ನವದೆಹಲಿ: ಭಾರತೀಯ ವಾಯುಪಡೆಗೆ (ಐಎಎಫ್) ರಫೇಲ್ ಯುದ್ಧ ವಿಮಾನಗಳ ಖರೀದಿ ಸಂಬಂಧ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ಇದರಿಂದಾಗಿ ಕೇಂದ್ರ ಸರ್ಕಾರ ರಫೇಲ್ ಫೈಟರ್ ಜೆಟ್‍ಗಳ ಖರೀದಿ ವ್ಯವಹಾರದಲ್ಲಿ ಭಾರೀ ಅಕ್ರಮ, ಅವ್ಯವಹಾರಗಳ ಆರೋಪಗಳಿಂದ ಮತ್ತೊಮ್ಮೆ ದೋಷ ಮುಕ್ತವಾದಂತಾಗಿದೆ.
ಫ್ರಾನ್ಸ್‍ನ ಡಾಸೋ ಕಂಪನಿಯಿಂದ 58 ಸಾವಿರ ಕೋಟಿ ಮೊತ್ತದ 36 ರಫೇಲ್ ಯುದ್ಧ ವಿಮಾನಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ಆದರೆ ಕೇಂದ್ರ ಸರ್ಕಾರವನ್ನು ಈ ತೀರ್ಪಿನಿಂದ ದೋಷ ಮುಕ್ತಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ಮರುಪರಿಶೀಲನೆಗೆ ಕೋರಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ಮಾಜಿ ಸಚಿವರಾದ ಯಶ್ವಂತ್ ಸಿನ್ಹಾ ಮತ್ತು ಅರುಣ್‍ಶೌರಿ ಹಾಗೂ ಹಿರಿಯ ವಕೀಲ ಪ್ರಶಾಂತ್‍ಭೂಷಣ್ ಅವರು ಮರು ಪರಿಶೀಲನೆ ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಮೇ 10 ರಂದು ತೀರ್ಪು ಕಾಯ್ದಿರಿಸಿತ್ತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದ ನ್ಯಾಯಮೂರ್ತಿಗಳಾದ ಎಸ್.ಕೆ.ಕೌರ್ ಮತ್ತು ಕೆ.ಎಂ.ಜೋಸೆಫ್ ಅವರನ್ನೊಳಗೊಂಡ ಪೀಠ ಇಂದು ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ.
ಮರುಪರಿಶೀಲನಾ ಅರ್ಜಿಯಲ್ಲಿ ವಾದಿಸಿರುವಂತೆ ಈ ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸಿಕೊಳ್ಳುವ ಅಥವಾ ಮತ್ತೊಮ್ಮೆ ತನಿಖೆ ನಡೆಸುವ ಅಗತ್ಯ ಕಂಡುಬಂದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಇದೇ ವೇಳೆ ಈ ಹಗರಣದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿಕೆಗಳನ್ನು ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ವಿರುದ್ಧ ಹೂಡಲಾಗಿದ್ದ ಮಾನಹಾನಿ ಪ್ರಕರಣಕ್ಕೆ ಸುಪ್ರೀಂಕೋರ್ಟ್ ತೆರೆ ಎಳೆದಿದೆ. ಇನ್ನು ಮುಂದೆ ಹೇಳಿಕೆಗಳನ್ನು ನೀಡುವಾಗ ಅತ್ಯಂತ ಎಚ್ಚರಿಕೆಯಿಂದ ಇರಬೇಕೆಂದು ರಾಹುಲ್‍ಗಾಂಧಿಗೆ ಸುಪ್ರೀಂಕೋರ್ಟ್ ನ್ಯಾಯಪೀಠ ತಾಕೀತು ಮಾಡಿದೆ.
Comments are closed.