ಉಡುಪಿ: ಉಡುಪಿ ಜಿಲ್ಲೆಯನ್ನು ಮಕ್ಕಳ ಸ್ನೇಹಿ ಜಿಲ್ಲೆಯನ್ನಾಗಿ ರೂಪಿಸಲು ಜಿಲ್ಲಾಡಳಿತದೊಂದಿಗೆ, ವಿವಿಧ ಸ್ವಯಂ ಸೇವಾ ಸಂಘಟನೆಗಳು ಸೇರಿದಂತೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ. ಅವರು ಗುರುವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರೋಟರಿ ಉಡುಪಿ ಮತ್ತು ಚೈಲ್ಡ್ ಹೆಲ್ಪ್ಲೈನ್ ಉಡುಪಿ ಸಹಯೋಗದಲ್ಲಿ ವಳಕಾಡು ಪ್ರೌಢಶಾಲೆಯಲ್ಲಿ ನಡೆದ, ಮಕ್ಕಳ ದಿನಾಚರಣೆ ಮತ್ತು ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮಕ್ಕಳ ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದ ಸಮಾಜ ನಿರ್ಮಾಣ ಮಾಡುವ ಮೂಲಕ ಹಾಗೂ ಚೈಲ್ಡ್ ಹೆಲ್ಪ್ ಲೈನ್ ಕಾರ್ಯಗಳಿಗೆ ಎಲ್ಲಾ ರೀತಿಯ ಬೆಂಬಲ ನೀಡುವ ಮೂಲಕ ಜಿಲ್ಲೆಯನ್ನು ಮಕ್ಕಳ ಸ್ನೇಹಿ ಜಿಲ್ಲೆಯಾಗಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದ ದಿನಕರ ಬಾಬು, ಮಕ್ಕಳಿಗೆ ನೀಡುವ ಶಿಕ್ಷಣ ಮಟ್ಟದಲ್ಲಿ ಇನ್ನಷ್ಟು ಸುಧಾರಣೆ ಆಗಬೇಕಿದೆ ಹಾಗೂ ಮಕ್ಕಳಲ್ಲಿನ ಬುದ್ದಿವಂತಿಕೆಯನ್ನು ಬಳಸಿಕೊಳ್ಳಲು ಸೂಕ್ತ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಗದೀಶ್, ಜವಾಹರ ಲಾಲ್ ನೆಹರು ಅವರಿಗೆ ಮಕ್ಕಳ ಬಗೆಗೆ ಹೆಚ್ಚಿನ ಕಾಳಜಿ ಇದ್ದು, ಇಂದಿನ ಮಕ್ಕಳೇ ಮುಂದಿನ ಭಾರತ, ಭಾರತ ಸದೃಢವಾಗಲು ಮಕ್ಕಳನ್ನು ಸದೃಢರನ್ನಾಗಿ ಮಾಡಬೇಕು ಎಂದು ಹೇಳಿದ್ದರು, ಮಕ್ಕಳಿಗೆ ಶಿಸ್ತು ಕಲಿಸುವುದು ಮಾತ್ರವಲ್ಲ ಅವರ ಭಾವನೆಗಳನ್ನು ಅರಿಯುವುದರ ಬಗ್ಗೆ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವವರು ತಿಳಿದಿರಬೇಕು, ಶಿಸ್ತಿನ ಹೆಸರಲ್ಲಿ ಮಕ್ಕಳನ್ನು ಕಟ್ಟಿಹಾಕಬೇಡಿ, ಮಕ್ಕಳ ದಿನಾಚರಣೆ, ಮಕ್ಕಳ ಹುಟ್ಟುಹಬ್ಬದ ದಿನವಾದರೂ ಮಕ್ಕಳಿಗೆ ಅವರ ಇಷ್ಟದ ಉಡುಪು ಧರಿಸಿ ಶಾಲೆಗೆ ಬರಲು ಅವಕಾಶ ನೀಡಿ, ಶಿಕ್ಷಣ ಎಂಬುದು ಮಕ್ಕಳಿಗೆ ಪಠ್ಯ ಮಾತ್ರವಾಗದೇ ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರಲಿ, ಮಕ್ಕಳಲ್ಲಿನ ಕ್ರೀಡಾ ಮತ್ತು ಸಾಂಸ್ಕ್ರತಿಕ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಶಾಲೆಯಲ್ಲಿ ನೀರು ಕುಡಿಯಲು ಬೆಲ್ : ಕೇರಳದಲ್ಲಿ ಮಕ್ಕಳಿಗೆ ನೀರು ಕುಡಿಯಲು ದಿನದಲ್ಲಿ 3 ಬಾರಿ ಶಾಲಾ ಬೆಲ್ ಬಾರಿಸುವ ಪದ್ದತಿ ಇದ್ದು, ಇದರಿಂದ ಮಕ್ಕಳ ಆರೋಗ್ಯದಲ್ಲಿ ಮಹತ್ತರ ಸುಧಾರಣೆಯಾಗಿರುವುದು ಕಂಡು ಬಂದಿದ್ದು, ಮಕ್ಕಳ ಆರೋಗ್ಯದ ದೃಷ್ಠಿಯಿಂದ ಹೆಚ್ಚು ನೀರು ಕುಡಿಯುವುದು ಅಗತ್ಯವಾಗಿದ್ದು, ಉಡುಪಿ ಜಿಲ್ಲೆಯಲ್ಲೂ ಸಹ ಈ ಯೋಜನೆಯನ್ನು ಜಾರಿಗೊಳಿಸುವ ಕುರಿತಂತೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸುವುದಾಗಿ ತಿಳಿಸಿದ ಡಿಸಿ ಜಗದೀಶ್, ಮಕ್ಕಳ ಸುರಕ್ಷತೆ ಮತ್ತು ರಕ್ಷಣೆಗೆ ಸಂಬಂದಿಸಿದಂತೆ ಇಡೀ ಜಿಲ್ಲಾಡಳಿತ ಮಕ್ಕಳೊಂದಿಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಮಾತನಾಡಿ, ಮಕ್ಕಳು ಯಾವುದೇ ಸಮಸ್ಯೆಗೆ ಒಳಗಾದಲ್ಲಿ ಅಥವಾ ಸಮಸ್ಯೆಗಳಿಂದ ಬಳಲುತ್ತಿದ್ದ ಮಕ್ಕಳು ಕಂಡು ಬಂದಲ್ಲಿ ಟೋಲ್ ಪ್ರೀ ಸಂಖ್ಯೆ 1098 ಗೆ ಕರೆ ಮಾಡಿ ನೆರವು ಪಡೆಯುವಂತೆ ತಿಳಿಸಿದರು.
ನಂತರ ಅಧಿಕಾರಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ವಿದ್ಯಾರ್ಥಿನಿ ರಕ್ಷಿತಾ, ವಿವಿಧ ಆಪ್ಗಳ ಮೂಲಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ, ಮತ್ತು ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ಸ್ಥಗಿತಗೊಂಡಿದ್ದು, ಈ ನೆರವನ್ನು ಒಗದಿಸುವಂತೆ ಜಿಲ್ಲಾಧಿಕಾರಿ ಅವರನ್ನು ಕೋರಿದರು.
ವಿವಿಧ ಆಪ್ಗಳಲ್ಲಿ ಪಾಠ ಮಾಡುವ ಹೆಚ್ಚಿನ ಶಿಕ್ಷಕರು ಉಡುಪಿ ಮತ್ತು ದ.ಕ ಜಿಲ್ಲೆಯ ಶಿಕ್ಷಕರೇ ಇದ್ದಾರೆ, ಸರ್ಕಾರಿ ಶಾಲೆಗಳಲ್ಲಿ ಆಪ್ಗಳ ಮೂಲಕ ಭೋದನೆ ವಿಧಾನ ಕುರಿತಂತೆ ಸರ್ಕಾರದ ಮಟ್ಟದಲ್ಲಿ ತೀರ್ಮಾನ ನಡೆಯಬೇಕು ಹಾಗೂ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ಕುರಿತಂತೆ ಹಲವು ಕಡೆಗಳಲ್ಲಿ ಎಸ್.ಡಿ.ಎಂ.ಸಿ.ಗಳ ಮತ್ತು ವಿವಿಧ ಸಿ.ಎಸ್.ಆರ್ ನಿಧಿ ಮೂಲಕ ಕಂಪ್ಯೂಟರ್ ನೀಡಲಾಗುತ್ತಿದೆ, ಉಳಿದಂತೆ ಎಲ್ಲಾ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ನೀಡುವುದು ಸಹ ಸರ್ಕಾರದ ಮಟ್ಟದಲ್ಲಿ ತೀರ್ಮಾನ ನಡೆಯಬೇಕು, ತಾವು ಸಲ್ಲಿಸಿರುವ ಈ ಅಹವಾಲನ್ನು ಶಿಕ್ಷಣ ಇಲಾಖೆ ಮೂಲಕ ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು.
ವಳಕಾಡು ಶಾಲೆಯಲ್ಲಿ 700 ವಿಧ್ಯಾರ್ಥಿಗಳಿದ್ದು, ಒಬ್ಬರೇ ದೈಹಿಕ ಶಿಕ್ಷಕರಿದ್ದಾರೆ ಎಂಬ ಪ್ರಶ್ನೆಗೆ ಹೆಚ್ಚವರಿ ದೈಹಿಕ ಶಿಕ್ಷಕರ ನೇಮಕಕ್ಕೆ ಸೂಚಿಸಲಾಗುವುದು ಎಂದು ಡಿಸಿ ತಿಳಿಸಿದರು.
ತೊಂದರೆಗೆ ಒಳಗಾದ ಮಕ್ಕಳು 1098 ಗೆ ಕರೆ ಮಾಡಲು ಎಲ್ಲಾ ಸಂದರ್ಭದಲ್ಲಿ ಸಾಧ್ಯವಾಗದ ಕಾರಣ ಪ್ರತ್ಯೇಕ ಸಹಾಯವಾಣಿ ಕೇಂದ್ರ ತೆರೆದು ಅಲ್ಲಿಗೇ ತೆರಳಿ ಸಮಸ್ಯೆ ತಿಳಿಸಲು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೇ ಎಂದ ವಿದ್ಯಾರ್ಥಿನಿ ದಿವ್ಯಶ್ರೀ ಪ್ರಶ್ನೆಗೆ ಉತ್ತರಿಸಿದ ಎಸ್.ಪಿ. ನಿಶಾ ಜೇಮ್ಸ್, ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯಲ್ಲಿ ಮಕ್ಕಳ ಸಮಸ್ಯೆ ಆಲಿಸಲು ಅಧಿಕಾರಿ ಮತ್ತು ಮಹಿಳಾ ಸಿಬ್ಬಂದಿ ನೇಮಕ ಮಾಡಿದ್ದು, ಅವರಿಗೆ ಮಕ್ಕಳ ಸಮಸ್ಯೆ ಆಲಿಸುವ ಕುರಿತು ವಿಶೇಷ ತರಬೇತಿಯನ್ನೂ ನೀಡಲಾಗಿದೆ. ಮಕ್ಕಳು ಅವರಲ್ಲಿ ತಮ್ಮ ಸಮಸ್ಯೆ ತಿಳಿಸಿದ್ದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಾಲ್ಯ ವಿವಾಹ ನಿಷೇಧ ಕುರಿತು ಭಿತ್ತಿಪತ್ರವನ್ನು ಎಸ್.ಪಿ. ನಿಶಾ ಜೇಮ್ಸ್ ಬಿಡುಗಡೆಗೊಳಿಸಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಇಲಾಖೆಗಳ ಎಲ್ಲಾ ಅಧಿಕಾರಿಗಳಿಗೆ, ಮಕ್ಕಳ ರಕ್ಷಣೆ ಕುರಿತು ರಕ್ಷಾಬಂಧನವನ್ನು ಶಾಲಾ ಮಕ್ಕಳು ಕಟ್ಟಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀ ಗೆಹಲೋತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಜಿಲ್ಲಾ ಕಾರ್ಮಿಕ ಅಧಿಕಾರಿ ಬಾಲಕೃಷ್ಣ, ಶಿಕ್ಷಣ ಇಲಾಖೆಯ ಜಾಹ್ನವಿ, ಬಾಲ ಕಲ್ಯಾಣ ಸಮಿತಿ ಅಧ್ಯಕ್ಷ ರೋನಾಲ್ಡ್ ಬಿ ಪುರ್ಟಾಡೋ, ಮಾಜಿ ಅಧ್ಯಕ್ಷ ಬಿ.ಕೆ ನಾರಾಯಣ ಉಪಸ್ಥಿತರಿದ್ದರು.
ಉಡುಪಿ ರೋಟರಿ ಅಧ್ಯಕ್ಷ ಜನಾರ್ಧನ ಭಟ್ ಸ್ವಾಗತಿಸಿದರು. ಚೈಲ್ಡ್ ಹೆಲ್ಪ್ಲೈನ್ನ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು, ವಳಕಾಡು ಶಾಲೆಯ ಮುಖ್ಯೋಪಧ್ಯಾಯಿನಿ ನಿರ್ಮಲಾ ವಂದಿಸಿದರು.
Comments are closed.