ಹೊಸದಿಲ್ಲಿ: ದೇಶದಲ್ಲಿ ಆರೋಗ್ಯ ಸೇವೆಗಳ ಕ್ರೋಢೀಕರಣ ಮತ್ತು ಆರೋಗ್ಯ ವೆಚ್ಚ ಕಡಿತಗೊಳಿಸುವ ಮೂಲಕ ಗುಣಮಟ್ಟದ ಆರೋಗ್ಯ ಸೇವೆ ಲಭ್ಯತೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ನೀತಿ ಆಯೋಗ ಸಲಹೆ ಮಾಡಿದೆ.
ಭಾರತದಲ್ಲಿ 21ನೇ ಶತಮಾನದ ಆರೋಗ್ಯ ವ್ಯವಸ್ಥೆ ನಿರ್ಮಾಣ ಕುರಿತ ವರದಿಯಲ್ಲಿ ನೀತಿ ಆಯೋಗ, ಆರೋಗ್ಯ ಸೇವೆಗಳ “ತಂತ್ರ ಗಾರಿಕೆ ಖರೀದಿ” ಮತ್ತು “ಅಪಾಯ ಸಾಧ್ಯತೆ”ಯನ್ನು ಒಗ್ಗೂಡಿಸುವ ಪ್ರಸ್ತಾವವನ್ನು ಮುಂದಿಟ್ಟಿದೆ. ಆರೋಗ್ಯ ಸೇವಾ ಕ್ಷೇತ್ರದಲ್ಲಿ ಗಣನೀಯ ಸುಧಾರಣೆ ತರುವ ನಿಟ್ಟಿನಲ್ಲಿ ಆರೋಗ್ಯ ದಾಖಲೆಗಳ ಡಿಜಿಟಲೀಕರಣಕ್ಕೂ ಪ್ರಸ್ತಾವಿಸಿದೆ.
ಭವಿಷ್ಯದ ಆರೋಗ್ಯ ವ್ಯವಸ್ಥೆ ಬಗ್ಗೆ ನಾಲ್ಕು ಪ್ರಮುಖ ಅಂಶಗಳ ಬಗ್ಗೆ ಗಮನ ಕೇಂದ್ರೀಕರಿಸಲು ಉದ್ದೇಶಿಸಲಾಗಿದೆ. ಅಪೂರ್ಣ ಸಾರ್ವ ಜನಿಕ ಆರೋಗ್ಯ ಕಾರ್ಯಸೂಚಿಗೆ ಪೂರೈಕೆ, ನಾಗರಿಕರು ಆರೋಗ್ಯ ಸೇವೆಗಳ ಉತ್ತಮ ಖರೀದಿ ಮಾಡಲು ಅನುವಾಗುವಂತೆ ಸಶಕ್ತ ಗೊಳಿಸುವುದು, ಆರೋಗ್ಯ ಸೇವೆಗಳ ಕ್ರೋಢೀಕರಣದ ಮೂಲಕ ಜೇಬಿನಿಂದ ಸಾರ್ವಜನಿಕರು ಮಾಡುವ ವೆಚ್ಚವನ್ನು ಕಡಿತಗೊಳಿಸುದು ಹಾಗೂ ಆರೋಗ್ಯ ದಾಖಲೆಗಳ ಡಿಜಿಟಲೀಕರಣ ಈ ನಾಲ್ಕು ಅಂಶಗಳು.
ಈ ವರದಿಯನ್ನು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರು ಬಿಲ್ ಮತ್ತು ಮಿಲಿಂದಾ ಗೇಟ್ಸ್ ಫೌಂಡೇಷನ್ ಸಹ ಅಧ್ಯಕ್ಷ ಬಿಲ್ ಗೇಟ್ಸ್ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು. ಪ್ರಸ್ತುತ ಇರುವ ಸಾರ್ವಜನಿಕ ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ಮಧ್ಯಮ ವರ್ಗಕ್ಕೆ ಆರೋಗ್ಯ ಸುರಕ್ಷೆ ಇಲ್ಲದ ಹಿನ್ನೆಲೆಯಲ್ಲಿ ಆರೋಗ್ಯ ಸೇವಾ ಸೌಲಭ್ಯವನ್ನು ಈ ವರ್ಗಕ್ಕೂ ವಿಸ್ತರಿಸುವ ವ್ಯವಸ್ಥೆ ಆರಂಭಿಸಲು ಆಯೋಗ ಗಂಭೀರ ಚಿಂತನೆ ನಡೆಸಿದೆ.
ಭಾರತದಲ್ಲಿ ಸಾರ್ವಜನಿಕ ಆರೋಗ್ಯ ವೆಚ್ಚ ಜಿಡಿಪಿಯ ಶೇಕಡ 1.4ರಷ್ಟಾಗಿದ್ದು, ಕೇವಲ ಶೇಕಡ 20ರಷ್ಟು ಮಂದಿಗೆ ಆರೋಗ್ಯ ವಿಮಾ ಸುರಕ್ಷೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಜೇಬಿನಿಂದ ಮಾಡುವ ವೆಚ್ಚವೇ ಅಧಿಕವಾಗಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ಈ ವಿಮಾಸುರಕ್ಷೆಯನ್ನು ವಿಸ್ತರಿಸಲು ಉದ್ದೇಶಿಸಿದ್ದರೂ, ಇದಕ್ಕೆ ಹೆಚ್ಚಿನ ಕಾಲಾವಕಾಶ ಮತ್ತು ಸಂಪನ್ಮೂಲ ಬೇಕಾಗುತ್ತದೆ.
Comments are closed.