ಕಲೆಯ ವೈಶಿಷ್ಟ್ಯಗಳನ್ನೊಳಗೊಂಡ ವಿಶಿಷ್ಟ ಗೂಡು ದೀಪಗಳು ಪ್ರದರ್ಶನಗೊಂಡವು. ಪ್ರತಿಯೊಂದು ವಿಭಾಗದಲ್ಲೂ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಗೂಡುದೀಪಗಳಿಗೆ ಚಿನ್ನದ ಪದಕ ಹಾಗೂ ತೃತೀಯ ಸ್ಥಾನ ಪಡೆದ ಗೂಡುದೀಪಗಳಿಗೆ ಬೆಳ್ಳಿಯ ಪದಕ ಬಹುಮಾನವಾಗಿ ನೀಡಲಾಯಿತು.
ಜಾನಪದ ಕಲೆ ಉಳಿಸುವ ಪ್ರಯತ್ನ ಜಾಗತೀಕರಣ ಮತ್ತು ವಿದೇಶಿ ಸಂಸ್ಕೃತಿಯ ದಾಳಿಯಲ್ಲಿ ಸಾಂಪ್ರಾದಾಯಿಕ ಮತ್ತು ಜನಪದೀಯ ಕಲೆ ಮತ್ತು ಸಂಸ್ಕೃತಿ ಮೂಲೆ ಗುಂಪಾಗುತ್ತಿವೆ. ಇಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಅಲ್ಪ ಪ್ರಮಾಣದಲ್ಲಿ ಜನರನ್ನು ಮೂಲ ಸಂಸ್ಕೃತಿಯೆಡೆಗೆ ಸೆಳೆಯುವಲ್ಲಿ ಸ್ಥಳಿಯ ಸಂಘ ಸಂಸ್ಥೆಗಳು ಯಶಸ್ವಿಯಾಗುತ್ತಿವೆ.
Comments are closed.