ಕಲಬುರಗಿ: ಮಾಜಿ ಸಚಿವ, 371ಜೆ ವಿಧಿ ತಿದ್ದುಪಡಿ ಜಾರಿ ಹೋರಾಟಗಾರ ವೈಜನಾಥ ಪಾಟೀಲ್ ಅವರು ಇಂದು ಬೆಳಗ್ಗೆ 6 ಗಂಟೆಯ ಸುಮಾರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ರಾಮಕೃಷ್ಣ ಹೆಗಡೆ ಸಂಪುಟದಲ್ಲಿ 1984ರಲ್ಲಿ ತೋಟಗಾರಿಕೆ ಹಾಗೂ ಎಚ್. ಡಿ. ದೇವೆಗೌಡ ಸಂಪುಟದಲ್ಲಿ 1994ರಲ್ಲಿ ನಗರಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಹೈದರಾಬಾದ್ ಕರ್ನಾಟಕ ಈಗಿನ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪಾಟೀಲ್ ರ ಮನಸ್ಸು ಸದಾ ಮಿಡಿಯುತ್ತಿತ್ತು. ಈ ಭಾಗದ ಅಭಿವೃದ್ಧಿ ಗಾಗಿ ವಿಶೇಷ ಸ್ಥಾನಮಾನ ಕಲ್ಪಿಸುವ 371 ಜೆ ವಿಧಿ ಜಾರಿಗೆ ಆಗ್ರಹಿಸಿ ಎರಡು ದಶಕಗಳ ಹಿಂದೆ ಧ್ವನಿ ಎತ್ತಿ ಅವರು ಹೋರಾಟ ರೂಪಿಸಿದ್ದರು.
371 ಜೆ ವಿಧಿ ಜಾರಿಯಲ್ಲದೇ ಕಲ್ಯಾಣ ಕರ್ನಾಟಕ ಭಾಗಕ್ಕೆ ಏನಾದರೂ ಅನ್ಯಾಯವಾದರೆ ತಕ್ಷಣವೇ ಸರಕಾರದ ಗಮನ ಸೆಳೆಯುತ್ತಿದ್ದ ವೈಜನಾಥ ಪಾಟೀಲ್ ಅವರು ತಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದವರಾಗಿದ್ದಾರೆ. ಎಂಎಸ್ಐಎಲ್ ಮಾಜಿ ಅಧ್ಯಕ್ಷ ಡಾ. ವಿಕ್ರಮ್ ಪಾಟೀಲ್, ಜಿಲ್ಲಾ ಪಂಚಾಯತ್ ಸದಸ್ಯ ಗೌತಮ ಪಾಟೀಲ್ ಸೇರಿ ಮೂವರು ಪುತ್ರರು, ಪತ್ನಿ ಹಾಗೂ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ರವಿವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Comments are closed.