ರಾಷ್ಟ್ರೀಯ

ಮದುವೆಗೆ ಮುಂಚಿನ ದಿನದ ರಿಸೆಪ್ಶನ್‌ ವೇಳೆ ಬಂದ `ಕವರ್‌’ನಿಂದ ನಿಂತುಹೋದ ಮದುವೆ…!: ಇದರ ಹಿಂದೆ `ಆಕೆ’ಯ ಕೈಚಳಕ…!

Pinterest LinkedIn Tumblr


ಚೆನ್ನೈ : ಮನೆಯವರು ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈಗ ಆ ಜೋಡಿ ದಂಪತಿಗಳಾಗುತ್ತಿದ್ದರು. ಆದರೆ, ಮದುವೆಗೆ ಮುಂಚಿನ ದಿನದ ರಿಸೆಪ್ಶನ್‌ ವೇಳೆ ಬಂದ `ಕವರ್’ ಮದುವೆಯನ್ನೇ ಮುರಿದು ಹಾಕಿತ್ತು.

ವರನ ಕುಟುಂಬಸ್ಥರ ಕೈ ಸೇರಿತ್ತು ಕವರ್…!
ಇದು ನಡೆದದ್ದು ಚೆನ್ನೈನ ಅಯನಾವರಂನಲ್ಲಿ. ಶನಿವಾರ ಅದೊಂದು ಕಲ್ಯಾಣ ಮಂಟಪದಲ್ಲಿ ಮದುವೆಗೆ ಮುಂಚಿನ ದಿನದ ಆರತಕ್ಷತೆ ನಡೆಯುತ್ತಿತ್ತು. ಮರುದಿನ ಮದುವೆ ನಡೆಯಬೇಕಾಗಿತ್ತು. ಹೀಗಾಗಿ, ಸಂಬಂಧಿಕರೆಲ್ಲಾ ಬಂದಿದ್ದರು. ಆದರೆ, ಆವತ್ತು ಒಂದು ಕವರ್ ವರನ ಕುಟುಂಬಸ್ಥರ ಕೈ ಸೇರಿತ್ತು. ಜೊತೆಗೆ, ವರನ ಮೊಬೈಲ್ ಫೋನಿಗೂ ಒಂದಷ್ಟು ಫೋಟೋ, ವಿಡಿಯೋಗಳು ಬಂದಿದ್ದವು. ಅದನ್ನು ತೆರೆದು ನೋಡಿದಾಗ ಸಂಬಂಧಿಕರಿಗೆ ಶಾಕ್ ಆಗಿತ್ತು. ಅಲ್ಲಿದ್ದದ್ದು ವಧು ಇನ್ನೊಂದು ಯುವಕನೊಂದಿಗೆ ಇದ್ದ ಫೋಟೋ ಮತ್ತು ವಿಡಿಯೋ. ಇದನ್ನು ನೋಡುತ್ತಿದ್ದಂತೆಯೇ ವರ ಮತ್ತು ಆತನ ಮನೆಯವರು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದರು. ಈ ವಿಚಾರದಲ್ಲಿ ದೊಡ್ಡ ಗಲಾಟೆಯೇ ನಡೆದಿತ್ತು.

ವಧುವಿನ ತಂದೆಯಿಂದ ದೂರು
ಇತ್ತ, ಮದುವೆ ಮುರಿದು ಬೀಳುತ್ತಿದ್ದಂತೆಯೇ ವಧುವಿನ ತಂದೆ ಎಂಜಿಆರ್ ನಗರ ಪೊಲೀಸರಿಗೆ ದೂರು ಕೊಟ್ಟಿದ್ದರು. ಈ ಫೋಟೋ ಬಂದಿದ್ದು ಎಲ್ಲಿಂದ ಮತ್ತು ಕಳಿಸಿದ್ದು ಯಾರು ಎಂದು ಪತ್ತೆ ಹಚ್ಚಿವಂತೆ ಇವರು ಪೊಲೀಸರಿಗೆ ಮನವಿ ಮಾಡಿದ್ದರು. ಜೊತೆಗೆ, ವರನ ಕುಟುಂಬಸ್ಥರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.

ಬಯಲಾಯಿತು `ಆಕೆ’ಯ ಸಂಚು…!
ಇತ್ತ ದೂರು ಸ್ವೀಕರಿಸಿದ ಪೊಲೀಸರು ತನಿಖೆಗಿಳಿದಿದ್ದರು. ಜೊತೆಗೆ, ಈ ಫೋಟೋ ಮತ್ತು ವಿಡಿಯೋ ಶೇರ್ ಆದ ಮೊಬೈಲ್ ಫೋನ್ ನಂಬರನ್ನು ಸಂಗ್ರಹಿಸಿದರು. ಆಗ ಗೊತ್ತಾಗಿದ್ದು ನೇಸಪಕ್ಕಂ ನಿವಾಸಿ ಈ ಫೋಟೋ ಕಳುಹಿಸಿದ್ದು ಎಂಬ ಸತ್ಯ. ತಕ್ಷಣ ಈತನನ್ನು ಇನ್ನಷ್ಟು ವಿಚಾರಣೆ ಮಾಡಿದಾಗ ಬಯಲಾದ ಸಂಗತಿ ಕೇಳಿ ಹುಡುಗಿ ಮನೆಯವರೇ ದಂಗಾಗಿದ್ದರು…! ಅಸಲಿಗೆ ಈತನಿಗೆ ಫೋಟೋ ಕಳುಹಿಸಲು ಹೇಳಿದ್ದು ಯಾರು ಗೊತ್ತಾ…? ಮದುವೆಗೆ ಸಿದ್ಧವಾಗಿ ಕಲ್ಯಾಣ ಮಂಟಪಕ್ಕೆ ಬರುತ್ತಿದ್ದ ವಧು…! ಹೌದು, ತನಗೆ ಇಷ್ಟವಿಲ್ಲ ಮತ್ತು ಹೆತ್ತವರ ಒತ್ತಾಯಕ್ಕೆ ಒಪ್ಪಿಕೊಂಡ ಈ ಮದುವೆಯನ್ನು ಹೇಗಾದರೂ ಮಾಡಿ ನಿಲ್ಲಿಸಬೇಕೆಂದು ಯೋಚಿಸಿದ್ದ ವಧು, ತನ್ನ ಪ್ರಿಯಕರನಿಗೆ ತಮ್ಮಿಬ್ಬರ ಫೋಟೋ ಮತ್ತು ವಿಡಿಯೋ ಕಳುಹಿಸಿಕೊಡುವಂತೆ ಹೇಳಿದ್ದಳು. ಇಬ್ಬರು ಸೇರಿಯೇ ಈ ಪ್ಲ್ಯಾನ್ ರೂಪಿಸಿದ್ದರು. `ಹುಡುಗಿ ಹೇಳಿದ್ದಕ್ಕೆ ನಾನು ಈ ಫೋಟೋ, ವಿಡಿಯೋ ಕಳುಹಿಸಿದ್ದೆ’ ಎಂದು ಆರೋಪಿ ಪ್ರಿಯಕರ ಒಪ್ಪಿಕೊಂಡಿದ್ದಾನೆ…!

ಇವರಿಬ್ಬರು ಪ್ರೀತಿಸುತ್ತಿದ್ದರಂತೆ. ಈ ವಿಷಯ ಹುಡುಗಿ ಮನೆಯವರಿಗೆ ಗೊತ್ತಾಗಿ ಆಕೆಗೆ ಬೇರೆ ಮದುವೆ ಮಾಡಲು ನಿರ್ಧರಿಸಿದ್ದರಂತೆ. ಹೀಗಾಗಿ, ಮನೆಯವರ ಒತ್ತಾಯಕ್ಕೆ ಮದುವೆಗೆ ಒಪ್ಪಿದ್ದ ಯುವತಿಯೇ ವರನ ಮೊಬೈಲ್ ಫೋನ್ ನಂಬರ್ ಪ್ರಿಯಕರನಿಗೆ ಕೊಟ್ಟು ಫೋಟೋ, ವಿಡಿಯೋಗಳನ್ನು ಕಳುಹಿಸುವಂತೆ ಹೇಳಿದ್ದಳಂತೆ.

ಹೀಗೆ ಸತ್ಯ ಬಯಲಾದ ಬಳಿಕ ಪೊಲೀಸರು ಪ್ರಿಯಕರ ಮತ್ತು ಯುವತಿಗೆ ಬುದ್ಧಿವಾದ ಹೇಳಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಸಂಧಾನದ ಮೂಲಕ ಪ್ರಕರಣ ಇತ್ಯರ್ಥವಾಗಿದ್ದರಿಂದ ಯುವತಿ ತಂದೆ ಕೊಟ್ಟಿದ್ದ ದೂರನ್ನೂ ವಾಪಸ್ ಪಡೆದಿದ್ದಾರೆ.

Comments are closed.