ಕರ್ನಾಟಕ

ನ 9ರಂದು 9 ಸಾಧಕರಿಗೆ ‘ದೂರದರ್ಶನ ಚಂದನ ಪ್ರಶಸ್ತಿ’ ಪ್ರಧಾನ

Pinterest LinkedIn Tumblr

ಬೆಂಗಳೂರು: ದೂರದರ್ಶನ ಕೇಂದ್ರ ಬೆಂಗಳೂರು ಕಳೆದ ಏಳು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ‘ದೂರದರ್ಶನ ಚಂದನ ಪ್ರಶಸ್ತಿ’ ನೀಡುತ್ತಾ ಬಂದಿದ್ದು, ಈ ಬಾರಿಯೂ ಸಹ ವಿವಿಧ ವಿಭಾಗಗಳ 9 ಸಾಧಕರಿಗೆ ಪ್ರಶಸ್ತಿ ಘೋಷಿಸಿದೆ.

ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದ ದಕ್ಷಿಣ ವಲಯ ದೂರದರ್ಶನದ ಹೆಚ್ಚುವರಿ ಮಹಾನಿರ್ದೇಶಕ ಡಾ.ರಾಜ್ ಕುಮಾರ್ ಉಪಾಧ್ಯಾಯ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಶನಿವಾರ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿಯೂ ಅರ್ಹರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

ಸಂಗೀತ ವಿಭಾಗದಲ್ಲಿ – ಮೈಸೂರು ಡಾ‌.ಜಿ.ಎನ್.ನಾಗಮಣಿ ಶ್ರೀನಾಥ್, ನೃತ್ಯ- ಶ್ರೀದೇವಿ ಉನ್ನಿ, ಕೃಷಿ-ಹನುಮಂತಪ್ಪ ಭೀಮಪ್ಪ ಮಡ್ಲೂರ್, ನಾಟಕ- ಸಾಂಬಶಿವ ದಳವಾಯಿ, ಕಿರುತೆರೆ- ಎಂ.ಎಸ್.ನರಸಿಂಹಮೂರ್ತಿ, ಕ್ರೀಡೆ- ಕು‌.ಸಬಿಯಾ ಎಸ್, ಶಿಕ್ಷಣ- ಶಿವಪ್ಪ ಕುಬೇರ, ಜಾನಪದ- ಪಾರವ್ವ ಲಚ್ಚಪ್ಪ ಲಮಾಣಿ ಅವರಿಗೆ ಪ್ರಶಸ್ತಿ ಸಂದಿದೆ ಎಂದರು.

ನ 9 ರ ಶನಿವಾರ ಸಂಜೆ 6 ಕ್ಕೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ದೂರದರ್ಶನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪ್ರಶಸ್ತಿ ವಿತರಣೆ ಸಮಾರಂಭ ನಡೆಯಲಿದ್ದು, ರಾಜ್ಯಪಾಲ ವಜೂಭಾಯ್ ವಾಲಾ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ, ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ್, ಜಸ್ಟೀಸ್ ವಿಶ್ವನಾಥ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು‌.

ಇದೇ ಸಂದರ್ಭದಲ್ಲಿ ನಿರುಪಮಾ ರಾಜೇಂದ್ರ ಅವರ ತಂಡದಿಂದ ಕಲಾ ವೈಭವ, ಸವಿತಕ್ಕ ಸಂಗಡಿಗರಿಂದ ಜನಪದ ಸಿರಿನವಿಲು, ಸಮನ್ವಿತ ಶರ್ಮಾ ಮತ್ತು ವೃಂದದವರಿಂದ ಚಿತ್ರ ಚಂದನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ದೂರದರ್ಶನದ ಮಾಧ್ಯಮ ಅಧಿಕಾರಿ ಹಾಗೂ ಕಾರ್ಯಕ್ರಮ ನಿರ್ವಾಹಕ ಎ.ಎಂ. ಮೋಹನ್ ಕುಮಾರ್ ಮಾತನಾಡಿ, ಲೋಕಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಆಯ್ಕೆಗಾಗಿ ಆಯ್ಕೆ ಸಮಿತಿ ರಚಿಸಲಾಗಿತ್ತು. ಒಂದೊಂದು ವಿಭಾಗಕ್ಕೂ ಸುಮಾರು 10-15 ಅರ್ಜಿಗಳಂತೆ ಒಟ್ಟು 150 ಅರ್ಜಿಗಳು ಸಲ್ಲಿಕೆಯಾಗಿದ್ದವು. ತಜ್ಞರ ಸಮಿತಿ ಆಯ್ಕೆ ಮಾಡಿದ ಶಿಫಾರಸ್ಸು ಅಂಗೀಕರಿ ಪರಿಶೀಲಿಸಿ ಒಂಭತ್ತು ವಿಭಾಗಕ್ಕೆ ಅರ್ಹ ಗಣ್ಯರನ್ನು ಉನ್ನತ ಸಮಿತಿ ಆಯ್ಕೆ ಮಾಡಿದೆ ಎಂದರು.

ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್, ನಿವೃತ್ತ ಐಜಿಪಿ ಡಾ. ಅಜಯ್ ಕುಮಾರ್ ಸಿಂಗ್, ಚಲನಚಿತ್ರ ನಟ ಪ್ರಕಾಶ್ ಬೆಳವಾಡಿ, ಸಂಗೀತ ವಿದ್ವಾನ್ ಡಾ. ನರಸಿಂಹಲು ವಡಿವಾಟಿ, ಪತ್ರಕರ್ತೆ ಕೆ.ಎಚ್. ಸಾವಿತ್ರಿ ಅವರನ್ನೊಳಗೊಂಡ ಆಯ್ಕೆ ಸಮಿತಿ ಅರ್ಹರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ದೂರದರ್ಶನ ಕಾರ್ಯಕ್ರಮ ವಿಭಾಗದ ಸಹಾಯಕ ನಿರ್ದೇಶಕಿ ನಿರ್ಮಲಾ ಎಲಿಗಾರ್ ಹಾಗೂ ಸಹಾಯಕ ನಿರ್ದೇಶಕ ಬಿ. ಹುಸೇನ್ ಅವರು ಉಪಸ್ಥಿತರಿದ್ದರು.

Comments are closed.