ರಾಷ್ಟ್ರೀಯ

ಪುತ್ರಿಗೆ ವಿದ್ಯುತ್ ಶಾಕ್ ನೀಡಿ, ಕತ್ತು ಸೀಳಿದ!

Pinterest LinkedIn Tumblr


ಲಕ್ನೋ: ಉತ್ತರಪ್ರದೇಶದ ಆಗ್ರಾದಲ್ಲಿ ಮರ್ಯಾದಾ ಹತ್ಯೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಪಕ್ಕದ ಮನೆಯ ಯುವಕನ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ತನ್ನ 22 ವರ್ಷದ ಮಗಳನ್ನು ತಂದೆಯೇ ಕ್ರೂರವಾಗಿ ಕೊಂದಿದ್ದಾನೆ.

ಆರೋಪಿ ಹರಿವಾನ್ಶ್ ಕುಮಾರ್ ತನ್ನ ಮಗಳು ಪೂಜಾ ಸಿಂಗ್ ಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಘಟನೆ ಮಧ್ಯರಾತ್ರಿ 1.15ರ ಸುಮಾರಿಗೆ ಸಲೇಂಪುರ್ ಖುಟಿಯಾನಾ ಗ್ರಾಮದಲ್ಲಿ ನಡೆದಿದೆ. ಪೂಜಾ ಸ್ನಾತಕೋತ್ತರ ಪದವೀಧರೆಯಾಗಿದ್ದು, ಐವರು ಮಕ್ಕಳಲ್ಲಿ ಮೊದಲನೇ ಹಾಗೂ ಒಬ್ಬಳೇ ಮಗಳಾಗಿದ್ದಳು.

ತನ್ನ ಮಗಳು ಪಕ್ಕದ ಮನೆಯ ಯುವಕನ ಜೊತೆ ಶನಿವಾರ ಹಾಗೂ ಭಾನುವಾರದ ಮಧ್ಯರಾತ್ರಿ ಮಾತನಾಡುತ್ತಿರುವುದನ್ನು ತಂದೆ ನೋಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಆತ, ಮಗಳಿಗೆ ಮೊದಲು ವಿದ್ಯುತ್ ಶಾಕ್ ನೀಡಿ ಬಳಿಕ ಹರಿತವಾದ ಆಯುಧದಿಂದ ಆಕೆಯ ಕತ್ತು ಸೀಳಿದ್ದಾನೆ. ಬಳಿಕ ಪೊಲೀಸರಿಗೆ ತಾನೇ ಮಾಹಿತಿ ನೀಡಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಹರಿವಾನ್ಶ್ 100 ನಂಬರಿಗೆ ಕರೆ ಮಾಡಿ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ಮಾಹಿತಿ ತಿಳಿದ ತಕ್ಷಣವೇ ಗ್ರಾಮೀಣ ಎಸ್ ಪಿ ರಾಜೇಶ್ ಕುಮಾರ್, ಓಂ ಪ್ರಕಾಶ್ ಸಿಂಗ್ ಹಾಗೂ ಗಿರೀಶ್ ಚಂದ್ರ ಗೌತಮ್ ಪೊಲೀಸರ ತಂಡ ಘಟನಾ ಸ್ಥಳಕ್ಕೆ ದೌಡಾಯಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಗ ಯೋಗೇಶ್ ತಂದೆಯ ವಿರುದ್ಧ ದೂರು ದಾಖಲಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಹರಿವಾನ್ಶ್ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಪ್ರಕರಣ ದಾಖಲಿಸಿಕೊಂಡು ಪೊಲೀಸರು ಜೈಲಿಗಟ್ಟಿದ್ದಾರೆ. ಇತ್ತ ಪೂಜಾಳ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ.

ಈ ಬಗ್ಗೆ ಮಾತನಾಡಿದ ಪೊಲೀಸರು, ಇದೊಂದು ಮರ್ಯಾದಾ ಹತ್ಯೆಯಾಗಿದೆ. ಯುವಕನ ಜೊತೆ ಸಂಬಂಧ ಹೊಂದಿದ್ದಕ್ಕಾಗಿ ಸಿಟ್ಟಿನಿಂದ ಮಗಳನ್ನು ಕೊಲೆ ಮಾಡಿದ್ದಾನೆ. ಆರೋಪಿ ಮನೆಯ ಪಕ್ಕದಲ್ಲೇ ಯುವಕ ವಾಸವಾಗಿದ್ದಾನೆ ಎಂದು ತಿಳಿಸಿದ್ದಾರೆ.

ಗಿರೀಶ್ ಚಂದ್ರ ಗೌತಮ್ ಮಾತನಾಡಿ, ತನಿಖೆಯ ವೇಳೆ ಆರೋಪಿ ಕೊಲೆಯ ಬಗ್ಗೆ ವಿವರಿಸಿದ್ದಾನೆ. ಮೊದಲು ಮಗಳಿಗೆ ವಿದ್ಯುತ್ ಶಾಕ್ ನೀಡಿ ನಂತರ ಹರಿತವಾದ ಆಯುಧದಿಂದ ಆಕೆಯ ಕತ್ತು ಸೀಳಿರುವುದಾಗಿ ತಿಳಿಸಿದ್ದಾನೆ. ಹೀಗಾಗಿ ಕೊಲೆಗೆ ಬಳಸಿದ ಆಯುಧವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಯುವತಿಯ ತಾಯಿ ಹಾಗೂ ಮೂವರು ಸಹೋದರರು ಹರಿಯಾಣದ ಗುರುಗ್ರಾಮದಲ್ಲಿ ನೆಲೆಸಿದ್ದಾರೆ. ಮತ್ತೋರ್ವ ಸಹೋದರ ಕೂಡ ಬೇರೆ ಮನೆ ಮಾಡಿ ಸಮೀಪದಲ್ಲಿಯೇ ವಾಸವಾಗಿದ್ದಾನೆ. ತಂದೆ ಹಾಗೂ ಮಗಳು ಒಟ್ಟಿಗೆ ಇದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಯುವತಿ ನೆಲೆಸಿರುವ ಮನೆಯ ಹತ್ತಿರ ಯುವಕ ಬಂದು ಆಕೆಯನ್ನು ಭೇಟಿಯಾಗುತ್ತಿದ್ದನು. ಹೀಗೆ ಭೇಟಿಯಾಗಿ ಮಾತುಕತೆ ನಡೆಸುತ್ತಿರುವುದನ್ನು ಯುವತಿಯ ತಂದೆ ಗಮನಿಸಿದ್ದಾನೆ. ಅಲ್ಲದೆ ಯುವಕ ಜೊತೆ ಮಾತನಾಡಿ ಮನೆಗೆ ವಾಪಸ್ ಬಂದು ತನ್ನ ಕೋಣೆಗೆ ಹೋಗುತ್ತಿದ್ದಾಗ ಆಕೆಯನ್ನು ಹಿಡಿದೆಳೆದ ತಂದೆ ಮೊದಲು ವಿದ್ಯುತ್ ಶಾಕ್ ನೀಡಿದ್ದಾನೆ. ನಂತರ ಆಕೆಯ ಕತ್ತು ಸೀಳಿದ್ದಾನೆ ಎಂದು ತಿಳಿದುಬಂದಿದೆ.

ಯುವತಿ ಮತ್ತು ಯುವಕ ಒಂದೇ ಜಾತಿಯವರಾಗಿದ್ದರು. ಒಟ್ಟಿನಲ್ಲಿ ಉತ್ತರಪ್ರದೇಶದಲ್ಲಿ ಕಳೆದ 18 ತಿಂಗಳಲ್ಲಿ ನಡೆದ ಮರ್ಯಾದಾ ಹತ್ಯೆಯಲ್ಲಿ ಪೂಜಾ 23ನೇ ಸಂತ್ರಸ್ತೆಯಾಗಿದ್ದಾಳೆ ಎಂಬುದಾಗಿ ವರದಿಯಾಗಿದೆ.

Comments are closed.