ಹೈದರಾಬಾದ್: 7 ವರ್ಷದ ಬಾಲಕನನ್ನು ಅಪಹರಿಸಿ 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ 10ನೇ ಕ್ಲಾಸ್ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೈದ್ರಾಬಾದ್ನ ಮೀರ್ ಪೇಟ್ ನಲ್ಲಿ ಘಟನೆ ನಡೆದಿದ್ದು, ದೂರು ದಾಖಲಾದ 4 ಗಂಟೆಯಲ್ಲಿಯೇ ಪೊಲೀಸರು ಪ್ರಕರಣವನ್ನು ಬೇಧಿಸಿ, ಏಳರ ಪೋರನನ್ನು ರಕ್ಷಿಸಿದ್ದಾರೆ. ಹಣ ನೀಡಲು ಪೋಷಕರು ಒಪ್ಪದಿದ್ದಾಗ ಬಾಲಕ ಅರ್ಜುನನ್ನು ಕೊಲ್ಲುವುದಾಗಿ ಅಪ್ರಾಪ್ತ ಬೆದರಿಕೆ ಹಾಕಿದ್ದಾನೆ.
ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಪಿಎಸ್ಆರ್ ಕಾಲೋನಿಯ ನಿವಾಸಿ ಅರ್ಜುನ್ ಭಾನುವಾರ ಮಧ್ಯಾಹ್ನ 2.30ರ ಸುಮಾರಿಗೆ ತನ್ನ ಸ್ನೇಹಿತನೊಂದಿಗೆ ಆಟವಾಡುತ್ತಿದ್ದನು. 10ನೇ ತರಗತಿ ವಿದ್ಯಾರ್ಥಿ ಆಡುತ್ತಿದ್ದ ಅರ್ಜುನನ್ನು ನೋಡಿದ್ದಾನೆ. ತಕ್ಷಣವೇ ಬಾಲಕನ್ನು ಅಪಹರಿಸಿ ಅವರ ಕುಟುಂಬಸ್ಥರ ಬಳಿ ಹಣ ಕೇಳಲು ಪ್ಲಾನ್ ಮಾಡಿಕೊಂಡಿದ್ದನು.
ಮೊದಲು ಆರೋಪಿ ಅಪ್ರಾಪ್ತ, ಅರ್ಜುನ್ ಜೊತೆ ಸ್ನೇಹ ಬೆಳೆಸಿದ್ದು, ನಂತರ ಬಾಲಕನನ್ನು ಅಲ್ಮಾಸ್ಗುಡಾದ ತನ್ನ ನಿವಾಸದ ಬಳಿ ಕರೆದೊಯ್ದು ದೇವಾಲಯದ ಒಳಗೆ ಕುಳಿತುಕೊಳ್ಳುವಂತೆ ಸೂಚಿಸಿದ್ದಾನೆ. ಬಾಲಕನನ್ನು ದೇವಸ್ಥಾನದಲ್ಲಿ ಕೂರಿಸಿಕೊಂಡು ಅರ್ಜುನ್ ತಂದೆ ರಾಜು ಅವರಿಗೆ ಕರೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.
ಮಾತನಾಡುವ ವೇಳೆ ತನ್ನ ಧ್ವನಿಯನ್ನು ಬದಲಾಯಿಸಲು ಯತ್ನಿಸಿದ್ದು, ನಂತರ 3 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಯಾವುದೇ ಕಾರಣಕ್ಕೂ ಪೊಲೀಸರನ್ನು ಸಂಪರ್ಕಿಸಬೇಡಿ, ನಾನು ಹೇಳಿದಷ್ಟು ಮಾಡಿ ಎಂದು ಆವಾಜ್ ಹಾಕಿದ್ದಾನೆ. ಅಲ್ಲದೆ ಒಂದು ವೇಳೆ ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ನಿಮ್ಮ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಾಹಿತಿ ನೀಡಿದರು.
ಇದಕ್ಕೆ ಅರ್ಜುನ್ ತಂದೆ ರಾಜು ಮಗನ ಸುರಕ್ಷತೆಗಾಗಿ ಮನವಿ ಮಾಡಿದ್ದು, ಮತುಕತೆ ನಡೆಸಲು ಒಪ್ಪಿಕೊಂಡಿದ್ದಾರೆ. ಅಲ್ಲದೆ ತಮ್ಮ ಬಳಿ ಕೇವಲ 1.5 ಲಕ್ಷ ರೂ. ಮಾತ್ರ ಇದೆ ಎಂದು ತಿಳಿಸಿದ್ದಾರೆ. ಆದರೆ ಅಪ್ರಾಪ್ತ ಇದನ್ನು ಸ್ವೀಕರಿಸಲು ನಿರಾಕರಿಸಿದ್ದಾನೆ. ನಂತರ ರಾಜು ಅವರು 25 ಸಾವಿರ ರೂ. ನಗದು ಹಾಗೂ ಉಳಿದ ಹಣವನ್ನು ಚೆಕ್ ರೂಪದಲ್ಲಿ ನೀಡಲು ಮುಂದಾಗಿದ್ದಾರೆ. ಇದನ್ನು 17 ವರ್ಷದ ಬಾಲಕ ಒಪ್ಪಿಕೊಂಡಿದ್ದಾನೆ ಎಂದು ರಾಚಕೊಂಡ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ರಾಜು, ಮಧ್ಯಾಹ್ನ 3 ಗಂಟೆ ಸುಮಾರಿಗೆ ನಮ್ಮ ಮಗ ಕಾಣೆಯಾಗಿದ್ದಾನೆ ಎಂದು ಅರಿವಾಯಿತು. ಕರೆ ಮಾಡಿದವರು ಹಣ ಕೇಳಿದರು. ನಾನು ಒಪ್ಪಿಕೊಳ್ಳದಿದ್ದರೆ ಅರ್ಜುನ್ ಎಂದಿಗೂ ಮನೆಗೆ ಹಿಂದಿರುಗುವುದಿಲ್ಲ ಎಂದು ಹೇಳಿದರು. ಹೀಗಾಗಿ ನಾವು ಭಯಭೀತರಾದೆವು. ನಂತರ ನಾವು ಮೀರ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆವು ಎಂದು ವಿವರಿಸಿದರು.
ದೂರು ದಾಖಲಾದ ನಾಲ್ಕು ಗಂಟೆಗಳಲ್ಲಿ ಪೊಲೀಸರು ಅಪ್ರಾಪ್ತ ಆರೋಪಿ ಇದ್ದ ಸ್ಥಳವನ್ನು ಪತ್ತೆ ಹಚ್ಚಿದರು. ನಂತರ ಅಪ್ರಾಪ್ತ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಅರ್ಜುನನ ತಂದೆಯಿಂದ ಹಣ ಸಂಗ್ರಹಿಸಿಕೊಳ್ಳಲು ಬಂದಾಗ ಅಪ್ರಾಪ್ತ ಆರೋಪಿಯನ್ನು ಹಿಡಿದಿದ್ದೇವೆ ಎಂದು ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಾಗವತ್ ಹೇಳಿದ್ದಾನೆ. ಅಪ್ರಾಪ್ತ ಆರೋಪಿ ಅಪರಾಧದ ಇತಿಹಾಸ ಹೊಂದಿದವನಾಗಿದ್ದಾನೆ. ಈ ಹಿಂದೆ ಈತ ತನ್ನ ನೆರೆಯವರಿಂದ 1 ಲಕ್ಷ ರೂ.ಕದ್ದಿದ್ದ ಎಂದು ತಿಳಿದು ಬಂದಿದೆ.
ಅಪ್ರಾಪ್ತನಿಗೆ 17 ವರ್ಷ ವಯಸ್ಸಾಗಿದ್ದು, ನಾವು ಬಾಲಾಪರಾಧಿ ನ್ಯಾಯ ಮಂಡಳಿಯನ್ನು ಸಂಪರ್ಕಿಸುತ್ತೇವೆ. ಬಂಧಿತ ಆರೋಪಿಯನ್ನು ನಿಯಮಿತ ಅಪರಾಧಿ ಎಂದು ಪರಿಗಣಿಸುವಂತೆ ಮನವಿ ಮಾಡುತ್ತೇವೆ. 2015ರ ಬಾಲಾಪರಾಧಿ ನ್ಯಾಯ(ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯಡಿ ಇದಕ್ಕೆ ಅವಕಾಶವಿದೆ. 16 ಮತ್ತು 17 ವರ್ಷದವರು ಅಪಹರಣ, ಕೊಲೆ ಹಾಗೂ ಅತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲಿ ಅಪರಾಧಿಗಳಾದಾಗ ನಿಯಮಿತ ಅಪರಾಧಿಗಳು ಎಂದು ಪರಿಗಣಿಸಲಾಗಿದೆ ಎಂದು ಮಹೇಶ್ ಭಾಗವತ್ ಮಾಹಿತಿ ನೀಡಿದರು.
Comments are closed.