ನವದೆಹಲಿ: ಹಾಸ್ಟೆಲ್ ಶುಲ್ಕವನ್ನು ಶೇ.400 ರಷ್ಟು ಹೆಚ್ಚಿಸುತ್ತಿರುವುದನ್ನು ವಿರೋಧಿಸಿ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ (ಜೆ ಎನ್ ಯು) ದ ವಿದ್ಯಾರ್ಥಿಗಳು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ಜೆಎನ್ ಯು ವಿದ್ಯಾರ್ಥಿ ಸಂಘದ ನೂರಾರು ಕಾರ್ಯಕರ್ತರು ಇಂದು ವಿವಿ ಎದುರಿಗಿನ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ವಿವಿ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯಿಂದಾಗಿ ಈ ಪ್ರದೇಶದಲ್ಲಿನ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ(ಎಐಸಿಟಿಇ) ಆವರಣದಲ್ಲಿ ಇಂದು ವಿವಿಯ ಮೂರನೇ ಘಟಿಕೋತ್ಸವ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೊಖ್ರಿಯಾಲ್ ಅವರು ಭಾಗವಹಿಸಿದ್ದರು, ಈ ಬಗ್ಗೆ ಮಾಹಿತಿ ಹೊಂದಿದ್ದ ವಿದ್ಯಾರ್ಥಿಗಳು ಘಟಿಕೋತ್ಸವ ನಡೆಯುತ್ತಿದ್ದ ಸ್ಥಳ ಪ್ರವೇಶಿಸಲು ಯತ್ನಿಸಿದರು. ಆದರೆ ವಿದ್ಯಾರ್ಥಿಗಳನ್ನು ತಡೆದ ದೆಹಲಿ ಪೊಲೀಸರು, ಪ್ರತಿಭಟನಾಕಾರರನ್ನು ಚದುರಿಸಲು ಜಲ ಫಿರಂಗಿ ಬಳಸಿದ್ದಾರೆ.
ಪೊಲೀಸರು ಜಲಫಿರಂಗಿ ಬಳಸಿ ವಿದ್ಯಾರ್ಥಿಗಳನ್ನು ಹಿಮ್ಮೆಟ್ಟಿಸಲು ಯತ್ನಿಸಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ವಿವಿ ಎದುರು ರಸ್ತೆ ತಡೆ ಮಾಡಿ ಪ್ರತಿಭಟನೆಗೆ ಮುಂದಾದರು ಎನ್ನಲಾಗಿದೆ.
Comments are closed.