ನವದೆಹಲಿ (ನ.10): ದೇಶದ ಅತಿ ಹಳೆಯ ವಿವಾದ ಎಂದೇ ಪರಿಗಣಿಸಿದ್ದ ಅಯೋಧ್ಯೆ ಭೂ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ವಿವಾದಿತ ಭೂಮಿ ರಾಮಲಲ್ಲಾಗೆ ನೀಡಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಅಚ್ಚರಿ ಎಂದರೆ, ವಿವಾದ ಇದ್ದಿದ್ದು 2.77 ಎಕರೆ ಜಾಗದ ವಿಷಯಕ್ಕಲ್ಲ. ಬದಲಿಗೆ 0.309 ಎಕರೆ ಜಾಗಕ್ಕೆ ಮಾತ್ರ ಎನ್ನುವ ವಿಚಾರ ಈಗ ಹೊರಬಿದ್ದಿದೆ.
0.309 ಎಕರೆ ಜಾಗದಲ್ಲಿ ರಾಮ ಮಂದಿರ ಇತ್ತು. ಬಾಬ್ರಿ ಮಸೀದಿ ನಿರ್ಮಾಣದ ವೇಳೆ ಇದನ್ನು ನಾಶ ಮಾಡಲಾಗಿದೆ ಎನ್ನುವುದನ್ನು ಕೋರ್ಟ್ ತೀರ್ಪಿನಲ್ಲಿ ಹೇಳಲಾಗಿದೆ.
ತೀರ್ಪಿನ ಮೊದಲ ಪ್ಯಾರಾದಲ್ಲಿ ಈ ವಿಚಾರವನ್ನು ಸ್ಪಷ್ಟವಾಗಿ ಹೇಳಲಾಗಿದೆ. ವಿವಾದದ ಕೇಂದ್ರ ಬಿಂದು ಆಗಿದ್ದು ಕೇವಲ 0.309 ಎಕರೆ ಅಥವಾ 1,500 ಚದರ ಯಾರ್ಡ್ ಬಗ್ಗೆ ಮಾತ್ರ ಎಂದು ಸ್ಪಷ್ಟಪಡಿಸಿದೆ.
“ಎರಡು ಧರ್ಮದವರು 0.309ಎಕರೆ ಜಾಗಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ಎರಡೂ ಧರ್ಮದವರು ಇದು ನಮ್ಮ ಜಾಗ ಎಂದು ವಾದ ಮಂಡಿಸಿದ್ದರು,” ಎಂದು ಕೋರ್ಟ್ 1045 ಪುಟಗಳ ತೀರ್ಪಿನ ಆರಂಭದಲ್ಲೇ ಹೇಳಿದೆ.
ಅಯೋಧ್ಯೆ ವಿಚಾರವಾಗಿ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಈ ವೇಳೆ ಕೆಲ ಮಾಧ್ಯಮಗಳು ವಿವಾದಿತ ಪ್ರದೇಶ 2.77 ಎಕರೆ ಎಂದು ಉಲ್ಲೇಖ ಮಾಡಿದ್ದವಂತೆ. ಇದಾದ ನಂತರ ಎಲ್ಲ ಕಡೆಗಳಲ್ಲೂ 2.77 ಎಕರೆ ಎಂದೇ ಉಲ್ಲೇಖ ಮಾಡುತ್ತಾ ಬರಲಾಯಿತು ಎಂದು ಕೆಲ ವಕೀಲರು ಹೇಳುತ್ತಾರೆ.
ಹಿಂದುಗಳ ಪರವಾಗಿ ವಾದ ಮಂಡಿಸಿದ ವಿಷ್ಣು ಜೈನ್ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. “ರಾಮ ಮಂದಿರ ನಿರ್ಮಾಣಕ್ಕೆ ಕೋರ್ಟ್ ನೀಡಿದ್ದು 0.309 ಎಕರೆ ಜಾಗ ಮಾತ್ರವೇ ಹೊರತು 2.77 ಎಕರೆ ಅಲ್ಲ. ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಈ ವಿಚಾರವನ್ನು ಸ್ಪಷ್ಟವಾಗಿ ಹೇಳಲಾಗಿದೆ. ಅಲಹಾಬಾದ್ ಹೈಕೋರ್ಟ್ ತೀರ್ಪಿನ ನಂತರ 2.77 ಎಕರೆ ಎನ್ನುವ ವಿಚಾರ ಜನರ ತಲೆಯಲ್ಲಿ ಕೂತಿದೆ,” ಎಂದರು.
Comments are closed.