ಕರಾವಳಿ

‘ಗುರುತಿಸುವಿಕೆಯಿಂದ ಸಾಧನೆ ಅರಳುವುದು’: ಭಾಸ್ಕರ ರೈ ಕುಕ್ಕುವಳ್ಳಿ

Pinterest LinkedIn Tumblr

ಪಣಿಯೂರು ಕರುಣಾಕರ ಶೆಟ್ಟಿ ಮತ್ತು ದಯಾನಂದ ಕತ್ತಲ್ಸಾರ್ ಅವರಿಗೆ ಅಭಿನಂದನೆ

ಮಂಗಳೂರು: ‘ ಅದೃಷ್ಟ ಮತ್ತು ಪರಿಶ್ರಮ ಪರಸ್ಪರ ಮೇಳವಿಸಿದಾಗ ಸ್ಥಾನ ಮಾನಗಳು ತಾವಾಗಿ ಹುಡುಕಿಕೊಂಡು ಬರುತ್ತವೆ. ಆದರೆ ಸಾಧನೆ ಎಂಬುದು ಅಷ್ಟಕ್ಕೇ ಮುಗಿಯುವುದಿಲ್ಲ. ಜನ ಗುರುತಿಸುವುದರಿಂದ ಅದು ಮತ್ತಷ್ಟು ಅರಳುವುದು’ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರುಣಾಕರ ಶೆಟ್ಟಿ ಪಣಿಯೂರು ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಅವರಿಗೆ ಬಿಜೈ ಕೆಎಸ್ಸಾರ್ಟಿಸಿ ಬಳಿಯ ಸುರಭಿ ಸಭಾಂಗಣದಲ್ಲಿ ಜರಗಿದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

‘ಸೇವಾ ಕಾರ್ಯಗಳ ಮೂಲಕ ಸಮಾಜದ ಋಣವನ್ನು ತೀರಿಸುವ ಛಲ ಸಾಧಕರಿಗೆ ಇರಬೇಕು . ಇದರಿಂದ ಮಾನ – ಸನ್ಮಾನಗಳಿಗೆ ನೈಜ ಅರ್ಥಬರುತ್ತದೆ’ ಎಂದವರು ನುಡಿದರು. ಚೇಳಾಯರು ಕಂಡೇವು ಗಡಿಕಾರ ಆದಿತ್ಯ ಮುಕ್ಕಾಲ್ದಿ ಅವರು ಮಾತನಾಡಿ ‘ತುಳುನಾಡಿನ ಜಾನಪದ, ದೈವಾರಾಧನೆ ಮತ್ತು ಯಕ್ಷಗಾನದಂತಹ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಸಮಾಜದಿಂದ ನ್ಯಾಯೋಚಿತ ರೀತಿಯಲ್ಲಿ ಮನ್ನಣೆ ಸಲ್ಲಬೇಕು’ ಎಂದರು.

ಯಕ್ಷಗಾನ, ಹೋಟೆಲ್ ಉದ್ಯಮ ಹಾಗೂ ಸಾಮಾಜಿಕ ರಂಗದಲ್ಲಿ ವಿಶಿಷ್ಟ ಸೇವೆಗೈದ ಹಿನ್ನೆಲೆಯಲ್ಲಿ ಈ ಬಾರಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕರುಣಾಕರ ಶೆಟ್ಟಿ ಪಣಿಯೂರು ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ನೂತನ ಅಧ್ಯಕ್ಷರಾಗಿ ನಿಯುಕ್ತಿಗೊಂಡ ತುಳುವ ಬೊಳ್ಳಿ ದಯಾನಂದ ಜಿ. ಕತ್ತಲ್ಸಾರ್ ಅವರನ್ನು ಜಿಲ್ಲಾ ದೈವಾರಾಧಕ ಸಂಘದ ವತಿಯಿಂದ ಗಣ್ಯರು ಸನ್ಮಾನಿಸಿದರು. ಸನ್ಮಾನಿತರಿಬ್ಬರು ತಮಗೆ ಸಂದ ಗೌರವಕ್ಕೆ ಪ್ರತಿಯಾಗಿ ಕೃತಜ್ಞತೆ ಸಲ್ಲಿಸಿದರು. ಉದ್ಯಮಿ ಅಶೋಕ ಮಾಡ ಕುದ್ರಾಡಿಗುತ್ತು ಮತ್ತು ಪಡುಬಿದ್ರಿ ಬಾಲುಪೂಜಾರಿ ಮನೆ ಮೋಹನ ಪೂಜಾರಿಯವರು ಅತಿಥಿಗಳಾಗಿ ಉಪಸ್ಥಿತರಿದ್ದರು. ಪಣಿಯೂರು ಗುತ್ತು ಗಡಿಕಾರರಾದ ಯೋಗೀಶ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ದೈವಾರಾಧಕ ಬಳಗದ ಪದ್ಮನಾಭ ಪಂಬದ ಮೊಯಿಲೊಟ್ಟು ಸ್ವಾಗತಿಸಿದರು . ಕಟಪಾಡಿ ವೆಂಕಟರಮಣ ದೇವಸ್ಥಾನದ ಅರ್ಚಕ ಜಗನ್ನಾಥ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Comments are closed.